ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರುಗಳಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ. ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್ (ಬಿಒಡಿ) ಸಭೆಯಲ್ಲಿ ಕುಮಟಾ ರೋಟರಿಯು ಪ್ರಸ್ತುತ ಪಡಿಸುವ ‘ರೋಟರಿ ಸದ್ಭಾವನಾ ಪ್ರಶಸ್ತಿ’ಯನ್ನು ಕೊಡಮಾಡಲಾಗಿದೆ. ಅಂತರಾಷ್ಟೀಯ ರೋಟರಿಯ, ರೋಟರಿ ಫೌಂಡೇಶನ್ನಿಗೆ ಹಾಗೂ ಪಲ್ಸ್ ಪೋಲಿಯೋಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಪ್ರಯುಕ್ತ ವಸಂತ್ ರಾವ್ ಅವರಿಗೆ ಹಾಗೂ ರೋಟರಿ ಕ್ಲಬ್ ಸೇವೆಗೆ ಗಣನೀಯ ಕೊಡುಗೆ ನೀಡಿದ ಡಾ. ಸಂಜಯ್ ಪಟಗಾರ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

RELATED ARTICLES  ವಿಪರೀತ ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿ.

 ಟಿ.ಆರ್.ಎಫ್‌ನ  ಪ್ರಮುಖ ಧ್ಯೇಯವೆಂದರೆ ಆರೋಗ್ಯ ಸುಧಾರಣೆ, ಶೈಕ್ಷಣಿಕ ಬೆಂಬಲ ಮತ್ತು ಬಡತನದ ನಿವಾರಣೆಯೇ ಆಗಿದೆ.  ಆ ಮೂಲಕ ರೋಟರಿಯನ್ನರು ವಿಶ್ವ ತಿಳುವಳಿಕೆ, ಸದ್ಭಾವನೆ ಮತ್ತು ಶಾಂತಿಯನ್ನು ಮೂಡಿಸಲು  ಮುಂದಾಗುತ್ತಾರೆ. ವಸಂತ್ ರಾವ್ ಅವರು ಕಳೆದ ಕೆಲವಾರು ವರ್ಷಗಳಿಂದ ರೋಟರಿ ಸಂಸ್ಥೆಗೆ ದೇಣಿಗೆ ನೀಡುತ್ತಾ ಬಂದಿರುವುದು ಗಮನಾರ್ಹವಾಗಿದೆ ಎಂದರಲ್ಲದೇ ಈ ವರ್ಷವೂ ಗಣನೀಯ ಪ್ರಮಾಣದಲ್ಲಿ ದೇಣಿಗೆ ನೀಡಲಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಆರ್.ಗಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೇ ಸಮಾಜಮುಖಿ ಸೇವೆಯಲ್ಲಿರುವ ದಂತವೈದ್ಯ ಡಾ. ಸಂಜಯ್ ಅವರು ಕ್ಲಬ್ ಆಧಾರಿತ ಕಾರ್ಯಚಟುವಟಿಕೆಗಳಲ್ಲಿ ವಿಶಿಷ್ಠವಾಗಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿದರು. 

RELATED ARTICLES  ಲಿಂಗನಮಕ್ಕಿ ಡ್ಯಾಂಮ್ ನಿಂದ ನೀರು ಹೊರಕ್ಕೆ

ಕಾರ್ಯದರ್ಶಿ ರಾಮದಾಸ ಗುನಗಿ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಡಾ. ಡಿ.ಡಿ. ನಾಯಕ, ಜಿ.ಜೆ.ನಾಯ್ಕ, ಜೈವಿಠ್ಠಲ ಕುಬಾಲ, ಚೇತನ್ ಶೇಟ್ ಹಾಗೂ ಪದಾಧಿಕಾರಿಗಳಾದ ಎಸ್.ಎಸ್.ಭಟ್ ಲೋಕೇಶ್ವರ, ಗಣೇಶ್ ಎನ್. ಕಾಮತ, ಗುರುರಾಜ ಶೆಟ್ಟಿ, ವಿ.ಆರ್.ನಾಯ್ಕ, ಪವನ ಶೆಟ್ಟಿ, ನಿಖಿಲ್ ಕ್ಷೇತ್ರಪಾಲ, ವಿನಯ್ ನಾಯಕ, ಗಣೇಶ ನಾಯ್ಕ, ಡಾ. ನಿತಿಶ್ ಶಾನಭಾಗ, ಡಾ. ವಾಗೀಶ್ ಭಟ್, ಶ್ರೀನಿವಾಸ ನಾಯಕ, ಗಣೇಶ್ ಎಂ. ಕಾಮತ, ಲೋಹಿತ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಪ್ರಣವ್ ಮಣಕೀಕರ್ ಸ್ವಾಗತಿಸಿದರು. ಯೋಗೇಶ್ ಕೋಡ್ಕಣಿ ನಿರೂಪಿಸಿದರು.