ಶಿರಸಿ: ಮುಂಡಗೋಡ ತಾಲೂಕಿನ ಗುಂಜಾವತಿ ಗ್ರಾಮದ
ಬಿಜೆಪಿ ಕಾರ್ಯಕರ್ತ ಸೈಯದ್ ಮೊಹಮ್ಮದ್ ಗೌಸ್ (57) ಡಯಾಲಿಸಿಸ್ ಸೇವೆ ಸಿಗದೇ ಮೃತಪಟ್ಟಿರುವುದಕ್ಕೆ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಚಿವರ ನಿರ್ಲಕ್ಷ್ಯ ಧೋರಣೆಯೇ ಕಾರಣ. ಆರೋಗ್ಯ ಸಚಿವ ದಿನೇಶ ಗುಂಡೂರಾವ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದಲ್ಲದೇ, ಮೃತನ ಪುತ್ರನಿಗೆ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಧರಣಿ ಕುಳಿತು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಸದಸ್ಯ ಹಾಗೂ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಗೌಸ್, ಹಿಂದೂ, ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಆಗಿದ್ದರು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಅಂಥ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು‌‌. ಕೇವಲ ಮುಂಡಗೋಡ ಮಾತ್ರವಲ್ಲ. ಜಿಲ್ಲೆಯ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚಾವತಾರ ತಾಂಡವಾಡುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಣ ಕೇಳುವುದು ಸಾಮಾನ್ಯವಾಗಿದೆ. ಸಚಿವ ದಿನೇಶ ಗುಂಡೂರಾವ ತಕ್ಷಣ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ, ಇಲ್ಲಿನ ಸಮಸ್ಯೆ ಅರ್ಥೈಸಿಕೊಂಡು, ಸೂಕ್ತ ಪರಿಹಾರ ಒದಗಿಸಬೇಕು ಎಂದರು.

RELATED ARTICLES  ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

ಆರೋಗ್ಯ ಪಡೆಯವುದು ಎಲ್ಲರ ಮೂಲಭೂತ ಹಕ್ಕು ಹಾಗೂ ಎಲ್ಲರಿಗೂ ಆರೋಗ್ಯ ಒದಗಿಸುವುದು ಸರ್ಕಾರದ ಕೆಲಸ. ಡಯಾಲಿಸಿಸ್ ಸಿಬ್ಬಂದಿಗಳು ಮುಷ್ಕರ ಹಮ್ಮಿಕೊಳ್ಳಲಿದ್ದಾರೆ ಎಂದು ಸರಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಮೊದಲೇ ಗೊತ್ತಿದ್ದರೂ ಸಹ ಪರ್ಯಾಯ ವ್ಯವಸ್ಥೆ ಏಕೆ ಮಾಡಲಿಲ್ಲ. ಡಯಾಲಿಸಿಸ್ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ಆಗುವ ಪ್ರಾಣಾಹುತಗಳ ಕುರಿತು ಸರಕಾರಕ್ಕಾಗಲಿ, ಆರೋಗ್ಯ ಇಲಾಖೆಗಾಗಲಿ ಪ್ರಜ್ಞೆ, ವಿವೇಚನೆ ಇರಲಿಲ್ಲವೆ ಎಂದು ಪ್ರಶ್ನಿಸಿದರು.

ಮೊಹ್ಮದ ಗೌಸ್ ಸಯ್ಯದ್‌ಗೆ ಚಿಕಿತ್ಸೆ ದೊರೆಯುತ್ತಿದ್ದರೆ ಅವರು ಬದುಕುತ್ತಿದ್ದರು. ಸರಕಾರ ಹಾಗೂ ಆರೋಗ್ಯ ಇಲಾಖೆಯು ಒಬ್ಬ ಬಡವನ ಜೀವ ತೆಗೆದಿದೆ ಎಂದೇ ಹೇಳಬೇಕಾಗುತ್ತದೆ. ಸರ್ಕಾರಿ ದವಾಖಾನೆಗಳ ಮೇಲೆ ಅವಲಂಬಿತರಾಗಿರುವವರಲ್ಲಿ ಸಿಂಹಪಾಲು ಬಡವರಾಗಿರುತ್ತಾರೆ. ಇಂಥ ಬಡವರು ದೂರದ ಹುಬ್ಬಳ್ಳಿ ಅಥವಾ ಮತ್ತೆಲ್ಲಿಯೋ ದುಬಾರಿ ಬೆಲೆ ತೆತ್ತು ಡಯಾಲಿಸಿಸ್ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

RELATED ARTICLES  JEE (MAIN) ಪರೀಕ್ಷೆಯಲ್ಲಿ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಡಯಾಲಿಸಿಸ್ ಸೇವೆ ಸಿಗದೇ ನಮ್ಮ ತಂದೆಯ ಸಾವಿಗೆ ಆರೋಗ್ಯ ಸಿಬ್ಬಂದಿಗಳು ಹಾಗೂ ಡಯಾಲಿಸಿಸ್ ಸಿಬ್ಬಂದಿಯೇ ಕಾರಣ ಎಂದು ಮೃತರ ಪುತ್ರ ಹೇಳುತ್ತಿದ್ದಾರೆ. ಅವರ ಮಗ ರಿಜ್ಞಾನ ಸಯ್ಯದ್ ಹೇಳುವ ಹಾಗೆ ಅವರ ಕುಟುಂಬಕ್ಕೆ ಡಯಾಲಿಸಿಸ್ ಸಿಬ್ಬಂದಿಯಾಗಲಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಲಿ ನಾವು ಬರುವವರೆಗೆ ಖಾಸಗಿಯಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಿ ಎಂದು ಹೇಳಿದ್ದರೆ ಅವರು ಸಾಲ ಮಾಡಿಯಾದರೂ ತಂದೆಯ ಜೀವ ಉಳಿಸಿಕೊಳ್ಳುತ್ತಿದ್ದರು ಎಂದರು.

ರಿಜ್ವಾನ ಸಯ್ಯದ ಮಾತನಾಡಿ, ನಮ್ಮ ತಂದೆಯವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಇಲ್ಲಿಯವರೆಗೂ ಒಂದಿಬ್ಬರನ್ನು ಹೊರತುಪಡಿಸಿ, ಮತ್ಯಾರೂ ಧುರೀಣರು, ಕಾರ್ಯಕರ್ತರು ಆಗಮಿಸಲಿಲ್ಲ. ಧುರೀಣರಾದ ನೀವೊಬ್ಬರೇ ಬಂದು ನಮ್ಮ ಕಷ್ಟಕೇಳಿ, ಸಾಂತ್ವನ ಹೇಳಿ, ಧೈರ್ಯ ತುಂಬಿದ್ದೀರಿ. ಯಾವುದೇ ಕಷ್ಟ ಬಂದರೂ ನಾನು ನಿಮ್ಮ ಜೊತೆಯಲ್ಲಿದ್ದೇನೆ ಎಂದು ಹೇಳಿದ್ದಿರಿ. ಧನ ಸಹಾಯ ನೀಡಿದ್ದೀರಿ. ತಮ್ಮಂತ ನಾಯಕರು ಸಿಗುವುದು ಅಪರೂಪದಲ್ಲಿ ಅಪರೂಪ ಎಂದ ರಿಜ್ವಾನ ಆನಂತಮೂರ್ತಿಯವರಿಗೆ ಧನ್ಯವಾದ ತಿಳಿಸಿದ್ದಾರೆ.