ಬೆಂಗಳೂರು : ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಮನೋರಂಜನೆಗಾಗಿ ಮಕ್ಕಳು ನೃತ್ಯ – ಗಾಯನಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ವಿಶೇಷವೆಂಬಂತೆ ಶಿಕ್ಷಕರೇ ಮಕ್ಕಳೆದುರು ವಿಶೇಷವಾದ ಫ್ಯಾಷನ್ ಶೋ ನಡೆಸಿದ ಸನ್ನಿವೇಶಕ್ಕೆ ಬಿ.ಜಿ.ರೋಡ್ ವಿಭಾಗದ ಬೇಸ್ ಕಾಲೇಜಿನ ಡಿ.30 ರಂದು ಶನಿವಾರ ನಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಸಾಕ್ಷಿಯಾಯಿತು.
ಶಿಕ್ಷಕರು ಮಾಡಿದ ಫ್ಯಾಷನ್ ಶೋ ಎಂಬ ಭಿನ್ನತೆ ಒಂದೆಡೆಯಾದರೆ, ಅಸಭ್ಯತೆಗೆ ಪ್ರಾಮುಖ್ಯ ಕೊಡದೆ, ಭಾರತದ ಸಭ್ಯಸಾಂಸ್ಕೃತಿಕವಿವಿಧತೆಯನ್ನು ಬಿಂಬಿಸುವಂತಿದ್ದದ್ದು ಮತ್ತೊಂದು ವಿಶೇಷತೆ.
ಪ್ರತಿದಿನ ತಮ್ಮ ಕ್ಲಾಸ್ ಲಿ ನಿಗದಿತ ವಸ್ತ್ರದಲ್ಲಿ ತಮ್ಮ ಪ್ರೀತಿಯ ಶಿಕ್ಷಕರನ್ನು ನೋಡುತ್ತಿದ್ದ ಮಕ್ಕಳು, ವಿವಿಧ ರಾಜ್ಯಗಳ ಸಾಂಸ್ಕೃತಿಕ ಉಡುಗೆಯಲ್ಲಿ ನೋಡಿ ಸಂಭ್ರಮಿಸಿದರು. ಮನೋರಂಜನೆಯ ಜೊತೆ ರಾಜ್ಯರಾಜ್ಯಗಳ ಸಾಂಸ್ಕೃತಿಕಭಿನ್ನತೆಯ ಪರಿಚಯವನ್ನು ಪಡೆದುಕೊಂಡರು.
ನಮ್ಮ ಮೈಸೂರಿನ ಮೈಸೂರು ಪೇಟ, ಸಿಲ್ಕ್ ಸೀರೆ, ಉತ್ತರಕರ್ನಾಟಕದ ಧೋತ್ರಾ – ಇಳಿಕಲ್ ಸೀರೆ, ಕೊಡಗಿನ ವಿಶೇಷ ಉಡುಗೆಗಳು, ಆಂಧ್ರದ ಧರ್ಮಾವರಂ ಸೀರೆ, ರಾಜಸ್ಥಾನದ ಗಾಗ್ರಾ – ಚೋಲಿ, ಪಶ್ಚಿಮಬಂಗಾಲದ ಕೆಂಪು ಅಂಚಿನ ಬಿಳಿ ಸೀರೆ, ಕೇರಳದ ಮುಂಡುಮ್, ಗುಜರಾತ್ ನ ಚನಿಯಾ ಚೋಲಿ, ಮಣಿಪುರದ ಖಾಮನ್ ಚತ್ಪಾ, ಉತ್ತರಪ್ರದೇಶದ ಕುರ್ತಾ – ಫೈಜಾಮ. . . .ಹೀಗೆ ವಿವಿಧ ರಾಜ್ಯಗಳ ಉಡುಗೆಯ ಜೊತೆ ಶಿಕ್ಷಕ – ಶಿಕ್ಷಕಿಯರು ಗಮನ ಸೆಳೆದರು.
ಕೇವಲ ಉಡುಗೆ-ತೊಡುಗೆಯನ್ನು ಮಾತ್ರ ಧರಿಸಿದ್ದಲ್ಲದೆ, ಆಯಾ ಪ್ರದೇಶಗಳ, ಗಾರ್ಬಾ, ಮಣಿಪುರಿ, ಕಥಕ್, ಕುಚಿಪುಡಿಮುಂತಾದ ನೃತ್ಯಪ್ರಕಾರವನ್ನು ಕೂಡ ಪ್ರದರ್ಶಿಸಿದರು. ಗಂಡುಮೆಟ್ಟಿನ ಕಲೆ ಎಂದೇ ಕರೆಯಲ್ಪಡುವ ಯಕ್ಷಗಾನದ ಪ್ರದರ್ಶನವನ್ನು ಈರ್ವರು ‘ಶಿಕ್ಷಕಿಯರು’ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಕೊನೆಯಲ್ಲಿ ‘ಜೈ ಹೋ’ ಹಾಡಿನ ಹಿನ್ನೆಲೆಯಲ್ಲಿ ಭಾರತ – ಕರ್ನಾಟಕದ ಧ್ವಜಗಳನ್ನು ಹಿಡಿದು, ಕಾಲೇಜಿನ ಪ್ರಿನ್ಸಿಪಾಲ್ ಆರ್.ಪಿ ಉಮಾಶಂಕರ್ ಮತ್ತು ಬೇಸ್ ನ ಶೈಕ್ಷಣಿಕ ನಿರ್ದೇಶಕ ವೈ.ಕೆ ಜಯರಾಮಪ್ಪ ಅವರು ವೇದಿಕೆಯನ್ನು ಪ್ರವೇಶಿಸಿ, ಕಾರ್ಯಕ್ರಮಕ್ಕೆ ತೆರೆ ಎಳೆದರು.
ಒಟ್ಟಿನಲ್ಲಿ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಂಸ್ಕೃತ, ಗಣಿತ, ಜೀವವಿಜ್ಞಾನ ಮುಂತಾದ ವಿಷಯಗಳನ್ನು ಬೋಧಿಸುತ್ತಿದ್ದ ಶಿಕ್ಷಕರು ಎಲ್ಲರೂ ಸೇರಿ, ಭಾರತದ ಸಾಂಸ್ಕೃತಿಕ ವೈಭವದ ಕುರಿತು ಮಕ್ಕಳಿಗೆ ಪಾಠ ಮಾಡಿದಂತಿತ್ತು. ಶಿಕ್ಷಕಿ ದಿವ್ಯ ಭಾರತೀ ಮತ್ತು ಕಾಲೇಜಿನ ಪೂರ್ವ ವಿದ್ಯಾರ್ಥಿನೀ ಸಂಜನಾ ಕಾರ್ಯಕ್ರಮ ನಿರ್ದೇಶಿಸಿದ್ದರು. ಶೈಕ್ಷಣಿಕ ಮುಖ್ಯಸ್ಥ ಆದಿಲ್ ಖಾನ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಗೆ ಮಕ್ಕಳು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಇದಕ್ಕೂ ಮೊದಲು ನಡೆದ ಕಾಲೇಜಿನ ವಾರ್ಷಿಕೋತ್ಸವ ‘ಸಾರಂಗ್ 5.0’ ನ್ನು ಬೇಸ್ ಸಿಇಒ ಅನಂತ ಕುಲಕರ್ಣಿ
ಉದ್ಘಾಟಿಸಿದರು. ಅನಂತರ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಮತ್ತಷ್ಟು ಪ್ರೇರೇಪಿಸುವ ಮಾತುಗಳನ್ನಾಡಿ, ಹುರಿದುಂಬಿಸಿದರು. ವಿದ್ಯಾಲಯದ ಶಿಕ್ಷಣ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಿನ್ಸಿಪಾಲ್ ಆರ್.ಪಿ ಉಮಾಶಂಕರ್, ಶೈಕ್ಷಣಿಕ ಮುಖ್ಯಸ್ಥ ಆದಿಲ್ ಖಾನ್, ಶಿಕ್ಷಣ ಕ್ಷೇತ್ರದ ಹಿರಿಯ ವೈ.ಕೆ ಜಯರಾಮಪ್ಪ, ಮುಖ್ಯ ಅತಿಥಿ ರಾಜಾಜಿನಗರ ಕ್ಯಾಂಪಸ್ ನ ಪ್ರಿನ್ಸಿಪಾಲ್ ಬಿ.ಆರ್ ಮೋಹನ್, ವಿವಿಧ ವಿಭಾಗಗಳ ಪ್ರಮುಖರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಹನುಮಂತರಾಯಪ್ಪ ಮತ್ತು ಮಿಸ್ಬಾ ಫರೀನ್ ನಿರೂಪಿಸಿದರು. ಗಣಿತ ಶಿಕ್ಷಕ ವಾದಿರಾಜ್ ವಂದಿಸಿದರು.