ಡಿಸೆಂಬರ್ 27 ಮತ್ತು 28ರಂದು ಹೊನ್ನಾವರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶನಿವಾರ ದಾಂಡೇಲಿಯ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಆಯ್ಕೆ ಸರ್ವಾನುಮತದಿಂದ ನಡೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಸಭೆಯಲ್ಲಿ ಹೊನ್ನಾವರ ತಾಲೂಕು ಕಸಾಪ ಘಟಕದ ಅಧ್ಯಕ್ಷ ಎಸ್. ಹೆಚ್. ಗೌಡರವರು ಡಾ.ಶ್ರೀಪಾದ ಶೆಟ್ಟಿ ಹೆಸರನ್ನು ಸೂಚಿಸಿದರೆ, ಮುಂಡಗೋಡ ತಾಲೂಕು ಘಟಕದ ಅಧ್ಯಕ್ಷ ವಿ.ಎ. ಕೊಣಸಾಲಿ ಅನುಮೋದಿಸಿದರು. ಅಂತಿಮವಾಗಿ ಸರ್ವಾನುಮತದಿಂದ ಆಯ್ಕೆ ನಡೆಯಿತು ಎಂದು ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ್ , ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ, ಜಿಲ್ಲಾ ಸಮಿತಿಯ ಸದಸ್ಯರಾದ ಜಯಶೀಲ ಆಗೇರ, ಸೀತಾ ದಾನಗೇರಿ, ಸುಮಂಗಲಾ ಹನುಮರೆಡ್ಡಿ, ಕಸಾಪ ತಾಲೂಕು ಘಟಕಗಳ ಅಧ್ಯಕ್ಷರಾದ ರಾಮಾ ನಾಯ್ಕ, ಕಾರವಾರ, ಸುಬ್ರಾಯ ಭಟ್, ಭಕ್ಕಳ, ಶಿರ್ಸಿ, ಗೋಪಾಲಕೃಷ್ಣ ನಾಯಕ, ಅಂಕೋಲಾ, ಎಸ್. ಎಚ್. ಗೌಡ , ಹೊನ್ನಾವರ, ಸುಬ್ರಹ್ಮಣ್ಯ ಭಟ್ ಯಲ್ಲಾಪುರ, ವಿ.ಎ. ಕೊಣಸಾಲಿ, ಮುಂಡಗೋಡ, ಸುಬ್ಬಯ್ಯ ನಾಯ್ಕ, ಕುಮಟಾ, ಸುಮಂಗಲ ಅಂಗಡಿ ಹಳಿಯಾಳ, ಪಾಂಡುರಂಗ ಪಟಗಾರ, ಜೋಯಿಡಾ ಉಪಸ್ಥಿತರಿದ್ದರು.
ಡಾ. ಶ್ರೀಪಾದ ಶೆಟ್ಟರ ಪರಿಚಯ
ಕವಿ, ವಿಮರ್ಷಕ, ವಾಗ್ಮಿ, ಅಂಕಣಕಾರ, ಜನಪದ ತಜ್ಞರಾಗಿರುವ ಶ್ರೀಪಾದ ಶೆಟ್ಟಿಯವರು ಮೂಲತಹ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದವರಾಗಿದ್ದು, ಸದ್ಯ ವಾಸ್ತವ್ಯ ಇರುವುದು ಹೊನ್ನಾವರದ ಪ್ರಭಾತನಗರದಲ್ಲಿ. ಮುಗ್ವಾ, ಅರೆ ಅಂಗಡಿ, ಹೊನ್ನಾವರದಲ್ಲಿ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನ ಪೂರೈಸಿದ ಶ್ರೀಪಾದ ಶೆಟ್ಟಿ, ಧಾರವಾಡ ಕವಿವಿಯಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿ, ದಿನಕರ ದೇಸಾಯಿ ಬದುಕು ಬರಹದ ಮೇಲೆ ಪಿ. ಎಚ್. ಡಿ. ಗೌರವವನ್ನು ಕೂಡ ಪಡೆದುಕೊಂಡವರು.
1971 ರಿಂದ ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಇವರು 2000 ರಲ್ಲಿ ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿಗೆ ವರ್ಗಾವಣೆಗೊಂಡು, 2009 ರಿಂದ 2014ರವರೆಗೆ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಸೇವಾ ನಿವೃತ್ತಿಗೊಂಡರು.
ಸಾಹಿತ್ಯ ಸೇವೆ
ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀಪಾದ ಶೆಟ್ಟಿಯವರು ವೃತ್ತಿಯ ಜೊತೆಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿ ಮುನ್ನಡೆಸಿಕೊಂಡು ಬಂದವರು. ತಮ್ಮದೇ ಆದ ಆಲೋಚನಾ ಸಾಹಿತ್ಯ ಸಂಸ್ಥೆಯ ಮೂಲಕ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತ ಬಂದವರು. ನಾಡಿನಾದ್ಯಂತ ನಡೆದ ಹಲವಾರು ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮ, ಸಮ್ಮೇಳನ, ಕವಿಗೋಷ್ಠಿ, ಕಮ್ಮಟ ಗಳಲ್ಲಿ ಭಾಗವಹಿಸಿ ಚಿರಪರಿಚಿತರಾದವರು. ಹಲವಾರು ಸ್ಮರಣ ಗ್ರಂಥಗಳಲ್ಲಿ, ಅಭಿನಂದನ ಗ್ರಂಥಗಳಲ್ಲಿ, ಸಂಪಾದಿತ ಕೃತಿಗಳಲ್ಲಿ ಹಾಗೂ ಹಲವರು ದಿನಪತ್ರಿಕೆ ಮತ್ತು ನಿಯತ ಕಾಲಿಕಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಇವರ ನಾಡು ನುಡಿಯ ಸೇವೆಗೆ ‘ಕಾಂತಾವರ ಸಾಹಿತ್ಯ ಪುರಸ್ಕಾರ’ ಸೇರಿದಂತೆ ಹಲವಾರು ಗೌರವಗಳನ್ನು ಕೂಡ ಇವರ ಮೂಡಿಗೇರಿವೆ. 2013 ರಲ್ಲಿ ನಡೆದ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವ ಪಡೆದಿದ್ದಾರೆ.
ಕವನ ಸಂಕಲನಗಳು
ಪ್ರಿಯ ಶರಾವತಿ, ಕಡಲ ಒಡಲಿನಲ್ಲಿ ಮುತ್ತುಬಿತ್ತು, ಮೌನ ಕಣಿವೆಯ ಒಡಲು, ಮಳೆಯಲ್ಲಿ ಮಿಂದ ಹೊಳೆ, ಕಡಕಟ್ಟು, ಹುಗಿದಿಟ್ಟ ಮೌನ , ಸತ್ಯದ ದೀಪಗಳು ಇವರ ಕವನ ಸಂಕಲನಗಳಾಗಿವೆ.
ಪ್ರಬಂಧ ಹಾಗು ಇತರೆ ಕೃತಿಗಳು
ನಿಸರ್ಗ ಜಲಪಾತಗಳು, ದಿನಕರ ದೇಸಾಯಿ : ಬದುಕು ಬರಹ, ಬಯಕೆ ತೋಟದ ಬೇಲಿ ( ಅಂಕಣ ಬರಹಗಳ ಸಂಕಲನ) ಕರ್ಮಯೋಗಿ ದಿನಕರ ದೇಸಾಯಿ, ಚಿತ್ರಕ್ಕೆ ಬಣ್ಣ ತುಂಬಿದವರು (ವ್ಯಕ್ತಿ ಚಿತ್ರಗಳು) ದಿಕ್ಕು ದೆಸೆ (ವಿಮರ್ಶಾ ಲೇಖನಗಳು) ಜಿ. ಆರ್. ಪಾಂಡೇಶ್ವರ (ವ್ಯಕ್ತಿ ಪರಿಚಯ) ನೀ ಕೊವ್ವು ಜಾಜಿ ಬನಕೆ ಬಿಸಿಲು ಬಂತೆ (ಮುಕ್ರಿ ಸಮುದಾಯದ ಹಾಡು ಪಾಡು) ನುಡಿಗನ್ನಡಿ (ಮುನ್ನುಡಿಗಳ ಸಂಕಲನ),
ಹಲವು ಚೌಕಟ್ಟುಗಳ ಚಿತ್ರ (ವ್ಯಕ್ತಿ ಚಿತ್ರ)
ಬಹುಬಲ ( ಕೆರೆಮನೆ ರಾಮ ಹೆಗಡೆ ಅಭಿನಂದನ ಗ್ರಂಥ) ತೋರಣ (ಚುಟುಕುಗಳ ಅವಲೋಕನ) , ಸುವರ್ಣ ಜಾನಪದ ಲೇಖನಗಳು, ಹೊಸಗನ್ನಡ ಕಾವ್ಯ ಸಂಚಯ, ಲೋಹಿಯಾ : ವರ್ತಮಾನದ ಮುಖಾಮುಖಿ ಮುಂತಾದ ಕೃತಿಗಳು ಪ್ರಕಟಗೊಂಡಿವೆ.
ಸಂಘಟನೆಗಳಲ್ಲಿ
ಕರ್ನಾಟಕ ವಿದ್ಯಾವಧಕ ಸಂಘದ ಸಾಹಿತ್ಯ ಮಂಟಪದ ಸಲಹೆಗಾರರಾಗಿ, ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಹಂಪಿ ವಿವಿಯ ಡಾ ರಾಮ ಮನೋಹರ ಲೋಹಿಯಾ ಪೀಠದ ಸದಸ್ಯರಾಗಿ, ದೇವರಾಜ್ ಅರಸು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಜನಪದಶ್ರೀ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಲೈಂಗಿಕ ದಮನಿತರ ರಾಜ್ಯ ಸಮಿತಿಯ ಸದಸ್ಯರಾಗಿ ಆಯಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿರುವ ಶ್ರೀಪಾದ ಶೆಟ್ಟಿಯವರು ತಮ್ಮದೇ ಆದ ಆಲೋಚನಾ ವೇದಿಕೆಯನ್ನು ಕೂಡ ಮಾಡಿಕೊಂಡು ಅದರ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ, ಪ್ರತೀ ವರ್ಷ ಶ್ರಮಜೀವಿ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಕೂಡ ಇವರ ಒಂದು ಸಾಹಿತ್ಯದ ಗುರುತರ ಸೇವೆಯಾಗಿದೆ.