ಕುಮಟಾ : ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಪೋಲೀಸರಿಗೆ ವಿವಿಧ ಪರಿಸ್ಥಿತಿಯಲ್ಲಿ ಅತ್ಯುಪಯುಕ್ತವಾದ ಬ್ಯಾರಿಕೆಡನ್ನು ಪೊಲೀಸ್ ಇಲಾಖೆಗೆ ನೀಡುವುದರ ಮೂಲಕ ವಿನಾಯಕ ರೆಕ್ಸೀನ್ ಹೌಸ್ ನ ಮಾಲೀಕ ವಿನಾಯಕ ಹೆಗಡೆಕಟ್ಟೆ ಮಾದರೀ ಕಾರ್ಯಕ್ಕೆ ಮುಂದಾಗಿದ್ದಾರೆ. ಕುಮಟಾದ ಭಾಗದಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಗೃಹೋಪಯೋಗಿ ಹಾಗೂ ರೇಕ್ಸಿನ್ ಮತ್ತು ಪೀಠೋಪಕರಣ ಮಳಿಗೆ ವಿನಾಯಕ ರೆಕ್ಸಿನ್ ಹೌಸ್ ನ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಜೊತೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಅಪಘಾತಗಳಾಗದಂತೆ ಮುನ್ನೆಚ್ಚರಿಕೆಯಾಗಿ ವೇಗ ನಿಯಂತ್ರಕವಾಗಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಜನರನ್ನು ನಿಯಂತ್ರಿಸಲು ಇಲಾಖೆಗೆ ತೀರಾ ಅಗತ್ಯವಾಗಿರುವ ೧೦ ಬ್ಯಾರಿಕೇಡನ್ನು ಸಮಾಜಮುಖಿ ಚಿಂತನೆ ಯೊಂದಿಗೆ ವಿನಾಯಕ ಹೆಗಡೆಕಟ್ಟೆ ನೀಡಿದ್ದಾರೆ. ಸರಿಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಮೌಲ್ಯದ ಬ್ಯಾರಿಕೇಡನ್ನು ಇವರು ಉಚಿತವಾಗಿ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಈ ಬ್ಯಾರಿಕೇಡ್ ಹಸ್ತಾಂತರ ಸಂದರ್ಭದಲ್ಲಿ ವಿನಾಯಕ ಹೆಗಡೆಕಟ್ಟೆಯವರ ಪತ್ನಿ ವೈಶಾಲಿ ಹೆಗಡೆಕಟ್ಟೆ, ಕುಮಟಾ ಠಾಣೆಯ ಪಿ.ಐ ತಿಮ್ಮಪ್ಪ ನಾಯ್ಕ, ಪಿ.ಎಸ್.ಐಗಳಾದ ನವೀನ ನಾಯ್ಕ ಹಾಗೂ ಈ.ಸಿ ಸಂಪತ್ ಇದ್ದರು.
ಪೊಲೀಸ್ ಇಲಾಖೆಗೆ ಅತ್ಯಂತ ಅವಶ್ಯಕವಾದ ಬ್ಯಾರಿಕೇಡ್ ಗಳು ಕುಮಟಾದಲ್ಲಿ ಅಗತ್ಯವಿದೆ ಎಂಬುದನ್ನು ಮನಗಂಡು ಸಮಾಜ ಸೇವೆಯ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಿದ್ದೇನೆ. ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಜನಾನುಕೂಲಕ್ಕೆ ಈ ಕಾರ್ಯ ಮಾಡಿದ್ದು ಇದಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿನಾಯಕ ಹೆಗಡೆಕಟ್ಟೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಮಟಾ ಠಾಣೆಯ ಪಿ.ಐ ತಿಮ್ಮಪ್ಪ ನಾಯ್ಕ ಸಂತಸ ವ್ಯಕ್ತಪಡಿಸಿ, ವಿನಾಯಕ ರೆಕ್ಸಿನ್ ಹೌಸ್ ನವರು ನಮಗೆ ಬಹು ಉಪಯುಕ್ತವಾದ ಬ್ಯಾರಿಕೇಡ್ ನೀಡಿದ್ದಾರೆ. ಇದರ ಸದುಪಯೋಗವನ್ನು ನಾವು ಮಾಡಿಕೊಳ್ಳುತ್ತೇವೆ. ಇಂತಹ ಸಮಾಜಮುಖಿ ವ್ಯಕ್ತಿತ್ವಗಳು ಇರುವ ಕಾರಣದಿಂದ ಕುಮಟಾದಲ್ಲಿ ಸೇವೆ ಸಲ್ಲಿಸಲು ಸಂತಸವಾಗುತ್ತದೆ. ವಿನಾಯಕ ರೆಕ್ಸಿನ್ ಹೌಸ್ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.