ಕುಮಟಾ: ಮುಕ್ರಿ ಸಮಾಜವು ಸರ್ವಸಂಪನ್ನ ಸಮುದಾಯವಾಗಿದ್ದು, ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಜಾಗೃತಗೊಳಿಸುವುದು ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಕೆ.ಎಂ.ಮುಕ್ರಿ ಧಾರ್ಮಿಕ ಆಚಾರದ ಕುರಿತು ವಿಷಯ ಮಂಡಿಸಿದರು.
ಹಿಂದೂ ಮುಕ್ರಿ ಸಮಾಜ ಸೇವಾ ಸಂಘ, ಸೀಮೆಯ ಯಜಮಾನರು, ಊರ ಯಜಮಾನರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದಲ್ಲಿ ಇಲ್ಲಿನ ಹೆಗಡೆಯ ಅಂಬೇಡ್ಕರ ಸಭಾಭವನದಲ್ಲಿ ಭಾನುವಾರ ನಡೆದ ಹಿಂದೂ ಮುಕ್ರಿ ಸಮುದಾಯದ ಪ್ರಥಮ ಸಾಹಿತ್ಯಗೋಷ್ಠಿಯಲ್ಲಿ ಅವರು ಆಚಾರ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇತರೆ ಸಮುದಾಯದಲ್ಲಿರುವ ಶ್ರೇಷ್ಠ ಪರಂಪರೆಗಳು ಮುಕ್ರಿ ಸಮುದಾಯದಲ್ಲೂ ಇದೆ. ಗುಮಟೆಪಾಂಗ, ಹಗರಣಗಳು, ಭಜನೆ ಸೇರಿದಂತೆ ಇತರೆ ಜಾನಪದೀಯ ಸಾಹಿತ್ಯಿಕ ಪ್ರಕಾರಗಳು ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.
ಸಾಮಾಜಿಕ ವಿಷಯದ ಕುರಿತು ಮಾತನಾಡಿದ ಈಶ್ವರ ನಾಗು ಮುಕ್ರಿ ಅವರು, ನಮ್ಮ ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ, ಆದರೆ ಬೆಳಕಿಗೆ ಬಾರದಂತಾಗಿವೆ. ಜನಪದ ಸಾಹಿತ್ಯದ ತಿರುಳುಗಳು ನಮ್ಮ ಸಮಾಜವನ್ನು ಕಟ್ಟಿ ಬೆಳೆಸಿದೆ. ಶಿಕ್ಷಣ, ಆರ್ಥಿಕತೆ, ರಾಜಕೀಯ ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಮುಕ್ರಿ ಸಮಾಜ ಇನ್ನಷ್ಟು ಬೆಳೆಯಬೇಕಿದೆ ಎಂದ ಅವರು ಹೆಗಡೆಯ ಶಾಂತಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಇಂದಿಗೂ ಮುಕ್ರಿ ಸಮಾಜಕ್ಕೆ ಕಾರ್ಯಕ್ರಮ ಮಾಡಿಕೊಳ್ಳಲು ಅವಕಾಶ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಧಾರ್ಮಿಕ ವಿಚಾರ ಕುರಿತು ಗಣಪತಿ ಎಂ. ಅಡಿಗುಂಡಿ ಮಾತನಾಡಿ, ಚಂದಾವರದ ಸೀಮೆ ಹನುಮಂತ ದೇವಸ್ಥಾನದ ಆಡಳಿತದಲ್ಲಿ ನಾಲ್ಕು ವರ್ಗಗಳ ಪೈಕಿ ಶಿಶುವರ್ಗವಾಗಿ ಮುಕ್ರಿ ಸಮಾಜಕ್ಕೂ ಅವಕಾಶವಿತ್ತು, ಎಲ್ಲಿಯೂ ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ, ನಮ್ಮ ಧಾರ್ಮಿಕ ಹಕ್ಕುಗಳ ಬಗ್ಗೆ ಮಾತನಾಡಿದಾಗ ನಮ್ಮನ್ನು ಮೆಟ್ಟುವ ಕೆಲಸವಾಗುತ್ತದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಮ ಮಾಸ್ತಿ ಮುಕ್ರಿ ತಾಡುಕೊಪ್ಪ, ಮುಖ್ಯ ಅತಿಥಿಗಳಾಗಿ ಎಸ್.ಎನ್.ಮುಕ್ರಿ, ಸತೀಷ ಕೆ. ಮುಕ್ರಿ, ಮಹಾಬಲೇಶ್ವರ ಜಟ್ಟಿ ಮುಕ್ರಿ, ಪರಮೇಶ್ವರ ಹೊನ್ನಪ್ಪ ಮುಕ್ರಿ, ತಿಮ್ಮಪ್ಪ ರಾಮಾ ಮುಕ್ರಿ, ಶಿವು ನಾಗು ಮುಕ್ರಿ ಕೂಜಳ್ಳಿ ಉಪಸ್ಥಿತರಿದ್ದರು.
ಮಾಸ್ತಿ ಮುಕ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯ ಗೋಷ್ಠಿಯಲ್ಲಿ ಗಂಗೆ ನಾಗು ಮುಕ್ರಿ ಹೆಗಡೆ, ದೇವಿ ನಾಗು ಮುಕ್ರಿ ಕೂಜಳ್ಳಿ, ಸುರೇಶ ಎನ್. ಮುಕ್ರಿ, ನಾಗವೇಣಿ ಜಿ. ಮುಕ್ರಿ, ವಿಜಯ ಜಿ. ಗುನಗಾ, ಶ್ರೀಧರ ಮುಕ್ರಿ, ಜಟ್ಟಿ ಗಣಪು ಮುಕ್ರಿ, ಸಂತೋಷ ಅಡಿಗುಂಡಿ ಪಾಲ್ಗೊಂಡು ಕವನ ವಾಚಿಸಿದರು. ವೇದಾ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಅಡಿಗುಂಡಿ ಸ್ವಾಗತಿಸಿ ಪರಿಚಯಿಸಿದರು. ತಿಮ್ಮಪ್ಪ ಮುಕ್ರಿ ಮಣಕಿ ವಂದಿಸಿದರು.