ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ಮಕ್ಕಳ ಹಬ್ಬದ ಪ್ರಯುಕ್ತ ಚಿಣ್ಣರ ಯಕ್ಷಗಾನ ನಡೆಯಿತು. ಸಭಾ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ .ಎಸ್ ನಾಯ್ಕ ಉದ್ಘಾಟಿಸಿ, “ಕನ್ನಡ ಭಾಷೆ ಹಾಗೂ ಯಕ್ಷಗಾನ ಒಂದಕ್ಕೊಂದು ಪೂರಕವಾಗಿವೆ. ಯಕ್ಷಗಾನದಲ್ಲಿ ಕನ್ನಡ ನುಡಿಯ ಶ್ರೀಮಂತಿಕೆ ಜೀವಂತವಾಗಿದೆ. ಇಲ್ಲಿ ಸಾಹಿತ್ಯ ಇದೆ. ಮಾತುಗಾರಿಕೆ ಇದೆ. ಎಲ್ಲವೂ ಕನ್ನಡ ಭಾಷೆಯಲ್ಲೇ ಇದೆ. ಅಂತಹ ಪ್ರಯತ್ನವನ್ನು ಭವಿಷ್ಯದ ಪ್ರಜೆಗಳಾಗುವ ಮಕ್ಕಳಲ್ಲಿ ತುಂಬುವ ಪ್ರಯತ್ನ ಮಾಡಿರುವಿರಿ. ಇದೊಂದು ಉತ್ತಮ ನಿದರ್ಶನ. ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುವ ಯಕ್ಷಗಾನ ಕಲೆಯನ್ನು ಪೋಷಿಸುವ ಪ್ರಯತ್ನದಲ್ಲಿ ಈ ಶಾಲೆಯ ಶಿಕ್ಷಕರು, ಪಾಲಕ -ಪೋಷಕರು ಪ್ರಯತ್ನಿಸುತ್ತಿರುವುದು ಸಂತೋಷದ ಸಂಗತಿ. ಮಕ್ಕಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದ ಭಾಗವತರಾದ ಗಣಪತಿ ಹೆಗಡೆ ಹಂದಿಮುಲ್ಲೆ ಇವರ ಕೊಡುಗೆಯೂ ಶ್ಲಾಘನೀಯ. ಇಂದು ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಊರಿನ ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆಗೆ ಹೋಗದೆ ಇದೇ ಸ್ಥಿತಿಗಾರ ಶಾಲೆಯಲ್ಲಿ ಓದುತ್ತಿದ್ದಾರೆ. ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಅದರಲ್ಲೂ ಈ ಶಾಲೆಯಲ್ಲಿ ಕಾನ್ವೆಂಟ್ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟದ ಕಲಿಕೆಯನ್ನು ನೀಡುತ್ತಿದ್ದಾರೆ. ಒಂದು ಕಾರ್ಯಕ್ರಮ ಸಂಘಟನೆ ಮಾಡಲು ಹಲವು ದಾನಿಗಳ ನೆರವಿನ ಅಗತ್ಯವಿದೆ. ನೀವು ದಾನಿಗಳಿಂದ ಪಾಲಕ ಪೋಷಕರಿಂದ ಸಹಾಯ ಪಡೆದು ಇಂದಿನ ಕಾರ್ಯಕ್ರಮವನ್ನು ಸಂಯೋಜಿಸಿ ಸುಂದರಗೊಳಿಸಿದ್ದೀರಿ. ಈ ಶಾಲೆಯಲ್ಲಿ ದಾನಿಗಳ ನೆರವಿನಿಂದ ವಿವಿಧ ಕಾಮಗಾರಿಗಳನ್ನು ಪೂರೈಸಿರುವಿರಿ. ಮೂವರು ಶಿಕ್ಷಕರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುವಂತಾದರೆ ಇನ್ನು ಒಂದು ಶಿಕ್ಷಕರನ್ನು ಕೊಡಬಹುದು. ಆ ನಿಟ್ಟಿನಲ್ಲಿ ನೀವು ಪ್ರಯತ್ನಿಸಿ. ಈ ಶಾಲೆಯಲ್ಲಿ ಕಲಿಸುತ್ತಿರುವ ಶಿಕ್ಷಕರಿಂದ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಇಂದು ಒಳ್ಳೆಯ ಉದ್ಯೋಗದಲ್ಲಿದ್ದಾರೆ ಎನ್ನುವುದನ್ನು ಪಾಲಕರು ಉದಾಹರಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯವೂ ಉತ್ತಮವಾಗಿರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸರಕಾರಿ ಶಾಲೆಗಳಲ್ಲಿ ಶೇಕಡಾ ಐವತ್ತಿಕ್ಕಿಂತ ಹೆಚ್ಚಿನ ಶಿಕ್ಷಕರು ಬಿ.ಎಡ್.ಎಂ.ಎ. ಮಾಡಿಕೊಂಡ ಶಿಕ್ಷಕರಿದ್ದಾರೆ. ಆದ್ದರಿಂದ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ”ಎಂದರು.

RELATED ARTICLES  ಡೆಂಗ್ಯೂ ಜ್ವರಕ್ಕೆ ಭಟ್ಕಳದಲ್ಲಿ ಇನ್ನೋರ್ವ ಬಲಿ? : ಉತ್ತರಕನ್ನಡದಲ್ಲಿ ಜ್ವರದಿಂದಾಗಿ ಎರಡನೇ ಸಾವು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರಾದಿಯಾಗಿ ಪಾಲಕರು ಹಾಗೂ ದಾನಿಗಳು ಶ್ರಮವಹಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಈ ಶಾಲೆಗೆ ಭೇಟಿ ನೀಡಿದ್ದೆ. ಅಂದಿನ ಆ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದವು. ಭೌತಿಕ ಸೌಲಭ್ಯ ಕಡಿಮೆಯಿತ್ತು. ಇಂದು ಹಾಗಿಲ್ಲ. ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಾಗಿವೆ. ಉತ್ತಮ ಶಿಕ್ಷಕರಿದ್ದಾರೆ. ಆದರೆ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಿದೆ. ಮಕ್ಕಳಿಗೆ ಈ ಶಾಲಾ ಶಿಕ್ಷಕರು ಪಾಲಕರಂತೆಯೂ ಇದ್ದು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಶಿಕ್ಷಣವನ್ನು ಗುಣಮಟ್ಟದಲ್ಲಿ ನೀಡುತ್ತಿದ್ದಾರೆ. ಇಂದು ಯಕ್ಷಗಾನ ಕಲೆಯನ್ನು ಉಳಿಸುವ ಪ್ರಯತ್ನದಲ್ಲಿ ನೀವೆಲ್ಲ ಹೊಸತೊಂದು ಸಂಕಲ್ಪ ಮಾಡಿರುವಿರಿ. ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮಕ್ಕೆ ಮಕ್ಕಳು ನೀಡುತ್ತಿರುವ ಯಕ್ಷಗಾನ ಪುಷ್ಟಿ ನೀಡುತ್ತಿದೆ. ಭಾಗವತರು ಆಸಕ್ತಿಯಿಂದ ಮಕ್ಕಳಿಗೆ ಬೇಕಾದ ತರಬೇತಿಯನ್ನು ನೀಡಿದ್ದಾರೆ ಎಂಬ ವಿಷಯ ತಿಳಿದು ಸಂತೋಷವಾಯಿತು. ಈ ಶಾಲೆಯಲ್ಲಿ ಇರುವ ಬಹುತೇಕ ಎಲ್ಲಾ ಮಕ್ಕಳು ಈ ದಿನದಂದು ಪಾತ್ರ ಮಾಡುತ್ತಿದ್ದಾರೆ ಎನ್ನುವುದೇ ಒಂದು ದೊಡ್ಡ ಸಾಧನೆ. ದೊಡ್ಡ ದೊಡ್ಡ ಶಾಲೆಗಳಲ್ಲಿ ಪಾತ್ರಧಾರಿಗಳ ಆಯ್ಕೆಗೆ ಅವಕಾಶ ಇರುತ್ತದೆ. ಆದರೆ ಇಲ್ಲಿ ಹಾಗಲ್ಲ. ಇರುವ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಸಿದ್ಧಗೊಳಿಸುವುದು ಒಂದು ಸವಾಲು. ಅಂತಹ ಸವಾಲುಗಳನ್ನು ಎದುರಿಸಿ ಚಿಣ್ಣರಿಗೆ ಯಕ್ಷಗಾನ ತರಬೇತಿ ನೀಡಿ ಅವರಿಗೆ ವೇದಿಕೆಯನ್ನು ಒದಗಿಸಿರುವಿರಿ. ಇದೊಂದು ಸಂತಸದ ವಿಷಯ. ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಸಂತೋಷವಾಗುತ್ತಿದೆ”ಎಂದರು.


ಎಸ್.ಡಿ.ಎಂ.ಸಿ.ಸದಸ್ಯರಾದ ಕಾಲೇಜು ಉಪನ್ಯಾಸಕರಾದ ವಿನಾಯಕ ಭಟ್ಟ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ “ಶಾಲೆ ನಡೆದು ಬಂದ ದಾರಿಯನ್ನು ನೆನಪಿಸುತ್ತಾ ಕನ್ನಡ ಉಳಿಸುವ ಪ್ರಯತ್ನದಲ್ಲಿ ನಾವು ಮುಂದಾಗಬೇಕು. ಶಿಕ್ಷಕರು ಆಸಕ್ತಿ ವಹಿಸಿದರೆ ರಚನಾತ್ಮಕ ಯಾವ ಕಾರ್ಯಗಳನ್ನಾದರೂ ಯಶಸ್ವಿಯಾಗಿ ನಿರ್ವಹಿಸಬಹುದು. ಅಂತಹ ಒಂದು ಪ್ರಯತ್ನದಲ್ಲಿ ಈ ಶಾಲೆಯ ಶಿಕ್ಷಕರು ಮುಂದಾಗಿದ್ದಾರೆ. ರಾಜ್ಯೋತ್ಸವದ ಸಂಭ್ರಮದ ಸವಿ ಅನುಭವಿಸಲು ಯಕ್ಷಗಾನ ಸೂಕ್ತವಾದ ವೇದಿಕೆ. ಇಲ್ಲಿಯ ಸಾಹಿತ್ಯ ಶ್ರೀಮಂತವಾಗಿದೆ. ಮಕ್ಕಳ ಹಬ್ಬದ ಹೆಸರಿನಲ್ಲಿ ಇಂದು ಮಕ್ಕಳಿಂದ ಯಕ್ಷಗಾನ ನಡೆಯುಲಿಕ್ಕಿದೆ. ಇದಕ್ಕೆ ಕಾರಣ ಭಾಗವತರಾದ ಗಣಪತಿ ಹೆಗಡೆ. ಇವರು ಸವ್ಯಸಾಚಿ. ಭಾಗವತರಾಗಿ, ಕಲಾವಿದರಾಗಿ, ಮದ್ದಲೆವಾದಕರಾಗಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ್ದಾರೆ. ಸುಮಾರು ನಲವತ್ತು ದಿನಗಳ ಕಾಲ ಶಾಲಾ ಬಿಡುವಿನ ವೇಳೆಯಲ್ಲಿ ಮಕ್ಕಳ ಅಭ್ಯಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ತರಬೇತಿ ನೀಡಿದ್ದಾರೆ. ಈ ಶಾಲೆಯ ಶಿಕ್ಷಕರ ಸಹಕಾರವೂ ಈ ತರಬೇತಿಯಲ್ಲಿದೆ. ಕನ್ನಡ ಉಳಿಸುವ ಹಾಗೂ ಯಕ್ಷಗಾನ ಪೋಷಿಸುವ ಪ್ರಯತ್ನದಲ್ಲಿ ಶಿಕ್ಷಕರು ಹಾಗೂ ಗಣಪತಿ ಹೆಗಡೆ ಭಾಗಿಯಾಗಿರುವುದು ನಮಗೆ ಸಂತೋಷ ತಂದಿದೆ” ಎಂದರು.

RELATED ARTICLES  ಹೊನ್ನಾವರ: ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ಫೇ.12 ಕ್ಕೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಲ್ಕೋಡ ಪಂಚಾಯಿತಿ ಅಧ್ಯಕ್ಷೆ ಯಮುನಾ ನಾಯ್ಕ ಶಾಲಾ ಪ್ರಗತಿ ಮತ್ತು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ದತ್ತಾತ್ರಯ ಅವಧಾನಿ ವಿಷ್ಣು ಮೂರ್ತಿ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾದ ಸುರೇಶ ಆಚಾರಿ ಮತ್ತು ಗಣೇಶ ಹೆಗಡೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪಾರ್ವತಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಹೆಗಡೆ ವಂದಿಸಿದರು. ಉಪನ್ಯಾಸಕ ವಿನಾಯಕ ಭಟ್ಟ ನಿರೂಪಿಸಿದರು. ಶಿಕ್ಷಕಿ ಸಾವಿತ್ರಿ ದೇವಡಿಗ ಸಹಕರಿಸಿದರು.


ನಂತರ ಶಾಲಾ ಚಿಣ್ಣರಿಂದ ಧರ್ಮಾಂಗದ ದಿಗ್ವಿಜಯ ಪೌರಾಣಿಕ ಯಕ್ಷಗಾನ ನಡೆಯಿತು. ಧರ್ಮಾಂಗದನ ಪಾತ್ರದಲ್ಲಿ ಪ್ರಣವ ಗೌಡ ಹಾಗೂ ಹೃತ್ವಿಕ್ ನಾಯ್ಕ, ದೂತನ ಪಾತ್ರದಲ್ಲಿ ರಿತ್ವಿಕ್ ಹೆಗಡೆ,ಭರತನಾಗಿ ಗೌಡ, ಬಲಿಯಾಗಿ ಅಥರ್ವ ಭಟ್ಟ ರುಕ್ಮಾಂಗದನ ಪಾತ್ರದಲ್ಲಿ ದೀಕ್ಷಾ ಆಚಾರಿ,ಮಂತ್ರಿ-ವಚನ ಅವಧಾನಿ, ಕಂಬಲಾಶ್ವನಾಗಿ ಅನಂತ ಹೆಗಡೆ ನಾರದನ ಪಾತ್ರದಲ್ಲಿ ಕವನ ಆಚಾರಿ ವಿಷ್ಣುವಾಗಿ ಹರ್ಷ ಹೆಗಡೆ, ಮಹಿಶಾಕ್ಷನ ಪಾತ್ರದಲ್ಲಿ ಪವನ ಗೌಡ, ಬಾಲಗೋಪಾಲರಾಗಿ ಕೆ.ವಿ.ಅಂಕಿತ ಮತ್ತು ಶ್ರಾವಣಿ ಕಾಣಿಸಿಕೊಂಡರು.

ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಹೆಗಡೆ ಮದ್ದಲೆವಾದಕರಾಗಿ ಪಿ.ಕೆ.ಹೆಗಡೆ, ಚಂಡೆ ವಾದಕರಾಗಿ ಕುಮಾರ ಮಯೂರ ಭಾಗವಹಿಸಿದ್ದರು. ಉತ್ತಮ ರೀತಿಯಲ್ಲಿ ನಡೆದ ಈ ಆಖ್ಯಾನ ನೋಡಲು ಸುತ್ತಮುತ್ತಲಿನ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.