ಕುಮಟಾ : ಆರ್.ಎಸ್ ಭಾಗ್ವತರಂತವರು ನಮ್ಮ ರಾಜ್ಯದಲ್ಲಿ ಸಿಗುವುದು ಬಹು ಅಪರೂಪ. ಅಂತಹ ವಿಶೇಷ ವ್ಯಕ್ತಿತ್ವ ಅವರದ್ದು, ಕಾರ್ಪೋರೇಟ್, ಎಂ.ಎಲ್.ಸಿ, ಸಹಕಾರಿ ರಂಗ, ಅಡಿಕೆ ವ್ಯಾಪಾರ, ಹಂಚಿನ  ಉದ್ಯಮ ಈ ಎಲ್ಲಾ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಿದವರು. ಸಮಾಜದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಅವರು, ನನ್ನನ್ನು ಮಗಳ ಹಾಗೆ ನೋಡಿಕೊಂಡಿದ್ದರು ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಹೇಳಿದರು, ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಕುಮಟಾ (ಪಿ.ಎಲ್.ಡಿ ಬ್ಯಾಂಕ್) ಇದರ ಆವಾರದಲ್ಲಿ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ದಿ. ರಾಮಚಂದ್ರ ಸೀತಾರಾಮ ಭಾಗ್ವತ್ (ಆರ್.ಎಸ್ ಭಾಗ್ವತ್) ರವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ, ಸಾಧಕರನ್ನು ಮಾತನಾಡಿದರು.

ಜನ ಸೇವೆ ಮಾಡುವದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಆರ್.ಎಸ್ ಭಾಗ್ವತ್ ಗುರುತಿಸಿಕೊಂಡವರು. ಅವರು ನನ್ನ ಮೆಂಟರ್ ಆಗಿದ್ದರು ಎಂದ ಅವರು, ಕುಮಟಾದಲ್ಲಿ ಇನ್ನೂ ಎಷ್ಟೋ ಕೆಲಸ ಮಾಡುವುದಿದೆ. ಮಾಡಬಹುದಾಗಿದೆ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ನಮ್ಮ ಕಾಲ‌ ಮುಗೀತಿದೆ‌ ಆದರೆ ಯುವಕರು ಜನ ಸೇವೆಗೆ ಮುಂದಾಗಬೇಕು ಎನ್ನುತ್ತಾ, ಭಾಗ್ವತ ಅವರ ಕುಟುಂಬವೆ ಒಂದು ಸಹಕಾರಿ ಕುಟುಂಬ. ಈಗ ಅವರ ಮಕ್ಕಳು ಭಾಗ್ವತ ಆವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆರ್.ಎಸ್.ಭಾಗ್ವತರ ಮೊಮ್ಮಗ ಈ ಬ್ಯಾಂಕಿನ ಅಧ್ಯಕ್ಷ ಭುವನ್ ಭಾಗ್ವತ ನನ್ನ ಎರಡನೆ ಮಗ ಇದ್ದಂತೆ. ಆತನ ಕಾರ್ಯಶೈಲಿಯನ್ನ  ನಾನು ಮೆಚ್ಚಿದ್ದೇನೆ. ಭುವನ್ ಭಾಗ್ವತ ಅಂತಹ ಕ್ರಿಯಾಶೀಲ ಯುವಕರು ನಮಗೆ ಬೇಕು ಎಂದರು.

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡಿರುವುದನ್ನು ವ್ಯಂಗ್ಯವಾಗಿ ಪ್ರಾಸ್ತಾಪಿಸಿ, ಈ ಮಸೂದೆ ಜಾರಿಯಾಗಲು ೧೦-೧೫ ವರ್ಷ ಬೇಕು ಎಂದು ಹೇಳುತ್ತಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್ ಮಾಡುವ ಮೂಲಕ ಮಹಿಳೆಯರಿಗೆ ಲಾಲಿಪಾಪ್ ಕೊಟ್ಟಿದ್ದಾರೆ.  ಎಂದು  ಕೇಂದ್ರ ಬಿಜೆಪಿ ಸರ್ಕಾರದ ಹೆಸರನ್ನು ಹೇಳದೆ ಪರೋಕ್ಷವಾಗಿ ಟೀಕಿಸಿ, ಮಹಿಳೆಯರ ಶಕ್ತಿ ಅಧಿಕಾರ ಏನು ಎಂದು ನಾವು ತೋರಿಸುತ್ತೇವೆ. ಕಾಲ ಸನ್ನಿಹಿತವಾಗಿದೆ ಎಂದು ಮಾರ್ಗರೇಟ್ ಆಳ್ವಾ ಹೇಳಿದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ‌ ವೈದ್ಯ ಉದ್ಘಾಟನಾ ನುಡಿಗಳನ್ನಾಡುತ್ತಾ, ಆರ್.ಎಸ್ ಭಾಗ್ವತ್ ಅವರು ೬೦ ವರ್ಷಗಳ ಕಾಲ ಜಿಲ್ಲೆಯ ಹಾಗೂ ರಾಜ್ಯಮಟ್ಟದಲ್ಲಿ ಸಹಕಾರ ಕಾರ್ಯದಲ್ಲಿ ಸೇವೆ ಮಾಡಿದಂತವರು ಎನ್ನುತ್ತಾ, ಜಿಲ್ಲೆಯ ಅಭಿವೃದ್ಧಿ ಈವರೆಗೆ ಆಗಿದೆ ಎಂದರೆ ಇಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆ ಕಾರಣ ಎಂದು ಭಾಗ್ವತರು ಹೇಳಿದ ಮಾತುಗಳನ್ನು ಅವರು ಸ್ಮರಿಸಿದರು.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಅರಬೈಲ್ ಘಟ್ಟದಲ್ಲಿ ಉರುಳಿಸಿದ ಲಾರಿ

ನಿರಂತರ ಸೇವೆ ಮಾಡುವ ಉತ್ಕಟತೆ ಅವರಲ್ಲಿತ್ತು. ಜನ ಸೇವೆ ಮಾಡುತ್ತೇನೆ ಎಂದು ಅದೆಷ್ಟೋ ಸಲ ಹೇಳಿಕೊಂಡ ಮಾತುಗಳನ್ನು ವಿವರಿಸಿದ ಅವರು, ಜನಸೇವೆ ಮಾಡುವವರನ್ನು ಜನ ಸದಾ ಸ್ಮರಿಸುತ್ತಾರೆ ಎಂಬುದಕ್ಕೆ ಆರ್.ಎಸ್ ಭಾಗ್ವತರ ಜೀವನ ಸಾಕ್ಷಿ ಎಂದರು. ಕುಮಟಾ ಪಿ.ಎಲ್.ಡಿ ಬ್ಯಾಂಕ್ ಅನ್ನು ಮಾದರಿಯಾಗಿ ರೂಪಿಸಿದವರು ಆರ್.ಎಸ್ ಭಾಗ್ವತರು ಎಂದು ಅವರು ಕೊಂಡಾಡಿದರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮ ಸರ್ವ ಧರ್ಮ ಸಮ್ಮೇಳನದಂತೆ ಕಾಣುತ್ತಿದೆ. ಎಲ್ಲಾ ಜಾತಿ, ಜನಾಂಗದ ಜನ ಆರ್.ಎಸ್ ಭಾಗ್ವತರ ಅಭಿಮಾನದಿಂದ ಇಲ್ಲಿ ಬಂದಿದ್ದಾರೆ ಎನ್ನುತ್ತಾ ಭಾಗ್ವತರ ಒಡನಾಟ ಸ್ಮರಿಸಿಕೊಂಡರು. ಎಂತಹುದೇ ಸಮಸ್ಯೆ ಇದ್ದರೂ ಭಾಗ್ವತರು ಬಗೆಹರಿಸುತ್ತಿದ್ದರು. ಅವರ ಮನೆ ಪಕ್ಷಾತೀತವಾದ ಮನೆಯಾಗಿತ್ತು.  ಇದಕ್ಕೆ ಆರ್. ಎಸ್ ಭಾಗ್ವತರ ಕಾರ್ಯಗಳು ಕಾರಣ ಎಂದು ಅವರು ತಿಳಿಸಿದರು.  

ಮಾರ್ಗರೇಟ್ ಮಾತಿಗೆ ಪ್ರತಿಕ್ರಿಯೆ ನೀಡಿದ ದಿನಕರ ಶೆಟ್ಟಿ, ಮಹಿಳೆಯರು ಶಕ್ತಿ ಪ್ರದರ್ಶನ ಮಾಡುವ ಮಾಡುವುದಾಗಿ ಹೇಳುತ್ತಿರುವುದು, ಮೋದಿ ನೀಡಿದ ಧೈರ್ಯದಿಂದ ಮೋದಿಯವರ ಯೀಜನೆಯಿಂದ ಎಂದು ಮಾತಿನ ಟಾಂಗ್ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವಾ ಮಾತನಾಡಿ ಹಿಂದೆ ತಾಯಿಯ ಜೊತೆ ಪ್ರಚಾರಕ್ಕೆ ಬರುವಾಗ ನಾನು ಆರ್.ಎಸ್ ಭಾಗ್ವತ್ ಅವರ ಮನೆಗೆ ತೆರಳುತ್ತಿದ್ದೆ, ಭಾಗ್ವತ್ ಸದಾ ನಗುಮೊಗದಿಂದ ಎಲ್ಲಾ ಕಾರ್ಯಗಳನ್ನೂ ಮಾಡುತ್ತಿದ್ದರು, ಪ್ರತೀ ಕಾರ್ಯದಲ್ಲಿ ಅವರು ಹೊಸತನ ತೋರುತ್ತಿದ್ದರು. ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದರು. ಅವರ ಮೊಮ್ಮಗ ಭುವನ್ ಜೊತೆಗೆ ಇರುವುದೂ ಸಂತಸ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್ ಮಾತನಾಡಿ ಆರ್.ಎಸ್ ಭಾಗ್ವತರ ಕುಟುಂಬದ ಸದಸ್ಯ ಎಂದುಕೊಳ್ಳಲು ಹೆಮ್ಮೆ ಎನಿಸುತ್ತದೆ. 1966ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ ಕೃಷಿಕರಿಗೆ ಮೊದಲ ಬಾರಿಗೆ ಸಾಲ ಸೌಲಭ್ಯ ಕಲ್ಪಿಸಿ ಮೊದಲ ಬ್ಯಾಂಕ್ ಆಗಿದೆ. ರೈತರು ಆರ್ಥಿಕವಾಗಿ ಪ್ರಬಲವಾಗಲು ಪ್ರಮುಖ ಪಾತ್ರ ವಹಿಸಿದೆ. ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಅರ್.ಎಸ್ ಭಾಗ್ವತರು ನಮಗೆಲ್ಲರಿಗೆ ದಾರಿದೀಪವಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ. ಜನರ ಸಹಕಾರ ಸದಾ ಅಗತ್ತವಿದ್ದು, ಈ ಬ್ಯಾಂಕ್ ಅಭ್ಯುದಯ ನಿಮ್ಮನ್ನು ಅವಲಂಭಿಸಿದೆ ಎಂದರು.

RELATED ARTICLES  ನಿಮ್ಮೂರಿನಲ್ಲಿಯೇ ನಿಮಗೆ ಬದುಕು ಕಟ್ಟಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡುವೆ : ನಿವೇದಿತ್ ಆಳ್ವಾ.

ಶ್ರೀಧರ ಭಾಗ್ವತ ಪ್ರಾಸ್ತಾವಿಕ ಮಾತನಾಡಿ, ಸಹಕಾರಿ ಧರೀಣ ಆರ್.ಎಸ್.ಭಾಗ್ವತ್ ಅವರೊಬ್ಬರು ವ್ಯಕ್ತಿಯಾಗಿರಲಿಲ್ಲ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶ ಹೊಂದಿದ್ದವರಾಗಿದ್ದರು. ಸದಾ ಹಸನ್ಮುಖಿಯಾಗಿಯೇ ಸಮಾಜದ ಸೇವೆ ಗೈದಿದ್ದವರಾಗಿದ್ದಾರೆ. ಇಂದು ಅವರ ಮಗನಾಗಿ ಹುಟ್ಟಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ರೈತರಿಗೆ ಸಾಲ ಕೊಡುವರಿಲ್ಲದ ಕಾಲದಲ್ಲಿ ಅವರಿಗೆ ಅನುಕೂಲವಾಗಲೆಂದು ಗುಡಗಾರಗಲ್ಲಿಯಲ್ಲಿ ಬ್ಯಾಂಕ್ ಪ್ರಾರಂಭಿಸಿದರು. ಬ್ಯಾಂಕಿಗೆ ಸ್ವಂತ ಕಟ್ಟಡ ಬೇಕು ಎಂಬ ಮಹದಾಸೆ ಹೊಂದಿದ್ದರು. ಸದಾ ಜನರೊಂದಿಗೆ ಬೆರೆತು ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಇದೀಗ ನಮ್ಮ ಬ್ಯಾಂಕ್ ಸಾಲ ಕೊಡುವುದರಲ್ಲೂ, ವಸೂಲಾತಿಯಲ್ಲಿಯೂ ಮುಂಚೂಣಿಯಲ್ಲಿದೆ. ಸದಾ ಬಡವರಿಗಾಗಿ ಅವರ ಹೃದಯ ಮಿಡಿಯುತ್ತಿತ್ತು. ಅವರ ಸವಿನೆನಪಿಗಾಗಿ ಕಂಚಿನ ಪ್ರತಿಮೆ ಅನಾವರಣಗೊಳಿಸುವ ಮೂಲಕ ಸದಾಕಾಲ ಅವರ ಹೆಸರು ಶಾಶ್ವತವಾಗಿ ಉಳಿಸುವ ಕಾರ್ಯ ಆಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಜಿ.ಐ ಹೆಗಡೆ ವರದಿ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಆರ್.ಎಸ್.ಭಾಗ್ವರ ಧರ್ಮಪತ್ನಿ ಯಮುನಾ ಭಾಗ್ವತ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. 

ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ, ಅಳ್ಳಂಕಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ ಸಿಂಗ್, ಕೆ.ಡಿಸಿಸಿ ಬ್ಕಾಂಕ್ ಎಮ್.ಡಿ ಆರ್.ಜಿ.ಭಾಗ್ವತ, ಆರ್.ಎಸ್.ಭಾಗ್ವತರ ಮಗ ಸೀತಾರಾಮ ಭಾಗ್ವತ ಹಾಗೂ ಬ್ಯಾಂಕಿನ ನಿರ್ದೇಶಕರಾದ ಗಣಪತಿ ಗಜಾನನ ಹೆಗಡೆ, ಶ್ರೀಕಾಂತ ಬೀರಾ ಪಟಗಾರ, ಅರುಣ ಸೀತಾರಾಮ ಗುನಗಾ,  ವೀಣಾ ವಸಂತ ಶೇಟ್, ನಾಗರತ್ನಾ ಅರುಣ ನಾಯ್ಕ,  ಮಂಜುನಾಥ ಈರು ಮುಕ್ರಿ, ಹರಿಶ್ಚಂದ್ರ ಕೃಷ್ಣ ಭಟ್ಟ, ಶಂಭು ದೇವಪ್ಪ ನಾಯ್ಕ,  ಪ್ರೇಂಕಿ ಸಿಂಜಾವ ಫರ್ನಾಂಡಿಸ್, ನಾರಾಯಣ ಶೇಷಗಿರಿ ನಾಯ್ಕ,ಅನಂತ ನಾಗಪ್ಪ ನಾಯ್ಕ, ಎನ್ ರಘುನಾಥ, ಪರಮೇಶ್ವರ ನಾರಾಯಣ ಭಟ್ಟ, ನಂದಿಕೇಶ್ವರ ರಾಮಕೃಷ್ಣ ಭಟ್ಟ,ರೋಷನ ಮೋಹನ ನಾಯ್ಕ, ವಿನಾಯಕ ಮೋಹನ ನಾಯಕ ಇದ್ದರು.

ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಶ್ರೀರಾಮ ಭಟ್ಟ, ಪಿ.ಎನ್ ಭಟ್ಟ, ವಿನೋದ ಭಟ್ಟ ಸಹಕರಿಸಿದರು. ಸಮಾರಂಭದಲ್ಲಿ ಆರ್.ಎಸ್.ಭಾಗ್ವತರ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಬ್ಕಾಂಕಿನ ವ್ಯವಸ್ಥಾಪಕರು ಹಾಗು ಇತರ ಸಿಬ್ಬಂದಿಗಳು ಸಕಲ ವ್ಯವಸ್ಥೆಗೆ ಸಹಕರಿಸಿದರು.