ಕುಮಟಾ : ಕೂಟ ಕಲೆಯಾದ ಯಕ್ಷಗಾನ ನಮ್ಮೆಲ್ಲರ ಬದುಕಿನ ಜೀವಾಳ, ಈ ಕಲೆಯನ್ನು ನಾವೆಲ್ಲಾ ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ, ವಿದ್ಯಾರ್ಥಿಗಳು ಈ ಕಲೆಯನ್ನು ಕಲಿತು ಜೀವನದಲ್ಲಿ ಭಾಷೆಯನ್ನು, ಭಾವನೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳುವಂತೆ ನಿವೃತ್ತ ಪ್ರಾಧ್ಯಾಪಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು, ಸ್ಥಳೀಯ ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಯಕ್ಷಗಾನ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನವು ಭಾರತದ ಹಾಗೂ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಳಗೊಂಡಿದೆ. ಅದರ ಮೂಲವು ಪ್ರಾಚೀನ ಸಂಪ್ರದಾಯಗಳು ಮತ್ತು ಪೌರಾಣಿಕ ಕಥೆಗಳಲ್ಲಿ ಬೇರೂರಿದೆ. ಯಕ್ಷಗಾನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಒಂದು ಆಕರ್ಷಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ ಎಂದ ಅವರು ವಿದ್ಯಾರ್ಥಿಗಳು ಯಕ್ಷಗಾನ ಕಲೆಯನ್ನು ಕಲಿತು ಮುಂದಿನ ಕಾಲಕ್ಕೆ ಈ ಕಲೆಯನ್ನು ಉಳಿಸುವ ಕಾರ್ಯ ಮಾಡಿರಿ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಆರ್. ನಾಯಕ್ ಮಾತನಾಡಿ, ಯಕ್ಷಗಾನ ಜೀವನದ ಮೌಲ್ಯಗಳನ್ನು ಹಾಗೂ ನೈತಿಕತೆಯನ್ನು ಬೆಳೆಸುತ್ತದೆ. ಅಂತಹ ಕಲೆಯನ್ನು ಒಪ್ಪಿಕೊಳ್ಳುವುದಕ್ಕೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಕೋಣಾರೆ ಮಾತನಾಡಿ, ಯಕ್ಷಗಾನ ಇದು ನಮ್ಮೆಲ್ಲರ ಸಾಂಸ್ಕೃತಿಕ ವೈಭವ. ಆ ಕಲೆಯನ್ನು ಆರಾಧಿಸುವ ಮೂಲಕ ನಾವೆಲ್ಲ ಸಂಸ್ಕಾರವಂತರಾಗೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಧ್ಯಕ್ಷ ಆರ್.ಜಿ. ಭಟ್ಟ ಮಾತನಾಡಿ, ಈ ಭಾಗದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಮುಂದಿನ ಪೀಳಿಗೆ ಹಸ್ತಾಂತರಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ತಾವೆಲ್ಲ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿ ಯಕ್ಷಗಾನ ಶಾಲೆಯ ರೂಪುರೇಷೆಯ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಭಾರತಿ ಕಲಾಕೇಂದ್ರದ ಸಂಚಾಲಕರಾದ ಡಿ. ಸಿ .ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಜಿ. ವಿ ಹೆಗಡೆ ಸ್ವಾಗತಿಸಿದರು, ಶಿಕ್ಷಕಿ ಗಾಯತ್ರಿ ಹೆಬ್ಬಾರ ವಂದಿಸಿದರು. ಶಿಕ್ಷಕ ಲೊಕೇಶ್ ಹೆಗಡೆ ಹಾಗೂ ಜಿ. ಆರ್. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಊರ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.