ಕುಮಟಾ : ಸತತ ಅಭ್ಯಾಸ, ಅನನ್ಯ ಅನುಭವಗಳು, ಸೂಕ್ತ ಶಬ್ದ ಸಂಸ್ಕಾರ ಇವೆ ಕಾವ್ಯ ನಿರ್ಮಾಣದ ನಿಜವಾದ ಶಕ್ತಿಗಳು. ವಿದ್ಯಾರ್ಥಿ ದೆಸೆಯಿಂದಲೇ ನಿರಂತರ ಓದು ಕಾವ್ಯವನ್ನು ಜಾಗ್ರತಗೊಳಿಸುತ್ತದೆ ಎಂದು ಖ್ಯಾತ ಸಾಹಿತಿ ಪುಟ್ಟು ಕುಲಕರ್ಣಿ ನುಡಿದರು. ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಕುಮಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಪ್ರೌಢಶಾಲೆ ಅಘನಾಶಿನಿ ಕುಮಟಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಕಾರ್ತಿಕ 2023 ಅನುದಿನ ಅನುಸ್ಪಂದನ ಕಾರ್ಯಕ್ರಮದ ಅಡಿ ಅಘನಾಶಿನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ಕವನ ರಚನೆಯ ಕುರಿತಾದ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ 22 ವಿದ್ಯಾರ್ಥಿಗಳು ಸ್ವರಚಿತ ಕವನವನ್ನು ವಾಚಿಸಿಗಮನ ಸೆಳೆದರು ಮೀನುಗಾರನ ಸ್ವಗತ, ನಮ್ಮೂರು, ಅನ್ನದಾತ, ಕನ್ನಡ ನಾಡು,  ಅಮ್ಮ ಮೊದಲಾದ ಕವಿತೆಗಳು ಮೆಚ್ಚುಗೆಗೆ ಪಾತ್ರವಾದವು. 

RELATED ARTICLES  ಸಂಭವನೀಯ ಅಪಾಯದಿಂದ ಪಾರಾಗುವ ಬಗ್ಗೆ ಮಾರ್ಗದರ್ಶನ.

ವಿಶೇಷ ಅತಿಥಿಗಳಾಗಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಭಾಗವಹಿಸಿ, ಸಮೃದ್ಧ ಗ್ರಂಥಾಲಯ ವಿದ್ಯಾರ್ಥಿಗಳ ಓದಿಗೆ ಪೂರಕವಾದದ್ದು, ಗ್ರಂಥಾಲಯಕ್ಕೆ ಅಗತ್ಯವಾದ ಪುಸ್ತಕಗಳನ್ನು ಒದಗಿಸುವ ಕೆಲಸ ಆಗಬೇಕು ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು. 

ಉದ್ಘಾಟಕರಾಗಿ ಆಗಮಿಸಿದ ಕಾಗಾಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಪಟಗಾರ ಈ ಶಾಲೆಯಿಂದ ಅತ್ಯುತ್ತಮ ಕವಿಗಳು ಉದಯಿಸುವಂತಾಗಲಿ ಕನ್ನಡ ನಾಡು ನುಡಿ ಅಭಿಮಾನವನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಅಘನಾಶಿನಿ ಹಾಗೂ ಪತ್ರಕರ್ತ ಶ್ರೀ ಎಂ ಜಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯನಿ ಮಮತಾ  ನಾಯ್ಕ ನುಡಿದರು.

ಇನ್ನೋರ್ವ ಅತಿಥಿ ಬೀರಣ್ಣ ನಾಯಕ  ಏನನ್ನು ಓದದೆ ಕಾವ್ಯ ರಚನೆ ಅಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಸುಬ್ಬಯ್ಯ ನಾಯ್ಕ ಇದೊಂದು ಅದ್ಭುತ ಕಾರ್ಯಕ್ರಮ, ನಾಡು ನುಡಿಗೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ಬದ್ಧ ಎಂದು ನುಡಿದರು.

RELATED ARTICLES  ಮತದಾನ ಪ್ರಕ್ರಿಯೆ ಚುರುಕು : ಮತಪೆಟ್ಟಿಗೆ ಸೇರುತ್ತಿರುವ ಅಭ್ಯರ್ಥಿಗಳ ಭವಿಷ್ಯ

ಕವನವಾಚನ ಸ್ಪರ್ಧೆಯಲ್ಲಿ ದಿಶಾ ಸಂಜೀವ ನಾಯ್ಕ ಪ್ರಥಮ ಸ್ಥಾನವನ್ನೂ, ಮಿಲನ ನಾಗರಾಜ ಅಂಬಿಗ ಮತ್ತು ನಿಶಾ ಲಕ್ಷಣ ಹರಿ ಕಾಂತ  ದ್ವಿತೀಯ ಸ್ಥಾನವನ್ನು ಲಾಲಿ ಬೀರಕೊಡಿ ತೃತೀಯ ಸ್ಥಾನ ಪಡೆದುಕೊಂಡರು. 

ವೇದಿಕೆ ಮೇಲೆ  ಎಸ್ ಡಿಎಂಸಿ ಉಪಾಧ್ಯಕ್ಷರಾದ ಲಕ್ಷ್ಮಣ ಹರಿಕಾಂತ,  ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಶಶಿಕಾಂತ ನಾಯ್ಕ ಮತ್ತು ಗಂಗಾಧರ ಗೌಡ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಹಚ್ಚೇವು ಕನ್ನಡದ ದೀಪ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉಪನ್ಯಾಸಕ ವನ್ನಳ್ಳಿ ಗಿರಿ ಸ್ವಾಗತಿಸಿದರು. ಪ್ರೊ. ಪ್ರಮೋದ ನಾಯ್ಕ ವಿಜೇತರ ಯಾದಿಯನ್ನು ಘೋಷಿಸಿ ವಂದಿಸಿದರು. ಕನ್ನಡ ಶಿಕ್ಷಕಿ ಗೀತಾಪಟಗಾರ ಕಾರ್ಯಕ್ರಮವನ್ನು  ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ ನಾಯಕ ಸಹಕರಿಸಿದರು .