ಕುಮಟಾ : ಸದಾ ಬಂದಿಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುವ ಕುಮಟಾದ ಐ.ಆರ್.ಬಿ ಕಾಮಗಾರಿ ಇದೀಗ ಮತ್ತೆ ಸುದ್ದಿಯಾಗಿದೆ. ಟೋಲ್ ಅನ್ನು ಸ್ಥಳೀಯರೂ ತುಂಬುವಂತೆ ಒತ್ತಾಯಗಳು ಈ ಹಿಂದೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತಾಲೂಕಿನ ಹೊಳಗದ್ದೆ ಟೋಲ್ ನಾಕಾ ಸಮೀಪ ಇರುವ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆ ಹಾಗೂ ಸ್ಥಳೀಯ ಜನರು ಓಡಾಡುವ ರಸ್ತೆಗೆ ಐ.ಆರ್.ಬಿಯವರು ಮಣ್ಣು ಹಾಕಿ ಸಂಚಾರಕ್ಕೆ ಸಮಸ್ಯೆ ಉಂಟುಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಕುರಿತಂತೆ ಆಕ್ರೋಶ ಹೊರಹಾಕಿದ್ದಾರೆ.
ಸುಂಕ ವಸೂಲಾತಿ ಕೇಂದ್ರದ ಪಕ್ಕದಲ್ಲಿರುವ ಸುವರ್ಣಗದ್ದೆ, ಹೊಳೆಗದ್ದೆ, ಬೆತ್ತಿಗೇರಿ ಹಾಗೂ ಸಾಕಷ್ಟು ಸ್ಥಳೀಯರು ಹಾಗೂ ಒಂದರಿಂದ ಎರಡು ಕಿಲೋಮೀಟರ್ ಅಂತರದಲ್ಲಿರುವ ಊರಿನ ಜನರು ಐ.ಆರ್.ಬಿ. ಸುಂಕ ವಸೂಲಾತಿ ಕೇಂದ್ರದ ಪಕ್ಕದಲ್ಲಿರುವ ಗ್ರಾಮ ಪಂಚಾಯತಿಯ ರಸ್ತೆಯನ್ನು ಬಳಸುತ್ತಿದ್ದರು. ಕಳೆದ ಒಂದೆರಡು ವಾರದಿಂದ ಐ.ಆರ್.ಬಿ ಕಂಪನಿಯವರು ರಸ್ತೆಯ ಇಕ್ಕೆಲಗಳಲ್ಲಿ ಮಣ್ಣನ್ನು ಹಾಕಿ ಬಂದ್ ಮಾಡಿರುವ ಜೊತೆಗೆ ಸ್ಥಳೀಯರಿಗೆ ಸುಂಕವಸುಲಾತಿ ಒತ್ತಾಯ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಸ್ಥಳೀಯರ ಕರೆಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಭಾಸ್ಕರ ಪಟಗಾರ ಕೂಡಲೇ ಸರ್ವಿಸ್ ರಸ್ತೆಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದು, ಕುಮಟಾ ತಾಲೂಕಾ ಉಪವಿಭಾಗಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜೊತೆಗೆ ಸ್ಥಳೀಯ ಧಾರೇಶ್ವರ ಪಂಚಾಯತ್ ಅಧಿಕಾರಿಗಳಿಗೂ ತಿಳಿಸಿರುವ ಅವರು, ಕೂಡಲೇ ಮಣ್ಣನ್ನ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳೀಯರಿಗೂ ಸುಂಕ ವಸೂಲಾತಿಗೆ ಟೋಲ್ ನಾಕಾದಲ್ಲಿ ಒತ್ತಾಯ ಮಾಡುತ್ತಿದ್ದು ಇದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದ್ದು, ಮುಂದಿನ ದಿನದಲ್ಲಿ ಸಾರ್ವಜನಿಕರ ಜೊತೆ ನಿಂತು ಹೋರಾಟ ನಡೆಸುವುದಾಗಿ ಭಾಸ್ಕರ ಪಟಗಾರ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಮಾದೇವ ಪಟಗಾರ, ಬಾಬು ಬಂಡಾರಿ, ನಿತಿನ್, ಪುನೀತ್ ಇತರರಿದ್ದರು.