ಕುಮಟಾ : ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದ ವರೆಗೆ ಹಮ್ಮಿಕೊಂಡ ಪಾದಯಾತ್ರೆಯನ್ನು ಕುಮಟಾದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು, ಮಹಾಸತಿ ದೇವಾಲಯದ ಮುಂಭಾಗದಲ್ಲಿ ಸಭೆ ನಡೆಸಿ ಜನತೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದವರೆಗೆ ಜಿಲ್ಲೆಯ ಜನರಿಗಾಗಿ ಪಾದಯಾತ್ರೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆಯವರ ಕೆಲಸ ಪುಣ್ಯದ ಕೆಲಸ, ಇವರ ದಿಟ್ಟತನ ಮೆಚ್ಚಲೇಬೇಕು. ಇಂತಹ ಕೆಲಸವನ್ನು ನಾವೆಲ್ಲರೂ ಬೆಂಬಲಿಸಬೇಕು ಎಂದು ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದರು.

ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಮಾಡುವುದು ಸುಲಭದ ಮಾತಲ್ಲ. ಅನಂತಮೂರ್ತಿ ಹೆಗಡೆ ಒಂದು‌ ದಿಟ್ಟ ನಿರ್ಧಾರ ಮಾಡಿದ್ದಾರೆ. ನಮಗೊಂದು ಆಸ್ಪತ್ರೆ ಬೇಕು. ಈ ಕೆಲಸ ಯಾರಿಂದಾದರೂ ಆಗಲಿ, ಆದರೆ ಒಂದು ಒಳ್ಳೆಯ ಕೆಲಸ ಆಗಿ ಜನರಿಗೆ ಅನಕೂಲವಾಗಲಿ. ನಮ್ಮ‌‌ ನಿಮ್ಮೆಲ್ಲರ ಪರವಾಗಿ ಅನಂತಮೂರ್ತಿ ಹೆಗಡೆ ಹೋರಾಟ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆಯ ಜನಪ್ರತಿನಿಧಿಗಳ ಹಾಗೆ ನಾವೆಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಆಸ್ಪತ್ರೆ ಸ್ಥಾಪನೆಗೆ ಒಗ್ಗಟ್ಟು ಪ್ರದರ್ಶನ ಮಾಡೋಣ. ಯಾವ ಸರ್ಕಾರ ಮಾಡಿದರೇನು ಒಟ್ಟಿನಲ್ಲಿ ಆಸ್ಪತ್ರೆಯಾಗಿ ಜನರಿಗೆ ಅನುಕೂಲ ಆಗಲಿ, ಕಾಂಗ್ರೆಸ್ ಸರ್ಕಾರ ಆಸ್ಪತ್ರೆ ನೀಡುವ ಗ್ಯಾರಂಟಿ ನೀಡಲಿ ಎಂದರು.

RELATED ARTICLES  ಹರಿದಾಸ ಪಿ.ಎನ್ ಹೆಗಡೆ ಇನ್ನಿಲ್ಲ: ಹೃದಯಾಘಾತದಲ್ಲಿ ಕೊನೆಯುಸಿರೆಳೆದ ಕಲಾವಿದ!

ನಂತರ ಮಾತನಾಡಿದ ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ ಹಿಂದಿನ‌ ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ಜಾಗವನ್ನು ಪರಿಶೀಲನೆ‌ಮಾಡಿತ್ತು. ನಂತರ ಬಿಜೆಪಿ‌ ಸರ್ಕಾರ ಅಧಿಕಾರ ಕಳೆದುಕೊಂಡಿತು ಮುಂದೆ ಹಣವು ಕೂಡ ಬಿಡುಗಡೆಯಾಗಿಲ್ಲ. ಮುಂದೆ ಯಾವುದೇ ಪ್ರಕ್ರಿಯೆಯೂ ಮುಂದುವರೆಯಲಿಲ್ಲ. ಶಾಸಕರು ಮಾಡಿದ ಎಲ್ಲಾ ಪ್ರಯತ್ನ ವ್ಯರ್ಥವಾಗಿದೆ. ಎಲ್ಲಿಯಾದರೂ ಕೂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನೆಡೆಯಬೇಕು ಎಂದರೆ ಅಲ್ಲಿ ಮೆಡಿಕಲ್ ಕಾಲೇಜು ಇರಬೇಕು. ಕಾಲೇಜು ಇಲ್ಲ ಎಂದರೆ ವೈದ್ಯಾಧಿಕಾರಿಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಗಲೇಬೇಕು ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟನ್ನು ತೋರಿಸಬೇಕು ಎಂದರು.

ಕುಮಟಾದ ಹಿರಿಯ ವಕೀಲ ಆರ್. ಜಿ. ನಾಯ್ಕ ಮಾತನಾಡುತ್ತಾ, ಅನಂತಮೂರ್ತಿ ಹೆಗಡೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರಿಗೆ ದೇವರು ಶಕ್ತಿ ನೀಡಲಿ, ಈ ಆಸ್ಪತ್ರೆ ವಿಚಾರವಾಗಿ ತಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಿ ಎಂದು ಶಾಸಕ ದಿನಕರ ಶೆಟ್ಟಿ ಅವರಿಗೆ ಸೂಚನೆ ನೀಡಿದ ಅವರು. ಉಸ್ತುವಾರಿ ಸಚಿವರು ಒಂದು ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲಿ ಎಂದರು.

RELATED ARTICLES  ಮೀನುಗಾರರಿಗೆ ಕೊರೋನಾ ಲಸಿಕಾಕರಣ ನಾಳೆ

ಈ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತ, ಗ್ರಾ.ಪಂ ಅಧ್ಯಕ್ಷ ಆನಂದು ಕವರಿ, ಮೋಹಿನಿ ಗೌಡ, ಉದಯ ನಾಯ್ಕ ಸೇರಿದಂತೆ ತಾಲೂಕಿನ ಆಟೋ ಚಾಲಕರು, ಮಾಲಕರು, ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಕುಮಟಾದಿಂದ ದಿವಗಿ ಮೂಲಕ ಸಾಗಿದ ಪಾದಯಾತ್ರೆಗೆ ಮಿರ್ಜಾನನಲ್ಲಿ ಭವ್ಯ ಸ್ವಾಗತ‌ನೀಡಿ ಅಲ್ಲಿನ‌ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸ್ಥಳೀಯರು ಪಾದಯಾತ್ರೆಗೆ ಬೆಂಬಲ ನೀಡಿದರು. ರವಿವಾರ ತಾಲೂಕಿನ ಬರ್ಗಿಯಲ್ಲಿ‌ ತಂಗಿರುವ ಪಾದಯಾತ್ರಿಗಳು ಸೋಮವಾರ ತಮ್ಮ ಪಾದಯಾತ್ರೆ ಮುನ್ನಡೆಸುವರು.