ಹೊನ್ನಾವರ: ತಾಲೂಕಿನ ಕಡ್ಲೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಆವರಣವು ಶನಿವಾರ ಅಕ್ಷರಶ: ವಾರದ ಸಂತೆಯ ರೂಪ ಪಡೆದಿತ್ತು. ಈ ಸಂತೆಯ ವಿಶೇಷವೆಂದರೆ ವಿದ್ಯಾರ್ಥಿಗಳೆಲ್ಲ ವ್ಯಾಪಾರಿಗಳಾಗಿದ್ದರೆ,ಆಗಮಿಸಿದ ಪಾಲಕರು ಪೋಷಕರು ಊರಿನ, ಅಕ್ಕಪಕ್ಕದ ಜನರು ಮಕ್ಕಳಿಂದ ಸ್ಥಳೀಯ ಗೆಡ್ಡೆ-ಗೆಣಸು, ಸೊಪ್ಪು ತರಕಾರಿ, ತಿಂಡಿ ತಿನಿಸು, ಶಾಲಾ ಸಾಮಗ್ರಿ ಹೀಗೆ ವಿವಿಧ ವಸ್ತುಗಳನ್ನು ಖರೀದಿಸಿದರು. ಪಾಲಕರು, ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹಿಸುತ್ತಿರುವುದು ಕಂಡುಬಂತು. ವಿದ್ಯಾರ್ಥಿಗಳು ತಮ್ಮ ಸಾಮಗ್ರಿಗಳನ್ನು ಖಾಲಿ ಮಾಡಲು ಪ್ರಚಾರವನ್ನೂ ಮಾಡುತ್ತಿದ್ದುದು ವಿಶೇಷವಾಗಿತ್ತು. ಮಧ್ಯಾಹ್ನದ ವೇಳೆಗೆ ತಂದ ವಸ್ತುಗಳೆಲ್ಲ ಖಾಲಿಯಾಗಿ ಮಕ್ಕಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಗಣಿತದ ಪರಿಕಲ್ಪನೆಗಳಿಗೆ ಪ್ರಾಯೋಗಿಕ ಅನುಭವ ಒದಗಿಸುವ ಉದ್ದೇಶದ ಈ ಸಂತೆಗೆ ಕಡ್ಲೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಭಟ್ಟ, ಸಿ.ಆರ್.ಪಿ ಶ್ರೀ ಈಶ್ವರ ಭಟ್ಟ ಭೇಟಿ ನೀಡಿ ಮಕ್ಕಳೊಂದಿಗೆ ವ್ಯವಹಾರ ಮಾಡಿ ಪ್ರೋತ್ಸಾಹಿಸಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಗೌಡ, ಉಪಾಧ್ಯಕ್ಷೆ ಶ್ರೀಮತಿ ಭಾರತಿ ಭಟ್ಟ ಎಸ್.ಡಿ.ಎಮ್.ಸಿ ಸದಸ್ಯರು, ಶಿಕ್ಷಕರಾದ ಶ್ರೀ ಭಾಸ್ಕರ ಭಟ್ಟ,ಶ್ರೀ ಲಕ್ಷ್ಮೀಶ ಹೆಗಡೆ, ಪಾಲಕ ಪೋಷಕರು, ಹಳೆಯ ವಿದ್ಯಾರ್ಥಿಗಳು ವ್ಯವಸ್ಥೆಗೆ ಸಹಕರಿಸಿದರು. ಮುಖ್ಯಾಧ್ಯಾಪಕ ಜನಾರ್ಧನ ನಾಯ್ಕ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.