ಕುಮಟಾ : ಬೀಜ ಬಿತ್ತನೆಯ ಸಂದರ್ಭದಲ್ಲಿಯೂ ಅವಕ್ರಪೆ ತೋರಿ ಇಳೆಗೆ ಇಳಿಯದಿದ್ದ ವರುಣ, ಇದೀಗ ಮತ್ತೆ ರೈತರ ಬದುಕಿನ ಜೊತೆಗೆ ಆಟವಾಡುತ್ತಿದ್ದಾನೆ. ವರುಣದೇವನ ಕಣ್ಣಾ ಮುಚ್ಚಾಲೆ ಆಟದಲ್ಲಿ ರೈತ ಕಂಗೆಡುತ್ತಿರುವುದಂತೂ ಸತ್ಯ ಎಂಬತ್ತಾಗಿದೆ. ಇದಕ್ಕೆ ಸಾಕ್ಷಿ ಕಳೆದ ಎರಡು ಮೂರು ದಿನದಿಂದ ಸುರಿಯುತ್ತಿರುವ ಅಕಾಲಿಕ ಮಳೆ.  

ಕೊಯ್ಲು ಕಾರ್ಯವನ್ನು ಮುಗಿಸಲು ಗದ್ದೆಗೆ ಇಳಿದಿದ್ದ ರೈತರು ನಗುನಗುತ್ತಲೇ ಗದ್ದೆ ಕೊಯ್ಲು ಮಾಡಿದ್ದರು. ಆದರೆ ಗದ್ದೆ ಕೊಯ್ದು ತೆನೆಯನ್ನು ಗದ್ದೆಯಲ್ಲಿಯೇ ಇಟ್ಟು, ಮುಂದಿನ ಕೊಯ್ಲಿಗೆ ಸಜ್ಜಾಗುತ್ತಿದ್ದ ರೈತರಿಗೆ ಸುರಿಯುತ್ತಿರುವ ಗಾಳಿ ಮಳೆ ಕಣ್ಣೀರು ತರಿಸಿದೆ. ನ.೧ ರಂದು ೨೧.೫ ಮಿ.ಮೀ‌ ಸುರಿದಿದ್ದ ಮಳೆ ಆಗಾಗ ತಾಲೂಕಿನ ಅಲ್ಲಲ್ಲಿ ಸುರಿಯುತ್ತಿತ್ತು‌. ಸೋಮವಾರ ೧೬.೩ ರಷ್ಟು ಮಳೆಯಾಗಿದ್ದು ಜನರು ಕಂಗೆಟ್ಟಿದ್ದಾರೆ. 

RELATED ARTICLES  ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮಹಾಧರಣಿ

ರವಿವಾರ ರಾತ್ರಿ ಏಕಾಏಕಿ ತಾಲೂಕಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಗುಡುಗು ಮಿಂಚಿನ ಜೊತೆಗೆ ಬೀಸಿದ ವೇಗದ ಗಾಳಿಗೆ ರೈತರು ಕ್ಷಣ ಹೊತ್ತು ಕಂಗಾಲಾಗಿದ್ದಾರೆ. ಕೊಯ್ದಿಟ್ಟ ಭತ್ತದ ತೆನೆಗಳು ಮಳೆ ನೀರಿನಲ್ಲಿ ತೋಯುವ ಮಟ್ಟಿಗೆ ಮಳೆಯಾಗಿದೆ. ಗದ್ದೆಗಳಲ್ಲಿ ನೀರು ನಿಂತು ಭತ್ತದ ಕಾಳುಗಳು ನೀರಿನಲ್ಲಿ ಮುಳುಗಿದೆ. ತಾಲೂಕಿನ ಬಹು ಭಾಗಗಳಲ್ಲಿ ಸುರಿದಿರುವ ಮಳೆಗೆ ಗದ್ದೆಯಲ್ಲಿ ಕೊಯ್ದಿಟ್ಟ ತೆನೆ ಪೂರ್ಣ ಒದ್ದೆಯಾಗಿದೆ.

ಇನ್ನು ಕೆಲವೆಡೆ ರವಿವಾರ ರೈತರು ಭತ್ತದ ತೆನೆಗಳನ್ನು ಮನೆಯ ಅಂಗಳಕ್ಕೆ ಸ್ಥಳಾಂತರಿಸಿ ಒಣಗಿಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ ಮೋಡ ಮುಸುಕಿದ ವಾತಾವರಣದಿಂದಾಗಿ ಸೂರ್ಯ ಕಿರಣಗಳು ಸರಿಯಾಗಿ ನೆಲವನ್ನು ಕಾಣದೇ ರೈತರು ನಿರಾಸೆ ಅನುಭವಿಸ ಬೇಕಾಯಿತು. ಇನ್ನೂ ಒಂದೆರಡು ದಿನಗಳ ಕಾಲ ಮತ್ತೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೈತರು ಕೊಯ್ಲು ಕಾರ್ಯವನ್ನು ಮುಂದುವರೆಸಲು ಆಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಗದ್ದೆಯಲ್ಲಿಯೇ ಒಣಗಿದ ಪೈರನ್ನು ಬಿಡುವ ಹಾಗೆಯೂ ಇಲ್ಲ. ಕೊಯ್ಲು ಮಾಡುವ ಹಾಗೆಯೂ ಇಲ್ಲವಾದ ಕಾರಣ ಅನ್ನದಾತ ಕಂಗಾಲಾಗಿದ್ದಾನೆ.

RELATED ARTICLES  ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೃಷಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಅನ್ನದಾತ ಇದೇ ರೀತಿ ವರುಣನ ಅವಕೃಪೆ ಉಂಟಾದರೆ ಬದುಕು ಹೇಗೆ ಸಾಗಿಸಬೇಕು ಎನ್ನುವ ಚಿಂತೆಯಲ್ಲಿದ್ದಾನೆ.