ಕುಮಟಾ : ತನ್ನ ಖುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಡಿ.ವಿ ಗುರುಪ್ರಸಾದ ಹೇಳಿದರು. ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ಹಾಗೂ‌ ರಂಗಸಾರಸ್ವತ ಉತ್ತರ ಕನ್ನಡ ಇದರ ಸಹಯೋಗದಲ್ಲಿ ಕೊಂಕಣ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಕೊಲೆಗಾರ ಚಾರ್ಲ್ಸ ಶೋಭರಾಜ ಕುರಿತಾದ ಪುಸ್ತಕ ಡಾ.ಗುರುಪ್ರಸಾದ ಅವರು 84 ನೇ ಕೃತಿ “ದ  ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ” ಕೃತಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ನಂತರ ಮಕ್ಕಳನ್ನು ಉದ್ದೇಶಿಸಿ ಕೃತಿಕಾರರ ನುಡಿಗಳನ್ನು ಆಡಿದರು.

ಚಾರ್ಲ್ಸ ಶೋಭರಾಜ ೧೭ ದೇಶಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದವನು. ಅವನದು ಪುಸ್ತಕದ ಓದು ನಿರಂತರವಾಗಿತ್ತು. ಅಪ್ರತಿಮ ಬುದ್ದಿವಂತ, ಕಾನೂನನ್ನು ಅರಿತವನು. ಕಾರವಾರದ ಜೈಲಿನಲ್ಲಿ ಇದ್ದಾಗ ಇಡೀ ವಕೀಲರ ತಂಡ ನಡುಗುವಂತೆ ವಾದ ಮಾಡುತ್ತಿದ್ದ. ಮಾಜಿಸ್ಟ್ರೇಟರ್ ಕೂಡಾ ದಂಗಾಗಿ ನೋಡುವ ಸ್ಥಿತಿ ಇತ್ತು. ಜೈಲಿನಲ್ಲಿ ಆಗುತ್ತಿದ್ದ ಸಮಸ್ಯೆಗಳ ಕುರಿತಾಗಿ ದನಿ ಎತ್ತಿದ್ದರು. ಅದರಿಂದಾಗಿ ಹಿಂಡಲಗಾ ಜೈಲಿಗೆ ತೆರಳಬೇಕಾಯ್ತು ಎಂದು ಅವರ ಬಗ್ಗೆ ವಿವರಿಸಿದರು.

ಚಾರ್ಲ್ಸ್ ಶೋಭರಾಜ ಅವರ ಎರಡೂ ಮುಖಗಳನ್ನೂ ಈ ಪುಸ್ತಕದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ಮಹಿಳೆಯರನ್ನು ಭೋಗಿಸುವ ಹಾಗೂ ಬದುಕಿದ್ದಾಗಲೇ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತವಾಗಿ ಆನಂದಿಸಿದ ಆ ಕ್ಷಣಗಳನ್ನು ತಿಳಿಸುತ್ತಾ, ಮನಸ್ಸಿನಲ್ಲಿ ಕೆಟ್ಟತನ ತೊಡೆಯಲಿ, ಒಳ್ಳೆಯ ಮನಸ್ಸಿನವರು ನಾವಾಗಬೇಕು ಎಂದು ವಿವರಿಸಿದರು.

ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಬಣ್ಣಿಸುತ್ತಾ ಮಾತು ಪ್ರಾರಂಭ ಮಾಡಿದ ಅವರು, ತಾನು ಜೀವನದಲ್ಲಿ ಬಿಎಸ್ಸಿಯಲ್ಲಿ ಮೊದಲ ವರ್ಷವನ್ನು ಒಂದು ಎಟೆಮ್ಟ್ ಹಾಗೂ ಎರಡನೇ ವರ್ಷವನ್ನು ಎರಡನೇ ಎಟೆಮ್ಟ್ ಹಾಗೂ ಮೂರನೇ ವರ್ಷವನ್ನು ಮೂರನೇ ಎಟೆಮ್ಟ್ ನಲ್ಲಿ ಪಾಸ್ ಮಾಡಿದವನು. ನನಗೆ  ಟೈಪಿಸ್ಟ್ ಆಗಲೂ ಸಾಧ್ಯವಾಗದ ನಾಲಾಯಕ್ ಎಂದು ಮೂದಲಿಸಿದರು. ತಂದೆ ಬ್ಯಾಂಕ್ ಫಾರಂ ತಂದು ಕೊಟ್ಟು ತುಂಬಲು ಹೇಳಿದರು‌. ಆದರೆ ನಾನು ಪತ್ರಕರ್ತ ಆಗಬೇಕೆಂದು ಮನಸ್ಸು ಹೊಂದಿದ್ದೆ . ಇಂಗ್ಲಿಷ್ ಎಂ.ಎ ಪದವಿ ಪಡೆಯಲು ಅವರು ಪಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಉಪನ್ಯಾಸಕರು ಬೆಳಗಿನ ವಾಕಿಂಗ್ ಗೆ ಹೋಗುವಾಗ ನಾನೂ ಅವರಲ್ಲಿ ಅಂಗಲಾಚಿದ ಬಗ್ಗೆ ವಿವರಿಸಿದರು.

RELATED ARTICLES  ಬೀಡಿಎಲೆ ತುಂಬಿಕೊoಡು ಹೋಗುತ್ತಿದ್ದ ಲಾರಿಗೆ ಬೆಂಕಿ

ಕಲಿಕೆಯ ಛಲದಿಂದಾಗಿ ನಾನು ಎಂ.ಎ ಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದೆ, ಆಗ ನನ್ನ ಗೌರವ ಹೆಚ್ಚಿತು. ನಂತರ ಪತ್ರಿಕೆಯೊಂದಕ್ಕೆ‌ ೧೦೦ ರೂ. ಸಂಬಳಕ್ಕೆ‌ ಕೆಲಸಕ್ಕೆ‌ ಸೇರಿದೆ. ತಂದೆಯವರು ಯು.ಪಿ.ಎಸ್.ಸಿ ಫಾರಂ ತಂದು ತುಂಬಲು ಹೇಳಿದರು. ಅಂದಿನಿಂದ ನನ್ನ ಪ್ರಯತ್ನ ಸಾಗಿತು ಎನ್ನುತ್ತಾ ಐ.ಪಿ.ಎಸ್ ಅಧಿಕಾರಿಯಾದ ಪರಿಯನ್ನು ವಿವರಿಸಿದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಮಹಾಬಲ ಮೂರ್ತಿ ಕೊಡ್ಲಕೆರೆ ಮಾತನಾಡಿ ಶೋಭರಾಜ್ ನ ಬದುಕಿನ ಬಗ್ಗೆ ತಾವು ತಿಳಿದ ವಿಚಾರಗಳನ್ನು ತಿಳಿಸುತ್ತಾ, ಮನುಷ್ಯನ ಜೀವನ ಆಕೃತಿ ಆಗಬೇಕು. ವಿಕೃತವಾಗಬಾರದು ಎಂದರು.  ಮಾನವನ ಬದುಕು ಎಲ್ಲ ವಿಧದಲ್ಲಿಯೂ ವಿಕಸನಗೊಳ್ಳಬೇಕು. ಪ್ರತಿಯೊಂದು ಹಂತದಲ್ಲಿಯೂ ಒಳಿತನ್ನು ನಿರೀಕ್ಷಿಸಬೇಕು. ದಾರಿ ತಪ್ಪಿ ನಡೆಯುವುದರಿಂದ ಬದುಕು ಕರಾಳತೆಯೆಡೆಗೆ ಸಾಗುತ್ತದೆ. ಸರಿ ತಪ್ಪುಗಳನ್ನು ವಿವೇಚಿಸುವ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಬಹಳ ಪ್ರಧಾನವಾದದ್ದು ಆ ದಿಕ್ಕಿನಲ್ಲಿ ಸದಾ ಚಿಂತನೆಗಳು ನಡೆಯಬೇಕು ಎಂದು ವಿವರಿಸಿದರು.

ಅತ್ಯಂತ ಬಲಶಾಲಿಯಾದ ಹಾಗೂ ವಿದ್ಯಾವಂತನಾದ ರಾವಣನು ಕೆಡುಕಿನ ದಾರಿಯಲ್ಲಿ ಸಾಗಿದ್ದರಿಂದ ಹತ್ತು ತಲೆಗಳನ್ನು ಹೊಂದಿದ್ದೂ ವಿಕೃತಿಯ ಹಾದಿ ಹಿಡಿದಿದ್ದನು. ಅದರಂತೆಯೇ ಅತ್ಯಂತ ಬುದ್ಧಿವಂತನಾದ ಶೋಭರಾಜ್ ಸಹ ಕೆಡುಕಿನ ದಾರಿಯಲ್ಲಿ ಸಾಗುವಲ್ಲಿ ಅವನ ಪ್ರಾರಂಭಿಕ ಜೀವನ, ಹಾಗೂ ಕುಟುಂಬವೂ ಕಾರಣ. ಪ್ರತಿಯೊಬ್ಬರ ಬದುಕಿನಲ್ಲಿಯೂ ಇಂತಹ ಕರಾಳತೆಗಳು ಇದ್ದು ಸರಿ ತಪ್ಪುಗಳನ್ನು ವಿವೇಚಿಸಿ ಮುನ್ನಡೆಯಬೇಕು ಎಂದರು.

RELATED ARTICLES  ಅಂಚೆ ಇಲಾಖೆಯ ಫಿಲಾಟೆಲಿ ಪ್ರೊಜೆಕ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯಲ್ಲಾಪುರದ ಹುಡುಗ.

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕಾರ್ಯಕ್ರಮದ ಅತಿಥಿಗಳಾದ ಎನ್.ಟಿ ಪ್ರಮೋದರಾವ್ ಮಾತನಾಡಿ ವ್ಯಕ್ತಿ ಶಾಶ್ವತರಲ್ಲ ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವಂತದ್ದು. ಪುಸ್ತಕದ ವಿಚಾರಗಳು ಬದುಕಿನಲ್ಲಿ ಕಲಿಯುವಂತಹುದು ಇರುತ್ತದೆ. ಓದು ನಿರಂತರವಾದಾಗ ಬದುಕೂ ಸುಂದರ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ ಡಾ. ಡಿ.ವಿ ಗುರುಪ್ರಸಾದ ಅವರ ವಾರದ ಲೇಖನಗಳನ್ನು ಓದುವುದು ನನ್ನ ಹವ್ಯಾಸ. ಇಂತಹ ಹಿರಿಯ ವ್ಯಕ್ತಿ ನಮ್ಮಲ್ಲಿಗೆ ಬರುವುದು ಸಂತಸದ ವಿಚಾರ ಎಂದು ನಾನೂ ಕಾರ್ಯಕ್ರಮಕ್ಕೆ ಒಪ್ಪಿದೆ. ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷ್ಯ ಡಾ. ಗುರುಪ್ರಸಾದ ಎಂದು ಬಣ್ಣಿಸಿದರು. ಕರ್ನಾಟಕದ ಪುಟ್ಟ ಊರಾದ ಕುಮಟಾಕ್ಕೆ ಬಂದು ಪುಸ್ತಕ ಬಿಡುಗಡೆಗೆ ಮಾಡಿದ ಅವರ ಸರಳತೆ ಮೆರೆದಿದ್ದಾರೆ ಎಂದ ಅವರು, ತಮ್ಮ ಬಾಲ್ಯದ ಸಂದರ್ಭದಲ್ಲಿ ಶೋಭರಾಜ ಅವರ ಕುರಿತಾಗಿ ಇದ್ದ ವದಂತಿಗಳು ಹಾಗೂ ಅವರ ಬಗ್ಗೆ ಜನಾಭಿಪ್ರಾಯದ ಬಗ್ಗೆ ವಿವರಿಸಿದರು.

Vaibhav

ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಸಭೆಯಲ್ಲಿದ್ದರು. ರಂಗ ಸಾರಸ್ವತದ ಸಂಸ್ಥಾಪಕ ಕಾಗಾಲ ಚಿದಾನಂದ ಭಂಡಾರಿ ಸ್ವಾಗತಿಸಿದರು, ಪ್ರಾಂಶುಪಾಲ ಕಿರಣ ಭಟ್ಟ ವಂದಿಸಿದರು, ಗಣೇಶ ಜೋಶಿ ನಿರೂಪಿಸಿದರು. ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.