ಕುಮಟಾ: ಇಲ್ಲಿಯ ರೋಟರಿ ಸಂಸ್ಥೆಯವರು ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಆಶುಭಾಷಣ ಸ್ಪರ್ಧೆಯಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಸ್ನೇಹಾ ಉದಯ ನಾಯ್ಕ ‘ರೋಟರಿ ವರ ಮಾತುಗಾರ ಪುರಸ್ಕಾರ’ಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿನ ಪ್ರೌಢಶಾಲೆಗಳಲ್ಲಿಯೇ ಅತ್ಯುತ್ತಮ ವಾಗ್ಮಿಯೆಂಬ ಹೆಮ್ಮೆಗೆ ಪಾತ್ರರಾದರು. 

ಗಿಬ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ಭೂಮಿಕಾ ನಾಗರಾಜ ಹೆಗಡೆ ಎರಡನೆಯ, ಸಿವಿಎಸ್ಕೆಯ ಕೃತಿಕಾ ಮಹೇಶ ಭಟ್ ಮೂರನೆಯ, ರಾಮನಾಥ ಪ್ರೌಢಶಾಲೆ ಊರಕೇರಿಯ ಕೆ.ವಿ.ಖುಷಿ ನಾಲ್ಕನೆಯ ಹಾಗೂ ಡಾ.ಎ.ವಿ.ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ಯಶಸ್ವಿ ಜೆ.ಬಿ. ಐದನೆಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಕುಮಟಾ ರೋಟರಿಯು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ನಿಮಿತ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  

ವೇದಿಕೆಯ ಗಣ್ಯರೆಲ್ಲ ಸೇರಿ ಜ್ಯೋತಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಎನ್. ಆರ್. ಗಜು ಸ್ಪರ್ಧಾ ಕಾರ್ಯಕ್ರಮದ ಆಶಯ ಮಾತುಗಳನ್ನಾಡಿದರು. ಆಶು-ಮಾತುಗಾರಿಕೆಗೆ ವೇದಿಕೆ ಕಲ್ಪಿಸಿ ಆ ಮೂಲಕ ವಿದ್ಯಾರ್ಥಿಗಳ ಭಾಷಣ ಕೌಶಲ್ಯವನ್ನು ಹೆಚ್ಚಿಸಲು ಏಪರ್ಡಿಸಲಾದ ಈ ಸ್ಪರ್ಧೆ, ಮಕ್ಕಳಲ್ಲಿ ನಿತ್ಯದ ಓದು ಬರಹಕ್ಕೆ ಇನ್ನಷ್ಟು ಹೊಸ ದಾರಿಗಳನ್ನು ತೆರೆದಿಡಬಲ್ಲದೆಂದರು. ಉತ್ತಮ ಮಾತುಗಾರ ಯಾವಾಗಲೂ ಪ್ರಾಮಾಣಿಕ, ವಿಧೇಯವಂತ, ವಿನಯವಂತ ಹಾಗೂ ನಿರಹಂಭಾಗಿಯಾಗಿರಬೇಕೆಂದು ಒತ್ತಿ ಹೇಳಿದರು. 

ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಎಚ್. ಗುರುರಾಜ ಶೆಟ್ಟಿ ಸ್ವಾಗತಿಸಿದರು. ಪಿಯು ಕಾಲೇಜಿನ ಪ್ರಾಚಾರ್ಯ ಕಿರಣ ಭಟ್, ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ, ಪುರಸ್ಕಾರದ ಪ್ರಾಯೋಜಕತ್ವ ವಹಿಸಿದ್ದ ಸತೀಶ ನಾಯ್ಕ, ರೋಟರಿ ಕೋಶಾಧ್ಯಕ್ಷ ಸಂದೀಪ ನಾಯಕ, ಸುರೇಶ ಭಟ್, ಶೈಲಾ ಗುನಗಿ, ಪ್ರಾಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಹುತೇಕ ಪ್ರಚಲಿತ ವಿಷಯಗಳನ್ನೊಳಗೊಂಡ ಸ್ಪರ್ಧೆಯಲ್ಲಿ ಸೃಜನಾತ್ಮಕ, ಕ್ರಿಯಾತ್ಮಕ ಮಾತುಗಾರಿಕೆಗೆ ವಿಶೇಷ ಅವಕಾಶ ನೀಡಲಾಗಿತ್ತು. 

ತೀರ್ಪುಗಾರರಾಗಿ  ಕಾರ್ಯನಿರ್ವಹಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕ ಶಿಕ್ಷಕರಾದ ಕೇಶವ ನಾಯ್ಕ, ನಾಗರಾಜ ಶೆಟ್ಟಿ ಹಾಗೂ ಶಿಕ್ಷಣ ತಜ್ಞೆ ಚೈತ್ರಾ ಹೆಗಡೆಯವರು ಆಶುಭಾಷಣಕ್ಕೆ ತಕ್ಕುದಾದ ವಾತಾವರಣ ಕಲ್ಪಿಸುವ ಉಪಯುಕ್ತ ಸಲಹೆ ನೀಡಿ ರೋಟರಿ ಸಂಸ್ಥೆಯ ಕಾಯಕವನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಪ್ರಶಂಸೆ ವ್ಯಕ್ತಪಡಿಸಿದರು.  ಪ್ರಾಧ್ಯಾಪಕ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಅಧ್ಯಾಪಕ ಕಿರಣ ಪ್ರಭು ವಂದಿಸಿದರು. ಸರಸ್ವತಿ ಪಿಯು ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಸಹಕರಿಸಿದರು.