ಕುಮಟಾ : ಸಮಾಜಮುಖಿ ಚಿಂತನೆಗಳ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕುಮಟಾದ ವಿವೇಕ ನಗರ ವಿಕಾಸ ಸಂಘದ ಆಶ್ರಯದಲ್ಲಿ ವಿವೇಕನಗರ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ನಡೆಯಿತು. ಸುಮಾರು ೩೦೦ ಕ್ಕೂ ಅಧಿಕ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.

ಮಂಗಳೂರು ದೇರಳಕಟ್ಟೆಯ ಪ್ರಸಿದ್ಧ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರುಗಳು ಪಾಲ್ಗೊಂಡು ನೋಂದಾಯಿತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು. ಶಿಬಿರದಲ್ಲಿ ಅನುಭವೀ ವೈದ್ಯರುಗಳಾದ ಎಲುಬು ಮತ್ತು ಕೀಲು ತಜ್ಞ ಡಾ.ಪಿ.ನಿರ್ಮಲ್ ಬಾಬು,

ಕಿವಿ, ಮೂಗು, ಗಂಟಲು ತಜ್ಞ ಡಾ.ಶಶಾಂಕ್ ಕೋಟ್ಯಾನ್, ವೈದ್ಯಕೀಯ ತಜ್ಞ ಡಾ.ಈರಪ್ಪ , ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ನಾಗಶ್ರೀ ಎನ್.ವಿ. ಮತ್ತು ಶಸ್ತ್ರಚಿಕಿತ್ಸಾ ತಜ್ಞ ಡಾ.ಮಹೇಂದ್ರ ರೆಡ್ಡಿ ಅವರುಗಳು ರೋಗಿಗಳ ತಪಾಸಣೆ ನಡೆಸಿದರು.

ವೈದ್ಯರುಗಳು ಸೂಚಿಸಿದ ರೋಗಿಗಳಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಇ.ಸಿ.ಜಿ.ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಿ ಶಿಬಿರ ಗಮನ ಸೆಳೆಯಿತು. 

ಶಿಬಿರದ ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆ.ಎಸ್ ಹೆಗ್ಡೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೈಸನ್ ಮಾತನಾಡಿ ರಾಮಚಂದ್ರಾಪುರ ಮಠದ ಸಂಪರ್ಕದಿಂದ ಈ ಭಾಗದಲ್ಲಿ ಶಿಬಿರ ಪ್ರಾರಂಭಿಸಿದೆವು, ಬಳ್ಳಾರಿಯಿಂದ ಕೇರಳದ ಕಾಸರಗೋಡಿನ ವರೆಗೆ ನಾವು ಬೇರೆ ಬೇರೆ ಶಿಬಿರ ಸಂಯೋಜಿಸಿದ್ದೇವೆ. ಒಂದು ಸಾವಿರ ಬೆಡ್ ಹೊಂದಿರುವ ಸುಸಜ್ಜಿತ ಆಸ್ಪತ್ರೆ ನಮ್ಮದು. ಜೀವ ಉಳಿಸುವ ನಿಟ್ಟಿನಲ್ಲಿ ಎಲ್ಲಾ ವೈದ್ಯರು ಪರಿಶ್ರಮವಹಿಸುತ್ತಿರುವುದನ್ನು ಗಮನಿಸಬಹುದು ಎಂದರು. ಶಿಬಿರ ಕಾರ್ಡ ನೀಡುತ್ತಿದ್ದೇವೆ. ಉಚಿತ ಔಷಧ ನೀಡುತ್ತಿದ್ದೇವೆ. ಹಿರಿಯ ವೈದ್ಯರುಗಳ ದೂರವಾಣಿ ಸಂಖ್ಯೆ ಪಡೆದು, ಅವರನ್ನು ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ ನೇರವಾಗಿ ನೀವು ಆಸ್ಪತ್ರೆಯ ಸೌಲಭ್ಯ ಪಡೆಯಬಹುದು. ಜನರ ಜೀವ ಉಳಿಸುವ ಪ್ರಯತ್ನವನ್ನು ಹಗಲು ರಾತ್ರಿ ನಾವು ಮಾಡುತ್ತಿದ್ದೇವೆ ಎಂದರು.

RELATED ARTICLES  ಕಾರು ಅಪಘಾತ : ಅಂತ್ಯಕ್ರಿಯೆಗೆ ಹೊರಟವರೂ ಮಸಣ ಸೇರಿದರು..!

ಶಿಬಿರ ಸಂಯೋಜಕ ಅರುಣ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿ ಹಿರಿಯರು ಹರಸುವಾಗ ಆಯಸ್ಸು, ಆರೋಗ್ಯ, ಐಶ್ವರ್ಯ ಸಿಗಲೆಂದು ಹರಸುತ್ತಾರೆ. ಆರೋಗ್ಯಕ್ಕೆ ಅಷ್ಟು ಮಹತ್ವ ನೀಡುತ್ತಿದ್ದರು. ಹೀಗಾಗಿ ಇಂತಹ ಆರೋಗ್ಯ ರಕ್ಷಣೆ ಕಾರ್ಯಕ್ಕೆ ಈ ಶಿಬಿರ ಹಮ್ಮಿಕೊಂಡಿದ್ದೇವೆ. ಕೆ.ಎಸ್ ಹೆಗಡೆ ಆಸ್ಪತ್ರೆಯವರು ರೋಗಿಗಳಿಗೆ ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಜನರಿಗೆ ತೀರಾ ಅಗತ್ಯವಾದ ಆರೋಗ್ಯ ಶಿಬಿರವನ್ನು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಹಮ್ಮಿಕೊಂಡ ಧನ್ಯತೆ ಇದೆ ಎಂದರು.

RELATED ARTICLES  ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಹೊಸ ಪ್ರಯತ್ನ: ಮಾದರಿಯಾಯ್ತು ರೈಲು ಭೋಗಿ ಹೋಲುವ ಶಾಲೆ.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿವೇಕ ನಗರ ವಿಕಾಸ ಸಂಘದ ಅಧ್ಯಕ್ಷ ಎಂ.ಆರ್ ನಾಯಕ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪ್ರಸಿದ್ಧ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರು ಎಲ್ಲಿಗೆ ಬಂದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ವಿವೇಕ ನಗರ ವಿಕಾಸ ಸಂಘವು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಸಂಯೋಜಿಸುತ್ತಿದ್ದು, ಸಾರ್ವಜನಿಕರ ಸಹಕಾರ ಅತ್ಯಮೂಲ್ಯವಾದದ್ದು ಎಂದರು.

ಸಂಘಟದ ಚಟುವಟಿಕೆಗಳಿಗಳ ಬಗ್ಗೆ ವಿವರಿಸಿ, ಕಾರ್ಯಕ್ರಮವನ್ನು ಜಯದೇವ ಬಳಗಂಡಿ ನಿರೂಪಿಸಿದರು. ಜನಾರ್ಧನ ನಾಯ್ಕ ವಂದಿಸಿದರು. ಎಲುಬು ಮತ್ತು ಕೀಲು ತಜ್ಞ ಡಾ.ಪಿ.ನಿರ್ಮಲ್ ಬಾಬು, ಮುಖ್ಯಶಿಕ್ಷಕಿ ಮಹಾದೇವಿ ಗೌಡ ವೇದಿಕೆಯಲ್ಲಿದ್ದರು. ಸಂಘದ ಸದಸ್ಯರುಗಳಾದ ಸಂಜಯ ಪಂಡಿತ, ಮಹಾಬಲೇಶ್ವರ ಶೇಟ್, ವಿ.ವಿ ಹೊಸ್ಕಟ್ಟಾ, ಮೋಹನ ಗುನಗಾ, ಜನಾರ್ಧನ ನಾಯ್ಕ, ತಿಮ್ಮಪ್ಪ ಮುಕ್ರಿ, ಕಾಮೇಶ್ವರ ಭಟ್ಟ ಸಹಕರಿಸಿದರು.