ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘ, ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ ಹಾಗೂ ಭಟ್ಕಳ ಪೇಂಟಿಂಗ್ ಕಾರ್ಮಿಕರ ಸಂಘ ಈ ಮೂರು ಪ್ರಮುಖ ತಾಲೂಕಿನ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಸೇರಿ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಮಾನ್ಯ ಶ್ರೀ ಮಂಕಾಳ್ ಎಸ್. ವೈದ್ಯರವರಿಗೆ ಭಟ್ಕಳದ ಸಚಿವರ ಕಛೇರಿಯಲ್ಲಿ ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.

ನಕಲಿ ಕಾರ್ಡ್ ಹೊಂದಿರುವವರು ಮತ್ತು ಮಧ್ಯವರ್ತಿಗಳಿಂದ ನಿಜವಾದ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಆಗುತ್ತಿರುವ ವಂಚನೆಗಳ ಕುರಿತು ಉಲ್ಲೇಖಿಸಿ ಕಾರ್ಮಿಕರ ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ಪತ್ರದಲ್ಲಿ ತಿಳಿಸಿರುತ್ತಾರೆ.

ನಮ್ಮ ಭಟ್ಕಳ ತಾಲೂಕಿನ ಕಾರ್ಮಿಕ ನಿರೀಕ್ಷಕರ ವೃತ್ತದಲ್ಲಿ ನಕಲಿ ಕಾರ್ಮಿಕ ಕಾರ್ಡ ಹೊಂದಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿಬಾರಿ ಸರಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಬರುವ ಸೌಲಭ್ಯಗಳಾದ ಕಾರ್ಮಿಕರ ಟೂಲ್ ಕಿಟ್, ಶಾಲಾ ಮಕ್ಕಳ ಕಿಟ್, ಮೆಡಿಕಲ್ ಕಿಟ್, ಕಾರ್ಮಿಕರ ಮಕ್ಕಳಿಗೆ ಸಿಗುವ ಲ್ಯಾಪ್ ಟಾಪ್ ಮತ್ತು ಟ್ಯಾಬ್ ಮುಂತಾದವು ಯಾವುದೂ ಕೂಡ ನಿಜವಾದ ಬಡಕಾರ್ಮಿಕರಿಗೆ ದೊರಕುತ್ತಿಲ್ಲ. ಬಡ ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆಯಲು ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿ ಹಾಗೂ ನಮ್ಮ ಸಂಘದ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಕೂಡ ಈ ಸೌಲಭ್ಯಗಳು ನಕಲಿ ಕಾರ್ಮಿಕ ಕಾರ್ಡ್ ಹೊಂದಿದವರು, ಮಧ್ಯವರ್ತಿಗಳು ಹಾಗೂ ಅವರ ಅವಲಂಬಿತರ ಕೈ ಸೇರುತ್ತದೆಯೇ ಹೊರತು ನಿಜವಾದ ಕಾರ್ಮಿಕರಿಗೆ ಸಿಗದೇ ಬಹಳಷ್ಟು ಅನ್ಯಾಯವಾಗುತ್ತಿದೆ.

RELATED ARTICLES  ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳದ ಕಾಲೇಜು ವಾರ್ಷಿಕೋತ್ಸವ ಮತ್ತು ಪದವಿ ದಿನಾಚರಣೆ ಸಂಪನ್ನ.

ಇದಕ್ಕೆಲ್ಲಾ ಮೂಲ ಕಾರಣ ತಾಲೂಕಿನಲ್ಲಿ ದಿನನಿತ್ಯ ಕಾರ್ಯ ನಿರ್ವಹಿಸುವ ಅಧಿಕೃತ ಕಾರ್ಮಿಕ ನಿರೀಕ್ಷಕರು ಇಲ್ಲದೇ ಇರುವುದಾಗಿದೆ. ಈಗ ಇರುವ ಕಾರ್ಮಿಕ ನಿರೀಕ್ಷಕರು ಮೂರು ತಾಲೂಕನ್ನು ನೋಡಿಕೊಳ್ಳುತ್ತಿರುವುದರಿಂದ ಇಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದು ಅವರಿಗೂ ಕೂಡ ಕಷ್ಟವಾಗಿರುತ್ತದೆ. ಹಾಗಾಗಿ ಖಾಯಂ ಆಗಿ ನಮ್ಮ ಭಟ್ಕಳ ತಾಲೂಕಿನಲ್ಲಯೇ ಕಾರ್ಯ ನಿರ್ವಹಿಸುವಂತ ಒಬ್ಬ ಕಾರ್ಮಿಕ ನಿರೀಕ್ಷಕರ ಅವಶ್ಯಕತೆ ಇರುತ್ತದೆ.
ಇಲ್ಲದೇ ಹೋದರೆ ಕೆಲವು ಅನಧಿಕೃತ ಸೈಬರ್ ಸೆಂಟರ್ ಗಳು, ನಕಲಿ ಕಾರ್ಮಿಕ ಸಂಘಗಳು ಹಣದ ಆಸೆಗಾಗಿ ಕಟ್ಟಡ ಕಾರ್ಮಿಕರಲ್ಲದವರಿಗೆ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಕೊಡುತ್ತಿರುವದು ಬಹಳಷ್ಟು ಹೆಚ್ಚಾಗುತ್ತದೆ. ಇವರುಗಳಿಂದ ಕಾರ್ಮಿಕ ಇಲಾಖೆಯ ಯೋಜನೆಗಳಾದ ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ ಹಾಗೂ ಶೈಕ್ಷಣಿಕ ಸಹಾಯಧನ ಮುಂತಾದವುಗಳನ್ನು ನಕಲಿ ಕಾರ್ಮಿಕ ಕಾರ್ಡಗಳನ್ನು ಪಡೆದ ನಿಜವಾದ ಕಾರ್ಮಿಕರಲ್ಲದವರೂ ಕೂಡ ಇಂತಹ ಸರಕಾರದ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ಕಾರ್ಮಿಕರಿಗೆ ನಷ್ಟವಾಗುತ್ತಿರುವುದಲ್ಲದೇ ಸರ್ಕಾರದ ಹಣವೂ ಕೂಡ ಪೋಲಾಗುತ್ತಿದೆ. ಹಲವು ಬಾರಿ ಕಾರ್ಮಿಕರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಗಳ ಗಮನಕ್ಕೆ ತಂದರೂ ಇದುವರೆಗೂ ಕೂಡ ಅವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕಾರ್ಮಿಕ ಸಂಘಟನೆಗಳು ಸೇರಿ ಹೋರಾಟ ಮಾಡಲೂ ಕೂಡ ನಿರ್ಧರಿಸಿರುತ್ತೇವೆ.

RELATED ARTICLES  ಗ್ಯಾರೇಜಿಗೆ ನುಗ್ಗಿದ ಕಳ್ಳರು ನಗದು, ಮೊಬೈಲ್ ದೋಚಿ ಪರಾರಿ.

ಹಾಗಾಗಿ ದಯಮಾಡಿ ತಾವು ಈ ನಕಲಿ ಕಾರ್ಡಗಳು , ಮಧ್ಯವರ್ತಿಗಳು ಹಾಗೂ ಕೆಲವು ಅನಧಿಕೃತ ಸೈಬರ್ ಸೆಂಟರ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಿಜವಾದ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕೆಂದು ತಮ್ಮ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

ಮನವಿ ಪತ್ರ ಸ್ವೀಕರಿಸಿದ ಸಚಿವರು, ಇನ್ನು ಹದಿನೈದು ದಿನದೊಳಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಭಟ್ಕಳಕ್ಕೆ ಕರೆಯಿಸಿ ತಮ್ಮೆದುರೇ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಸುಬ್ರಾಯ ನಾಯ್ಕ, ಶಿವರಾಮ ಹೊನ್ನೆಗದ್ದೆ, ರಾಮ ಹೆಬಳೆ, ಬಾಬು ನಾಯ್ಕ, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಮಾದೇವ ಗೊಂಡ, ಮಾರುತಿ ನಾಯ್ಕ, ರಮೇಶ ಗಾಂಧಿನಗರ, ಕೃಷ್ಣ ನಾಯ್ಕ, ಮೋಹನ ನಾಯ್ಕ, ಪೇಂಟಿಂಗ್ ಸಂಘದ ಕಾರ್ಯದರ್ಶಿ ಮಂಜುನಾಥ ಗೊಂಡ ಹಾಗೂ ಮೂರು ಸಂಘದ ಇನ್ನಿತರ ಸದಸ್ಯರುಗಳು ಕೂಡ ಹಾಜರಿದ್ದರು.

ವರದಿ: ರಾಮ ಹೆಬಳೆ, ಶೇಡಬರಿ, ಭಟ್ಕಳ