ಕುಮಟಾ : ಜಗತ್ತಿನಲ್ಲಿ ಜೀವಿಸುವವರು ಹಲವರು ಇರುತ್ತಾರೆ. ಬದುಕುವವರು ಕೆಲವೇ ಕೆಲವರು ಮಾತ್ರ. ನಮ್ಮೊಳಗಿನ ಸ್ಪುರಣೆಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡುವವನು ನಿಜವಾಗಿ ಬದುಕುವವನು. ಉಳಿದವನು ಸಾಮಾನ್ಯವಾಗಿ ಜೀವಿಸುವುದು ಮಾತ್ರ ಎಂದು ಡಾ.‌ಎ.ವಿ ಬಾಳಿಗಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಮಹೇಶ ಅಡ್ಕೋಳಿಯವರು ಹೇಳಿದರು. ಬುಧವಾರ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಕನ್ನಡ ಚಂದ್ರಮ ಉತ್ತರ ಕನ್ನಡವು ಪ್ರಕಾಶಿಸಿದ ನಾಡಿನ ಪ್ರತಿಭಾನ್ವಿತ ಕವಿ ಗಣಪತಿ ಕೊಂಡದಕುಳಿಯವರ ಚತುರ್ಥ ಕೃತಿ  “ದೇವದೀಪ” ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಬದುಕಿನ ಕಷ್ಟಗಳನ್ನು ನೋವುಗಳನ್ನು ನುಂಗಿ ಬದುಕಿದ ಗಣಪತಿ ಹೆಗಡೆ ಕೊಂಡದಕುಳಿಯವರು ಜೀವಕ್ಕೆ ಬೇಕಾದ ಹಿತನುಡಿಗಳನ್ನು ತಮ್ಮ ಮುಕ್ತಕಗಳ ಮೂಲಕ ಬರೆದಿದ್ದಾರೆ. ಹಾಗಾಗಿ ಈ ಪುಸ್ತಕ ದೇವ ದೀಪ ಎಂಬುದಕ್ಕಿಂತಲೂ ‘ಜೀವ ದೀಪ’ ಎಂದು ಉಲ್ಲೇಖ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಾಡಿನಲ್ಲಿ ಉರಿವ ಬೆಂಕಿಯ ಜೊತೆಗೆ ಗಾಳಿ ಗೆಳೆತನ ಬೆಳೆಸುತ್ತದೆ, ಚಿಕ್ಕ ದೀಪವನ್ನು ಗಾಳಿ ನಂದಿಸುತ್ತದೆ. ದುರ್ಬಲರೊಡನೆ ಯಾರು ಗೆಳೆತನ ಮಾಡುತ್ತಾರೆ ಎಂಬ ಮಾತನ್ನೂ ಕಾವ್ಯಾತ್ಮಕವಾಗಿ ಕವಿ ಜನರಿಗೆ ತಲುಪಿಸಿದ್ದಾರೆ ಎಂದು ಅವರು ಕನ್ನಡದ ಹಲವಾರು ಉದಾಹರಣೆಗಳೊಂದಿಗೆ ಗಣಪತಿ ಹೆಗಡೆಯವರ ಬರಹವನ್ನು ತಾಳೆಹಾಕಿದರು.

RELATED ARTICLES  ಜನಾರ್ಧನ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆ.

ದೇವದೀಪದಲ್ಲಿ ಬರೆದ ಹಲವು ಮುಕ್ತಕಗಳನ್ನು ಉಲ್ಲೇಖಿಸಿ, ಅರ್ಥಾಂತರ ನ್ಯಾಸದ ಕುರಿತಾಗಿ ವಿವರಿಸಿದರು. ತಪ್ಪೋ ಒಪ್ಪೋ ಬೆಪ್ಪರಂತೆ ಬಿದ್ದಿರುವುದಕ್ಕಿಂತ ವಿಭಿನ್ನವಾದುದನ್ನು ಸಾಧಿಸಲು ಹೊರಡುವ ನಾವುಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಗಣಪತಿ ಹೆಗಡೆಯವರ ಮುಕ್ತಕಗಳು ಗಾದೆಯಂತಾಗಿ ಜನರ ಮನಸ್ಸಿನಲ್ಲಿ ಉಳಿಯುವಂತಾಗಲಿ ಎಂದು ಅವರು ಹಾರೈಸಿ, ದೀರ್ಘ ಕಾವ್ಯ ಬರಹದತ್ತ ಮುಂದಾಗುವಂತೆ ಅವರು ಕೃತಿಕಾರಿಗೆ ಸೂಚನೆ ನೀಡಿದರು.

ಕೃತಿಕಾರ ಗಣಪತಿ ಹೆಗಡೆ ಮಾತನಾಡಿ ನಾನು ಕಲಾವಿದ ಆಗಬೇಕು, ಉಪನ್ಯಾಸಕನಾಗಬೇಕು ಎಂಬೆಲ್ಲಾ ಕನಸು ಕಂಡಿದ್ದೆ ಆದರೆ ಎದುರಾದ ಸಮಸ್ಯೆಗಳಿಂದ ಕನಸು ನನಸಾಗಲಿಲ್ಲ. ಬರವಣಿಗೆ ನನ್ನ ಕನಸಿನಲ್ಲಿಯೂ ಇರಲಿಲ್ಲ. ಪತ್ನಿ ಕಮಲಾ ಕೊಂಡದಕುಳಿ ಬರೆಯುತ್ತಿದ್ದರು ಅವರಿಂದ ಪ್ರೇರಣೆ ಪಡೆದು ನಾನು ಬರವಣಿಗೆ ಪ್ರಾರಂಭಸಿದೆ. ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಕರೆತಂದ ವಿ.ಗ ನಾಯಕ ಅವರನ್ನು ಸ್ಮರಿಸಿದರು. 

ಹಿರಿಯ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಹಾಗೂ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಅವರು ಅಭ್ಯಾಗತರಾಗಿ ವೇದಿಕೆಯಲ್ಲಿದ್ದು, ಪುಸ್ತಕದ ಕುರಿತಾಗಿ ಹಾಗೂ ಕೃತಿಕಾರರ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ರೋಟರಿ ಕ್ಲಬ್‌ನ ಅಧ್ಯಕ್ಷರಾದ ಎನ್. ಆರ್. ಗಜು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

RELATED ARTICLES  ಆಶ್ರಮ ಎಂದರೆ ಆಧ್ಯಾತ್ಮಿಕ ಆಶ್ರಯ ಸ್ಥಳ : ನಿಶ್ಚಲಾನಂದನಾಥ ಸ್ವಾಮೀಜಿ

ಕನ್ನಡ ಚಂದ್ರಮದ ಸಂಸ್ಥಾಪಕ ಗೌರವಾಧ್ಯಕ್ಷ ಮಂಜುನಾಥ ಗಾಂವ್ಕರ್ ಬರ್ಗಿ ಆಶಯ ನುಡಿಗಳನ್ನಾಡಿ ರಸವತ್ತಾದ ಅಂಶಗಳನ್ನು ಕಿಂಚಿತ್ತೂ ಲೋಪವಿಲ್ಲದೆ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಗಣಪತಿ ಕೊಂಡದಕುಳಿಯವರು ನಿಜವಾಗಿಯೂ ಸಾಹಿತ್ಯದ ಗಣಿ ಎಂದರು. ಉದಯೋನ್ಮುಖ ವಾಗ್ಮಿ ವಿಷ್ಣು ಪಟಗಾರ ಕೃತಿ ಪರಿಚಯಿಸಿ ಕೃತಿ ಸಮರಸದಿಂದ ಕೂಡಿದ ಕೃತಿ ಇದು ಎಂದು ಬಣ್ಣಿಸಿದರು. ಮುಕ್ತಕ, ಚುಟುಕು, ಕವನ, ಕಥನ ಕವನ ಸೇರಿ ಒಟ್ಟೂ ೫೦೩ ಕವನಗಳನ್ನು ಇದರಲ್ಲಿ ಅಡಕ ಮಾಡಲಾಗಿದೆ ಎಂದು ವಿವರಿಸಿದರು.  

ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು. ಕಿಶೋರ ಕೊಂಡದಕುಳಿ ಪ್ರಾರ್ಥನೆಗೈದರು. ಶ್ರೇಯಾ ಹೆಗಡೆ ನಾಡಗೀತೆ ಹಾಡಿದರು. ಕಮಲಾ ಕೊಂಡದಕುಳಿ ಸರ್ವರನ್ನೂ ವಂದಿಸಿದರು. ರವೀಂದ್ರ ಭಟ್ಟ ಸೂರಿ ಕೃತಿಕಾರರ ಮುಕ್ತಕಗಳನ್ನೇ ಬಳಸಿ ಕಾರ್ಯಕ್ರಮ ನಿರೂಪಿಸಿ ಗಮನ ಸೆಳೆದರು.