ಕುಮಟಾ : ಶ್ರೀ ಬಬ್ರುಲಿಂಗೇಶ್ವರ ಯುವಕ ಮಂಡಳಿ ಮಾಸೂರು ಹಾಗೂ ಸೇವಾ ಭಾರತಿ ಟ್ರಸ್ಟ್ ಕುಮಟಾ ಇವುಗಳ ಜಂಟಿ ಆಶ್ರಯದಲ್ಲಿ ಮಾಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಎಸ್ ಹೆಗಡೆ ಆಸ್ಪತ್ರೆಯವರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ದೇರಳಕಟ್ಟೆ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ. ಪಿ. ನಿರ್ಮಲ್ ಬಾಬು. (ಎಲುಬು ಮತ್ತು ಕೀಲುತಜ್ಞರು). ಡಾ. (ಶಶಾಂಕ್ ಕೋಟ್ಯಾನ್ ಕಿವಿ ಮೂಗು ಗಂಟಲು ತಜ್ಞರು), ಡಾ. ಈರಪ್ಪ. (ವೈದ್ಯಕೀಯ ತಜ್ಞರು), ಡಾ. ನಾಗಶ್ರೀ ಎನ್.ವಿ (ಪಸೂತಿ ಹಾಗೂ ಸ್ತ್ರೀ ರೋಗ ತಜ್ಞರು). ಡಾ. ಮಹೇಂದ್ರ ರೆಡ್ಡಿ ಶಸ್ತ್ರಚಿಕಿತ್ಸಾ ತಜ್ಞರು ಈ ಶಿಬಿರದಲ್ಲಿ ಭಾಗವಹಿಸಿದರು. ಅಂದಾಜು 400ಕ್ಕೂ ಹೆಚ್ಚು ಜನ ರೋಗಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆಎಸ್ ಹೆಗಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೈಸನ್ ಅವರು ನಾವು ಪ್ರಾಮಾಣಿಕವಾಗಿ ಉತ್ತರ ಕನ್ನಡ ಜಿಲ್ಲೆಯ ರೋಗಿಗಳಿಗೆ ಅತ್ಯುತ್ತಮ ಸೇವೆ ಕೊಡುತ್ತಿದ್ದೇವೆ. ಸರಕಾರಿ ಇನ್ನಿತರ ಇನ್ಸೂರೆನ್ಸ್ ಸೇವೆಗಳನ್ನು ಗರಿಷ್ಠ ಮಟ್ಟದಲ್ಲಿ ನೀಡುತ್ತಿದ್ದೇವೆ. ಅಂದಾಜು 1,200 ಹಾಸಿಗೆಗಳು ಇರುವ ಆಧುನಿಕ ಸೌಲಭ್ಯವುಳ್ಳ ಬೃಹತ್ ಆಸ್ಪತ್ರೆ ನಮ್ಮದು. ಕ್ಷೇಮ ಹೆಲ್ತ್ ಕಾರ್ಡಿನ ಸೌಲಭ್ಯವು ಕೂಡ ಬಡವರಿಗೆ ಇರುತ್ತದೆ. ಈಗೊಂದು ಐದು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ತಪಾಸಣಾ ಶಿಬಿರಗಳಿಗೆ ಸಾಕಷ್ಟು ಉತ್ತೇಜನವನ್ನು ನೀಡುತ್ತಿದ್ದೀರಿ. ಅದಕ್ಕೆ ಪ್ರತಿಯಾಗಿ ನಾವು ಅತ್ಯುತ್ತಮ ಸೇವೆ ನೀಡುತ್ತಿದ್ದೇವೆ ಎಂದರು.
ವೈದ್ಯಕೀಯ ಶಿಬಿರದ ಸಂಯೋಜಕ ಅರುಣ ಹೆಗಡೆ ಮಾತನಾಡಿ ಪ್ರಾರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಸೂಕ್ತ ಚಿಕಿತ್ಸೆ ದೊರೆತರೆ ಗಂಭೀರ ಕಾಯಿಲೆಗಳನ್ನು ಕೂಡ ಗುಣವಾಗಿಸಬಹುದು. ಅದಕ್ಕೆ ಪೂರಕವಾಗಿ ಇಂತಹ ವೈದ್ಯಕೀಯ ಶಿಬಿರಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ. ಮತ್ತು ಆಹಾರದಲ್ಲಿ ಔಷಧಿಯ ಗುಣ ಇರಬೇಕೆ ಹೊರತು ಔಷಧವೇ ಆಹಾರವಾಗಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗೋಣ ಹಾಗೂ ಜನರನ್ನು ಜಾಗೃತಿಗೊಳಿಸೋಣ ಎಂದರು.
ವೇದಿಕೆಯಲ್ಲಿ ಸೇವಾ ಭಾರತಿ ಟ್ರಸ್ಟ್ ಕುಮಟಾದ ಮುಖ್ಯಸ್ಥರಾದ ಡಾ. ಸುರೇಶ ಹೆಗಡೆ, ಮೋಹನ್ ಗುನಗಾ, ಬೊಬ್ರುಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ನಾಗರಾಜ ವಿ. ಪಟಗಾರ, ಎಸ್. ಡಿ. ಎಂ. ಸಿ. ಅಧ್ಯಕ್ಷ ಮಂಜುನಾಥ್ ವಿ. ಗುನಗಾ ಹಾಗೂ ಯುವಕ ಮಂಡಳದ ಎಲ್ಲಾ ಸದಸ್ಯರು ಹಾಜರಿದ್ದರು. ಮೋಹನ ಗುನಗ ಪ್ರಾರ್ಥಿಸಿದರು, ರಾಘವ ಎಸ್. ಗುನಗ ಸ್ವಾಗತಿಸಿದರು. ರಮೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಪಟಗಾರ ವಂದಿಸಿದರು.