ಕುಮಟಾ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಠ್ಯಕ್ರಮಕ್ಕೆ ನೀಡುವ ಮಹತ್ವ ಪಠ್ಯೇತರ ಚಟುವಟಿಕೆಗಳಿಗೆ ನೀಡುತ್ತಿಲ್ಲದಿರುವುದು ವಿಷಾದದ ಸಂಗತಿಯಾಗಿದೆ ಎಂದು ಖ್ಯಾತ ವಾಲಿಬಾಲ್ ಆಟಗಾರ ರಮೇಶ ಪ್ರಭು ಹೇಳಿದರು. ಅವರು ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕವಾಗಿದೆ. ಸರಸ್ವತಿ ಪಿ.ಯು ಕಾಲೇಜಿನವರು ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿ ಈ ಕ್ರೀಡಾಕೂಟವನ್ನು ಬಳಸಿಕೊಳ್ಳಬೇಕು ಎಂದರು.
ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಕ್ರೀಡೆಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ, ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್ಟ, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕ ಪದ್ಮನಾಭ ಪ್ರಭು ಹಾಗೂ ನಿರ್ಣಾಯಕರಾದ ದಿವಾಕರ, ಸುಮಂಗಲಾ ನಾಯ್ಕ, ಜಯರಾಜ ಶೇರುಗಾರ, ನಾಗಾರಾಜ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಚಿದಾನಂದ ಭಂಡಾರಿ ನಿರೂಪಿಸಿದರು.
ಅಥ್ಲೆಟಿಕ್ಸ್, ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಚೆಸ್, ಕೇರಮ್ ಮುಂತಾದ ಕ್ರೀಡಾಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಹಳ ಹುಮ್ಮಸ್ಸಿನಿಂದ ಭಾಗವಹಿಸಿದರು.