ಕುಮಟಾ: ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡಿರುವ ಚಂದಾವರ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಾಪುರದ ಛಾಯಾ ಅರುಣ ಉಭಯಕರ ಅವರಿಗೆ ರೋಟರಿ ಕ್ಲಬ್ ಕುಮಟಾದಿಂದ “ರೋಟರಿ ಅಕ್ಕಾ” ಪ್ರಶಸ್ತಿಯನ್ನು ಇತ್ತೀಚೆಗೆ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ರೋಟರಿಯ ಮೂಲಕ ಅತಿ ಹೆಚ್ಚಿನ ಸೇವಾ ಚಟುವಟಿಕೆಗಲ್ಲಿ ತೊಡಗಿಸಿಕೊಂಡ ಪ್ರಯುಕ್ತ ನೀಡಲಾಗುವ ಮೊದಲ ಪ್ರಶಸ್ತಿಗೆ ಭಾಜನರಾದ ಛಾಯಾ ಅವರು ತಾವು ಸ್ವೀಕರಿಸಿದ ಪ್ರಶಸ್ತಿಯು ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಕುಮಾರಿ ಶ್ರೀ ರಾವ್ ಪ್ರಾರ್ಥಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಅಧ್ಯಕ್ಷ ವಸಂತ ರಾವ್ ಸಮಾಜ ಸೇವೆಯಲ್ಲಿ ಗಣನೀಯ ಸಾಧನೆ ತೋರಿದ ಮಹಿಳೆಯರಿಗೆ ಗೌರವಿಸುವ ನಿಟ್ಟಿನಲ್ಲಿ ರೋಟರಿಯಿಂದ ಸ್ಥಾಪಿತಗೊಂಡ ಈ ಪ್ರಶಸ್ತಿ ಸೇವಾಕೈಂಕರ್ಯಕ್ಕೆ ಕೈಗನ್ನಡಿಯಾಗಬಲ್ಲದೆಂದರು. ರೋಟೊಲೈಟ್ ಪತ್ರಿಕೆ ಸಂಪಾದಕ ಎನ್.ಆರ್.ಗಜು ಪ್ರಶಸ್ತಿ ವಿಜೇತರ ಸಾಧನೆಯನ್ನು ಪರಿಚಯಿಸಿದರು. ಕಾರ್ಯದರ್ಶಿ ಚೇತನ್ ಶೇಟ್ ವಂದಿಸಿದರು. ಕುಮಾರಿ ಶ್ರೇಯಾ ರಾವ್ ನಿರೂಪಿಸಿದರು. ರೋಟರಿಯ ಹೇಮಾ ರಾವ್, ಸುನಂದಾ ಪೈ, ಅರುಣ ಉಭಯಕರ, ಜಿ.ಎಸ್.ಕಾಮತ, ಚೇತನ್ ಶೇಟ್ ಪ್ರಶಸ್ತಿ ವಿಜೇತ ಛಾಯಾ ಉಭಯಕರ ಅವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಕುಮಟಾ ರೋಟರಿಯ ಸಂಸ್ಥಾಪಕ ಸದಸ್ಯ ಜಿ.ಎಸ್.ಕಾಮತರಿಗೆ ಅವರ 75 ನೆಯ ಹುಟ್ಟು ಹಬ್ಬದ ಪ್ರಯುಕ್ತ ಅವರ ಸಮಾಜೋಪಯೋಗಿ ಕಾರ್ಯಕ್ರಮಗಳಿಗೆ ಪ್ರಶಂಶಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಹಿರಿಯ ರೋಟೇರಿಯನ್ ಗುರುದಾಸ ಗಾಯ್ತೊಂಡೆ, ಪ್ರೊ. ಗಿರಿಧರ ಗಾಂವಕರ ಜಿ.ಎಸ್.ಕಾಮತರ ಬಾಳ ಬುತ್ತಿಯನ್ನು ತೆರೆದಿಟ್ಟು ಮಾತನಾಡಿದರು. 80 ಜಿ ಅಡಿಯಲ್ಲಿ ರೋಟರಿ ಸಂಸ್ಥೆಗೆ ದೇಣಿಗೆ ನೀಡಿದರೆ, ಅದನ್ನು ಆದಾಯ ತೆರಿಗೆ ವ್ಯಾಪ್ತಿಯಡಿ ತೆರಿಗೆ ವಿನಾಯತಿ ಪಡೆಯಲು ಸಹಕರಿಸುವೆ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎ ಜಿ.ಎಸ್.ಕಾಮತ ನುಡಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಗಳು ಪಾಲ್ಗೊಂಡಿದ್ದರು.
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯ ಹೋರಾಟಗಾರರಾದ ದಿವಂಗತ ಮಹಾಬಲೇಶ್ವರ ನಾಡಕರ್ಣಿ ಮತ್ತು ದಿವಂಗತ ದೇವಣ್ಣ ಕೊಪ್ಪಿಕರ ಈ ಕುಟುಂಬದ ಮಗಳಾದ ಸನ್ಮಾನ್ಯೆ ಛಾಯಾ ಅರುಣ ಉಭಯಕರ ಅವರಿಗೆ ಕುಮಟಾ ರೋಟರಿಯು “ರೋಟರಿ ಅಕ್ಕಾ” ಎಂಬ ಹೆಸರಿನಿಂದ ಪ್ರಪಥಮ ಬಾರಿ ಪುರಸ್ಕರಿಸುತ್ತಿರುವುದು ನಿಜಕ್ಕೂ ಸಮುದಾಯ ಹೆಮ್ಮೆಪಡುವ ವಿಚಾರ. ಈ ಹೊಸ ಆಯೋಜನೆ ನಮ್ಮ ಇಂದಿನ ರೋಟರಿ ಅಧ್ಯಕ್ಷರಾದ ವಸಂತ ರಾವ್ ಅವರ ಆಲೋಚನೆ. ಇತ್ತೀಚೆಗೆ ಕುಮಟಾ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೆರೆಯ ತಾಲೂಕು ಹೊನ್ನಾವರದಲ್ಲಿ ಜನಿಸಿದ ಸನ್ಮಾನ್ಯೆ ಛಾಯಾ ಅವರು, ಅಲ್ಲಿಯ ಸೇಂಟ್ ಥಾಮಸ್ ಹೈಸ್ಕೂಲ್‍ನಲ್ಲಿ ಓದಿ ಎಸ್.ಡಿ.ಎಂ.ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ರಾಜ್ಯಕ್ಕೆ ಎಂಟನೇ ರ್ಯಾಂಕ್‍ಗಳಿಸುವುದರ ಮೂಲಕ ಪಡೆದುದಲ್ಲದೇ, ಹವ್ಯಾಸ ಮತ್ತು ತಾವು ಕಲಿತ ವಿದ್ಯೆಯನ್ನು ಪಸರಿಸಲು ಹೊಲಿಗೆ ವೃತ್ತಿ ತರಬೇತಿಯಲ್ಲೂ ಪಾರುಪಥ್ಯ ಮೆರೆದಿದ್ದಾರೆ. ತಮ್ಮ ಮನೆತನದ ರಕ್ತಗತ ಗುಣವಾದ ಸಮಾಜ ಸೇವೆ, ದೀನದಲಿತರಿಗೆ, ತುಳಿತಕ್ಕೊಳಗಾದವರಿಗೆ ಆಸರೆ ಕಲ್ಪಿಸುವ ಮಹಾತಾಯಿಯಾಗಿ ಮೂರ್ತಿಭವಿಸಲು ಬಹುತೇಕ ಈ ಹಿನ್ನೆಲೆಯೇ ಅವರಿಗೆ ನಾಂದಿಯಾಯಿತು. ಮಲ್ಲಾಪುರದ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಗುರುಪ್ರಸಾದ ಹೈಸ್ಕೂಲಿನಲ್ಲಿ ಮುಖ್ಯಾಧ್ಯಾಪಕರೂ ರೋಟರಿಯ ಹಿರಿಯ ಸದಸ್ಯರೂ ಆದ ಸನ್ಮಾನ್ಯ ಅರುಣ ಉಭಯಕರ ಅವರ ಬಾಳ ಸಂಗಾತಿಯಾಗಿ ಬಂದ ನಂತರ ತಮ್ಮ ಸೇವಾ ಕ್ಷೇತ್ರವನ್ನು ಮಲ್ಲಾಪುರಕ್ಕೂ ವಿಸ್ತರಿಸಿಕೊಂಡಿದ್ದಾರೆ.
ಅಲ್ಲಿನ ಆವಡಿ ಮಹಿಳಾ ಮಂಡಳಿ ಇವರ ನೇತೃತ್ವಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಅಂದಿನ ಡಿ.ಸಿ.ಸಂಜಯದಾಸ್ ಗುಪ್ತ ಮಂಡಳಿಗೆ ಕಟ್ಟಡಾನುದಾವನ್ನು ಬಿಡುಗಡೆಗೊಳಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅನೇಕ ಸಾರ್ವಜನಿಕ ಕಾರ್ಯಕ್ರಮಗಳಂತೆ, ರೋಟರಿ ಸಹಯೋಗದಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ಈ ಸಭಾಗಂಣದಲ್ಲಿ ಮುನ್ನಡೆಸಿಕೊಂಡು ಬಂದಿರುತ್ತಾರೆ. 1985 ರಲ್ಲಿ ಇಲ್ಲಿಯ ಮಂಡಳ ಪಂಚಾಯತ್‍ಗೆ ಅತ್ಯಧಿಕ ಸಂಖ್ಯೆಯ ಮತಗಳಿಂದ ಆಯ್ಕೆಯಾಗಿ ಆ ಮೂಲಕ ಸಮಾಜಸೇವೆಗೆ ಇನ್ನೂ ತಮ್ಮ ದಾರಿಯನ್ನು ಹತ್ತಿರವಾಗಿಸಿಕೊಂಡಿದ್ದಾರೆ. ಕೆ.ಡಿ.ಸಿ.ಸಿ ಬ್ಯಾಂಕು, ಚೇತನಾ ಸಹಕಾರಿ ಬ್ಯಾಂಕ್, ಎ.ಪಿ.ಎಂ.ಸಿ.ಯಲ್ಲೂ ಡೈರೆಕ್ಟರ್ ಆಗಿರುವುದು ಇವರ ಹೆಚ್ಚುಗಾರಿಕೆ. ಈಗವರು ಗ್ರಾಮ ಪಂಚಾಯತ ಚಂದಾವರದ ಸದಸ್ಯರಾಗಿದ್ದು ಆ ಭಾಗದಲ್ಲಿ ಜನಹಿತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರೋಟರಿ ಸಹಯೋಗದೊಡನೆ, ಸೋಲಾರ್ ಲೈಟ್ಸ್, ಕಂಪ್ಯೂಟರ್ಸ್, ವಾಟರ್ ಫಿಲ್ಟರ್ಸ್ ಕುಡಿಯುವ ನೀರಿನ ಘಟಕ ಸ್ಪಾಪಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಡಿಜಿಟಲ್ ತಂತ್ರಜ್ಞಾನಕ್ಕೆ ಪೂರಕವಾಗಿ ಸ್ಪಂದಿಸಲು ಅವರು ನಡೆಸುವ ಪ್ರಯತ್ನ ಗಮನಾರ್ಹವಾದುದಾಗಿದೆ. ಜೊತೆಜೊತೆಗೆ ಸುಂದರ ಬದುಕನ್ನು ಕಟ್ಟಿಕೊಂಡ ಸಂಸಾರ ಇವರದ್ದು. ಛಾಯಾ ಮತ್ತು ಅರುಣ ಉಭಯಕರ ದಂಪತಿಗಳಿಗೆ ಸೂರಜ್ ಮತ್ತು ಶ್ಯಾಂ ಎಂಬಿಬ್ಬರು ಸುಪುತ್ರರು ಹಾಗೂ ದೀಪಾ ಮುದ್ದು ಮಗಳೊಬ್ಬಳು ಒಳ್ಳೆಯ ಸದೃಢ ಜೀವನ ರಥದಲ್ಲಿ ಪಯಣಿಸುತ್ತಿದ್ದಾರೆ.