ಕುಮಟಾ : ಉತ್ತಮ ಜ್ಞಾನ ಎಲ್ಲಿಯೇ ಸಿಕ್ಕರೂ ಅದನ್ನು ಸಂಪಾದಿಸಿಕೊಳ್ಳಬೇಕು. ಜ್ಞಾನದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಜ್ಞಾನಕಿಂತ ಉದಾರವಾದದ್ದು, ಉತ್ತಮವಾದದ್ದು ಎಲ್ಲಿಯೂ ಇಲ್ಲ. ನಮ್ಮ ಭಾರತೀಯ ಸಂಸ್ಕೃತಿ ಹೇಳಿರುವುದು ಇದನ್ನೇ ಜ್ಞಾನ ಹಾಗೂ ಕೌಶಲ್ಯದಿಂದ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯವಿದೆ ಎಂದು ಗುಲ್ಬರ್ಗ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಜಿ. ಮೂಲಿಮನಿ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ’ಕಾಲೇಜು ಶಿಕ್ಷಣದಲ್ಲಿ ಬೆಳೆಯುತ್ತಿರುವ ಸಂಶೋಧನಾ ಆಕಾಂಕ್ಷೆಗಳು’ ವಿಷಯದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಂಶೋಧನಾ ಪ್ರವೃತ್ತಿ ಶಾಲಾ ಹಂತದಲ್ಲೇ ಪ್ರೇರೇಪಣೆಗೊಂಡು ಮಕ್ಕಳು ಬೆಳೆದರೆ ಅತ್ಯುತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈಗ ನಾವಿರುವುದು ಜ್ಞಾನದ ಶತಮಾನದಲ್ಲಿ, ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣದಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಪ್ರೇರೇಪಿಸುವುದಕ್ಕೆ ಸಮ್ಮೇಳನವು ಒತ್ತಾಸೆಯಾಗಿರುವುದು ಸಂಘಟಕರ ಉತ್ತಮ ಪ್ರಯತ್ನವಾಗಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಮಟಾದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸರುವುದು ಅತ್ಯಂತ ಹೆಮ್ಮೆಯ ಸಂಗತಿ. ವಿವಿಧ ದೇಶಗಳಿಂದ ಪ್ರತಿನಿಧಿಗಳು ಬಂದಿರುವುದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸಂಶೋಧನಾ ಪ್ರವೃತ್ತಿಯನ್ನು ಗುರುತಿಸಲು ಹಾಗೂ ಅಂತಹ ಗುಣವನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ನಮ್ಮ ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದು, ನಮ್ಮ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ್ದಾರೆ. ಉನ್ನತ ವ್ಯಾಸಂಗಕ್ಕೆ ನಮ್ಮ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ. ಸಂಶೋಧನೆಗೆ ಸುಸಜ್ಜಿತವಾದ ಪ್ರಯೋಗಾಲಯ ಬೇಕಾಗುತ್ತದೆ. ಕುಮಟಾದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಅತ್ಯುತ್ತಮ ಪ್ರಯೋಗಾಲಯ ಒದಗಿಸಲು ಪ್ರಯತ್ನಿಸುತ್ತೇನೆ. ವೇದಿಕೆಯಲ್ಲಿರುವ ನ್ಯಾಕ್ ನ ಪ್ರಾದೇಶಿಕ ಜಂಟಿ ನಿರ್ದೇಶಕರು ಹಾಗೂ ರಾಜ್ಯ ನೋಡಲ್ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದರು.
ನ್ಯಾಕ್ ವಿಶೇಷಾಧಿಕಾರಿ ಆಪ್ತಾಬ್ ಭಾಯಿ ಮಾತನಾಡಿ, ಈ ಸಮ್ಮೇಳನದಲ್ಲಿ ಉತ್ತಮ ವಿಷಯವನ್ನು ಆಯ್ಕೆ ಮಾಡಲಾಗಿದೆ. ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಹಸಿವು ಹುಟ್ಟಿಸಬೇಕು. ವಿದ್ಯಾರ್ಥಿಯಲ್ಲಿ ಮನಸ್ಥಿತಿ ಹಾಗೂ ಪ್ರದರ್ಶನ ಸಾಮರ್ಥ್ಯ ಮುಖ್ಯ, ಈ ಸಮ್ಮೇಳನದ ಫಲಶೃತಿ ಸಂಬಂಧಪಟ್ಟವರನ್ನು ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯಕಾರ್ಯದರ್ಶಿ ಡಾ.ವಿಕ್ರಮ ಮಾತನಾಡಿ, ಕುಮಟಾ ಸರ್ಕಾರಿ ಪದವಿ ಕಾಲೇಜಿನ ಉತ್ತಮ ಪ್ರಯತ್ನ ಇದಾಗಿದ್ದು ರಾಜ್ಯದ ಇತರ ಕಾಲೇಜುಗಳಿಗೆ ಮಾದರಿಯಾಗಿದೆ. ಸಾಕಷ್ಟು ಕೊರತೆಗಳ ನಡುವೆಯೂ ಸರ್ಕಾರಿ ಕಾಲೇಜುಗಳು ಉತ್ತಮ ಫಲಿತಾಂಶ ನೀಡುತ್ತಿವೆ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ವಹಿಸಿದ್ದರು. ಸಮ್ಮೇಳನದ ಸಂಯೋಜಕರಾದ ಡಾ. ಐ.ಕೆ.ನಾಯ್ಕ, ಡಾ. ವಿನಾಯಕ ನಾಯಕ, ಕೃಷ್ಣ ನಾಯಕ, ಡಾ. ಗೀತಾ ನಾಯಕ, ಸಂದೇಶ ಎಚ್., ಪಲ್ಲವಿ ಎಚ್. ಸಿ., ಚಂದ್ರಶೇಖರ, ನಮೃತಾ, ಶ್ರೀಕಾಂತ ನಾಯ್ಕ ಇತರರು ಕಾರ್ಯಕ್ರಮ ನಿರ್ವಹಿಸಿದರು.
ಸಮ್ಮೇಳನದಲ್ಲಿ ದಕ್ಷಿಣ ಕೋರಿಯಾದ ಡಾ. ಜೂಯೊಂಗ ಕಿಮ್, ನೈಜೀರಿಯಾದ ಒಯೆನುಗಾ ಮೈಕೆಲ್, ಡಾರುಸ್ಸಲಂ ದೇಶದಿಂದ ಡಾ ಪೂಜಾ. ಎಸ್., ರಷಿಯಾದಿಂದ ಡಾ. ಯೂರಿ ಪೆಟೆನೆವ್, ಜರ್ಮನಿಯಿಂದ ವಿಘ್ನೇಶ ಡಿ. ನಾಯ್ಕ ಕಾನ್ಪುರದಿಂದ ಡಾ. ಲೀಲಾವತಿ ಕೃಷ್ಣನ್, ಡಾ. ಕೆ.ಎಸ್.ರಾಣೆ ಇನ್ನಿತರರು ಪಾಲ್ಗೊಂಡಿದ್ದರು.