ಕುಮಟಾ : ಪಟ್ಟಣದ ಬಸ್ ನಿಲ್ದಾಣದ ಸಮೀಪದ ಶೌಚಾಲಯದ ಇಂಗು ಹೊಂಡದಲ್ಲಿ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ. ಶವವನ್ನು ಕಂಡ ಚಿಂದಿ ಹಾಗೂ ಬಾಟಲಿ ಆಯುವ ವ್ಯಕ್ತಿ ನಿಲ್ದಾಣದ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶವವನ್ನು ಹೊರತೆಗೆದು ಮುಂದಿನ ಪ್ರಕ್ರಿಯೆ ಕೈಗೊಂಡರು.
ತಾಲೂಕಿನ ಹೊಸಕೇರಿ ಲುಕ್ಕೇರಿಯ ನಿವಾಸಿ ಚಿದಾನಂದ ತಿಮ್ಮಪ್ಪ ಪಟಗಾರ (30) ಎಂಬಾತನೇ ಶವವಾಗಿ ಪತ್ತೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನು ಒಂದು ವಾರದ ಹಿಂದೆ (ಡಿ.26) ರಂದು ಬೆಳಿಗ್ಗೆ ಮೀನು ತರುವುದಾಗಿ ಪೇಟೆಗೆ ಹೋಗಿದ್ದ ಎನ್ನಲಾಗಿದೆ. ಈತ ಹಲವುಬಾರಿ ಮನೆಯನ್ನು ಬಿಟ್ಟು ಹೋದವನು ಎರಡು ಮೂರು ದಿನ ಹೊರಗೆ ಎಲ್ಲಿಯಾದರೂ ಉಳಿದು ಪುನಃ ಮನೆಗೆ ಬರುತ್ತಿದ್ದನಂತೆ, ಹೀಗಾಗಿ ಎಲ್ಲಿಯೋ ಹೋಗಿರಬೇಕೆಂದು ಮನೆಮಂದಿ ಸುಮ್ಮನಿದ್ದರು. ಆದರೆ ಇದೀಗ ಆತ ಶವವಾಗಿ ಪತ್ತೆಯಾಗಿದ್ದಾನೆ.
ಪೊಲೀಸರು ಶವವಾಗಿ ಬಿದ್ದ ವ್ಯಕ್ತಿಯ ಜೇಬಿನಲ್ಲಿದ್ದ ಪರ್ಸ್‍ನಲ್ಲಿ ಫೋಟೊವನ್ನು ಆಧಾರಿಸಿ ಅವನ ಗುರುತು ಪತ್ತೆಮಾಡಿ, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈತನ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕುಮಟಾ ಠಾಣೆಯಲ್ಲಿ ಮೃತನ ಸಹೋದರ ವಿವೇಕಾನಂದ ಪಟಗಾರ ಪ್ರಕರಣ ದಾಖಲಿಸಿದ್ದಾರೆ.