ಕುಮಟಾ: ಪಟ್ಟಣದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಪೊಲೀಸ್ ಇಲಾಖೆಯ ವೈಫಲ್ಯ ಸರಿಯಾಗಿ ಗೋಚರಿಸುತ್ತದೆ. ಕಳ್ಳರನ್ನು ಶೀಘ್ರ ಬಂಧಿಸದಿದ್ದರೆ ತಾಲೂಕಿನಾಧ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸುವರ್ಣಕಾರ ಸಂಘದ ತಾಲೂಕಾಧ್ಯಕ್ಷ ಮಧುಸೂಧನ ಶೇಟ್ ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಕಳ್ಳರ ಪತ್ತೆ ಹಚ್ಚಲು ಕಷ್ಟವೇನಿಲ್ಲ. ರಾತ್ರಿ ಪಟ್ಟಣದಲ್ಲಿ ಸಂಚರಿಸುವ ಗಸ್ತು ವ್ಯವಸ್ಥೆ ಸಮರ್ಪಕವಾಗಿಲ್ಲ. ಪಟ್ಟಣದಲ್ಲಿರುವ ಪ್ರಮುಖ ವೃತ್ತವಾದ ಗಿಬ್ ಸರ್ಕಲ್, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ಬಳಿ ಸಿ.ಸಿ.ಕ್ಯಾಮರಾವನ್ನು ಪುರಸಭೆಯವರೊಂದಿಗೆ ಕೈಜೋಡಿಸುವುದರ ಮೂಲಕ ಅಳವಡಿಸಬೇಕು. ಈಗಾಗಲೇ ಭಟ್ಕಳದಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪ್ರಮುಖ ವೃತ್ತದಲ್ಲಿ ಅಳವಡಿಸಿದ್ದಾರೆ. ಅದೇ ಮಾದರಿಯಲ್ಲಿ ಕುಮಟಾದಲ್ಲೂ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ ಅದರ ಬಗ್ಗೆ ಮೇಲಾಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ತಿಳಿಸುವುದರ ಮೂಲಕ ಸಿಬ್ಬಂದಿ ಕೊರತೆ ಬಗೆಹರಿಸಿಕೊಳ್ಳಬೇಕು. ಪಟ್ಟಣದಲ್ಲಿ ಹೊಸ ಯೋಜನೆಗಳು ಬಂದಾಗ ಕಾಮಗಾರಿ ನಡೆಸಲು ಬರುವ ಕೆಲಸಗಾರರಿಗೆ ಗುರುತಿನ ಚೀಟಿ ನೀಡುವುದನ್ನು ಕಡ್ಡಾಯ ಮಾಡಬೇಕು. ಕಳ್ಳತನ ಪ್ರಕರಣನ್ನು ಇಷ್ಟಕ್ಕೆ ಬಿಟ್ಟರೆ ಪ್ರತಿನಿತ್ಯ ಒಂದಿಲ್ಲೋಂದು ಪ್ರಕರಣಗಳು ಹುಟ್ಟಿಕೊಳ್ಳುತ್ತದೆ ಈ ಬಗ್ಗೆ ಮೇಲಾಧಿಕಾರಿಗಳು ಗಮನವಹಿಸಿ ಕಳ್ಳರ ಪತ್ತೆಹಚ್ಚಬೇಕು ಎಂದರು.
ಆಮ್ ಆದ್ಮಿ ಮುಖಂಡ ನಾಗರಾಜ ಶೆಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸರ ಮೇಲೆ ಇರುವ ಭಯ ಕಡಿಮೆಯಾಗುತ್ತಿದೆ. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಜಿಲ್ಲಾಧ್ಯಂತ ಸಂಚಾರ ನಡೆಸಿ ಇಲಾಖೆಯಲ್ಲಿರುವ ಸಮಸ್ಯೆಯನ್ನು ಕೂಲಂಕಷವಾಗಿ ಬಗೆಹರಿಬೇಕು. ಜಿಲ್ಲಾಧಿಕಾರಿಗಳು ಕುಮಟಾದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಪೊಲೀಸ್ ಇಲಾಖೆಗೆ ಬೇಕಾಗುವ ಸೌಲಭ್ಯವನ್ನು ನೀಡುವುದರ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣಕಾರರ ಸಂಘದ ಸದಸ್ಯರಾದ ಧನಂಜಯ ಶೆಟ್, ರತ್ನಾಕರ ಶೆಟ್ ಮತ್ತಿತರರು ಇದ್ದರು.

RELATED ARTICLES  ವೃದ್ದನೋರ್ವನ ಕೊಲೆ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ