ಕುಮಟಾ : ಆಶ್ರಮ ಎಂದರೆ ಆಧ್ಯಾತ್ಮಿಕ ಆಶ್ರಯ ಸ್ಥಳ. ಜೀವನದ ಪ್ರತಿಯೊಂದು ಹಂತವು ತೊಟ್ಟಿಲಿನಿಂದ ಸಮಾಧಿಯವರೆಗಿನ ಪ್ರಯಾಣದ ನೈಸರ್ಗಿಕ ಭಾಗವಲ್ಲ, ಆದರೆ ಆಧ್ಯಾತ್ಮಿಕತೆಯನ್ನು ಅಭಿವೃದ್ಧಿಪಡಿಸುವ ಸಮಯ ಎಂದು ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಹೇಳಿದರು. ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನಿನಲ್ಲಿ ನಡೆದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಖಾಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಯವರ ವರ್ಧಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸನಾತನ ಧರ್ಮದಲ್ಲಿ ನಾಲ್ಕು ಆಶ್ರಮಗಳಿವೆ. ಅವುಗಳೆಂದರೆ ಬ್ರಹ್ಮಚಾರಿ ಆಶ್ರಮ, ಗೃಹಸ್ಥ ಆಶ್ರಮ, ವಾನಪ್ರಸ್ಥ ಆಶ್ರಮ ಹಾಗೂ ಸಂನ್ಯಾಸ ಆಶ್ರಮಗಳು. ನಾವು ನಮ್ಮ ಜೀವನದಲ್ಲಿ ಉತ್ತಮ ಕಾರ್ಯ ಮಾಡುವುದರ ಮೂಲಕ, ಭಗವಂತನ ಸ್ಮರಣೆ ಮೂಲಕ ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಪದ್ಮಭೂಷಣ ಭೈರವೈಕ್ಯ ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪರಮ ಶಿಷ್ಯರಾಗಿರುವ ಸದ್ಗುರು ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಯವರ ಕ್ರಿಯಾಶೀಲತೆ ಮತ್ತು ಕಾರ್ಯತತ್ಪರತೆ ನಮಗೆಲ್ಲರಿಗೂ ಅನುಕರಣೀಯ ಎಂದರು.
ಪ್ರಾಂಶುಪಾಲೆ ಲೀನಾ ಗೊನೇಹಳ್ಳಿಯವರು ಸದ್ಗುರು ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತ್ಯೋತ್ಸವ ಆಚರಣೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು. ಆಡಳಿತಾಧಿಕಾರಿ ಜಿ. ಮಂಜುನಾಥರವರು ವೈರಾಗ್ಯದಲ್ಲಿ ಅಭಾವ ವೈರಾಗ್ಯ, ಪ್ರಸೂತಿ ವೈರಾಗ್ಯ ಮತ್ತು ಸ್ಮಶಾನ ವೈರಾಗ್ಯ ಎಂಬ ಮೂರು ವಿಧಗಳಿದ್ದು, ಸಂನ್ಯಾಸ ವೈರಾಗ್ಯದ ಮೂಲಕ ಮೋಕ್ಷ ಪಡೆಯುವ ಮಾರ್ಗದ ಬಗ್ಗೆ ತಿಳಿಸಿದರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಹಂಕಾರ, ಮಮಕಾರ, ಸಂಶಯಗಳನ್ನು ತ್ಯಜಿಸಿ ದೈವ ಸಾಕ್ಷಾತ್ಕಾರವನ್ನು ಪಡೆದು ಜನರನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಸದ್ಗುರು ಎಂದು ಗುರುವಿನ ಮಹತ್ವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆದ 26ನೇ ಕ್ರೀಡೋತ್ಸವದಲ್ಲಿ 200ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಬಿಜಿಎಸ್ ಸೆಂಟ್ರಲ್ ಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿ ಎನ್. ಸನ್ಮಿತ್ ನಿಗೆ ಪೂಜ್ಯರು ಸನ್ಮಾನಿಸಿದರು.
ನಕುಲ್ ಮತ್ತು ಸಂಗಡಿಗರು ವೇದಘೋಷ ಪಠಿಸಿದರು. ಆರ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಿಶನ್ ಮತ್ತು ಸುಮನ್ ಪೂಜ್ಯರ ಬಾಲ್ಯ ಜೀವನ, ಶಿಕ್ಷಣ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ಹೆಚ್. ಆರ್. ಈಶಾನಿ ಮತ್ತು ಪೃಥ್ವಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ ಪಟಗಾರ ವಂದಿಸಿದಳು. ವಿದ್ಯಾರ್ಥಿಗಳು ಗುರುವಿನ ಮಹಿಮೆ ಸಾರುವ ಭಜನೆ ಮಾಡಿದರು. ಹಿರಿಯ ಶಿಕ್ಷಕ ಎಂ. ಜಿ. ಹಿರೇಕುಡಿಯವರು¸ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರ್ಧಂತ್ಯೋತ್ಸವದ ಪ್ರಯುಕ್ತ ಮಧ್ಯಾಹ್ನ “ಶಿಕ್ಷಕರಿಗಾಗಿ ಅಭಿಫ್ರೇರಣಾ ಕಾರ್ಯಾಗಾರ” ಹಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುಮಟಾದ ಕಮಲಾ ಬಾಳಿಗಾ ಮಹಾವಿದ್ಯಾಲಯದ ಉಪನ್ಯಾಸಕ ಸುಬ್ರಹ್ಮಣ್ಯ. ಕೆ. ಹೆಗಡೆಯವರು ಹಲವು ನಿದರ್ಶನಗಳ ಮೂಲಕ ಶಿಕ್ಷಕರಿಗೆ ಅಭಿಫ್ರೇರಣಾ ಕಾರ್ಯಾಗಾರ ನಡೆಸಿಕೊಟ್ಟರು.