ಕುಮಟಾ : ತಾಲೂಕಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಇದರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಬಿ.ಕೆ ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನದ ಹರಿವು ಹೆಚ್ಚಿಸುವ ಹಾಗೂ ಓದುಗರಿಗೆ ಜ್ಞಾನ ಭಂಡಾರವನ್ನು ಒದಗಿಸುವ ನಿಟ್ಟಿನಲ್ಲಿ ಡಿ. ೨೮,೨೯,೩೦ ರಂದು ಮೂರು ದಿನಗಳ ಕಾಲ ಸ್ವಪ್ನ ಬುಕ್ ಹೌಸ್ ಬೆಂಗಳೂರು ಇವರ ಸಹಕಾರದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ “ಅನ್ವೇಷಣಾ-೨೦೨೩-೨೪” ಅನ್ನು ಹಮ್ಮಿಕೊಳ್ಳಲಾಗಿದ್ದು ಈ ಪುಸ್ತಕ ಮೇಳದಲ್ಲಿ ಜ್ಞಾನ ದಾಹಿಗಳು ಭಾಗವಹಿಸುವಂತೆ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪುಸ್ತಕದ ಓದು ಕಡಿಮೆಯಾಗುತ್ತಿದೆ, ಸಾಮಾನ್ಯ ಸಾಹಿತ್ಯದ ಓದಿನ ಕುರಿತಾಗಿ ಆಸಕ್ತಿ ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದಿನ ಅಭಿರುಚಿ ಹೆಚ್ಚಿಸಲು ಈ ಪ್ರಯತ್ನವನ್ನೂ ಈ ಮೂಲಕ ಮಾಡಲಾಗುತ್ತಿದೆ. ಸಾರ್ವಜನಿಕರಿಗೂ ಈ ಸಂದರ್ಭದಲ್ಲಿ ಪುಸ್ತಕ ಖರೀಧಿಗೆ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿಯೇ ಹೆಸರಾಂತ ಪುಸ್ತಕ ಮಾರಾಟ ಮಳಿಗೆಯಾದ ಸಪ್ನಾ ಬುಕ್ ಹೌಸ್, ಬೆಂಗಳೂರು ಇವರ ಸಹಕಾರದಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಜಾತ್ರೆಯು ನಡೆಯುತ್ತದೆ. ಕುಮಟಾ, ಹೊನ್ನಾವರ, ಅಂಕೋಲಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಇತರ ತಾಲ್ಲೂಕಿನ ಜನತೆಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭ್ಯವಿರಲಿದೆ. ಈ ಮೂರು ದಿನಗಳ ಕಾಲ ಸರಸ್ವತಿ ಪಿಯು ಕಾಲೇಜಿನ ಆವಾರದಲ್ಲಿ ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ವಿಜ್ಞಾನ, ವಾಣಿಜ್ಯ, ಕಲೆ, ಸಂಸ್ಕೃತಿ, ಸಾಹಿತ್ಯ, ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಅಪಾರವಾದ ಪುಸ್ತಕಗಳು ಸಿಗಲಿವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಯಾವುದೇ ವಿಧದ ನಿರ್ದಿಷ್ಟ ಆಯ್ಕೆಯ ಪುಸ್ತಕಗಳು ಬೇಕಾದವರು 9972663855/ 9972664155 ಗೆ ಮಾಹಿತಿ ನೀಡಿದರೆ ಅಂತಹ ಪುಸ್ತಕಗಳನ್ನು ತರಿಸಿಕೊಡಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಪುಸ್ತಕ ಮೇಳ ಉದ್ಘಾಟನೆ.
ಡಿ.೨೮ ರಂದು ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಶಿಕ್ಷಣ ತಜ್ಞ ಎಂ.ಜಿ ಹೆಗಡೆ ಪುಸ್ತಕ ಜಾತ್ರೆ ಉದ್ಘಾಟಿಸಲಿದ್ದಾರೆ. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ವಿಠ್ಠಲ ನಾಯಕ ಅಧ್ಯಕ್ಷತೆ ವಹಿಸಲಿದ್ದು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿರಲಿದ್ದಾರೆ.