ಕುಮಟಾ : ಶಾಲೆಗಳೆಂದರೆ ಶ್ರದ್ಧಾ ಕೇಂದ್ರಗಳು, ವಿದ್ಯಾರ್ಥಿಗಳನ್ನು ಶಾಲೆಗಳತ್ತ ಸೆಳೆಯಲು ಸರಕಾರವೂ ಸಹ ಪ್ರತೀ ಹಂತದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದು ಕೈಕಟ್ಟಿ ಕುಳಿತರೆ ಯಾವ ಕಾರ್ಯವೂ ಸಾಧನೆಯಾಗದು. ಪ್ರತಿ ಕಾರ್ಯಕ್ಕೂ ಜನರ ಸ್ಪಂದನೆ ಅತ್ಯಂತ ಅಗತ್ಯವಾಗಿದೆ.
ಇದೀಗ ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಮದ ಉಂಚಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸುಂದರವಾಗಿಸುವ ಮೂಲಕ ಮಾದರೀ ಕಾರ್ಯಕ್ಕೆ ಮುಂದಾಗಿದ್ದಾರೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು.
ಕಾಂಪೌಂಡ್ ಗೋಡೆಗೆ ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಹೊಸದಾಗಿ ಪ್ಲಾಸ್ಟರಿಂಗ್ ಮತ್ತು ವರ್ಣ ರಂಜಿತ ಚಿತ್ರಗಳನ್ನು ಮಾಡಲಾಗಿದೆ. ಇದರಿಂದ ಶಾಲೆಯ ಆಕರ್ಷಣೆ ಇಮ್ಮಡಿಯಾಗಿದ್ದು, ವಿದ್ಯಾರ್ಥಿಗಳನ್ನು ಅಷ್ಟೇ ಅಲ್ಲದೆ ಸುತ್ತಮುತ್ತಲ ಜನರನ್ನೂ ಆಕರ್ಷಿಸುತ್ತಿದೆ.
ಶಾಲೆಯ ಕಪೌಂಡ್ ಗೋಡೆಯ ಪ್ಲಾಸ್ಟರಿಂಗ್ ಹಾಳಾಗಿದನ್ನು ಗಮನಿಸಿದ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಹಳೆಯ ವಿದ್ಯಾರ್ಥಿಗಳು ಸದರಿ ಕೆಲಸವನ್ನು ಮಾಡಲು ನಿರ್ಧರಿಸಿ ಸೇವಾಯಜ್ಞ ಫೌಂಡೇಶನ್ ಮುರ್ಡೇಶ್ವರ, ನಿಖಿಲ್ ದಿನಕರ ಶೆಟ್ಟಿ ಫೌಂಡೇಶನ್ ಕುಮಟಾ, ಸುಬ್ರಾಯ ವಾಲ್ಕೆ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ವಿಷಯ ತಿಳಿಸಿ ಅಂದಾಜು 1,25,000 ಕ್ಕೂ ಹೆಚ್ಚಿನ ಕೆಲಸವನ್ನು ಮಾಡಿ ಶಾಲೆಯ ಭೌತಿಕ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಈ ಕಾರ್ಯ ನಡೆಯುವ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನವರು ಸಂಪೂರ್ಣವಾಗಿ ತೊಡಗಿಕೊಂಡು ಶಾಲೆಯ ಸೌಂದರ್ಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇದೀಗ ಶಾಲೆಯ ಆವರಣ ಸುಂದರ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದು, ಜ್ಞಾನ ದೇಗುಲದಂತಾಗಿದೆ. ಕಂಪೌಂಡ್ ಗೋಡೆಯ ಮೇಲೆ, ಯಕ್ಷಗಾನದ ವೇಷಭೂಷಣ, ಹಣ್ಣು, ಹೂವು ಚಿತ್ತಾರ, ಜಲಪಾತ, ಆಯ್ದ ಆಕರ್ಷಕ ಕಟ್ಟಡಗಳು, ಜ್ಞಾನ ನೀಡುವ ವೃಕ್ಷಾಲಂಕಾರ ಜನಮನ ಗೆಲ್ಲುವಂತಿದೆ.
ಶಾಸಕ ದಿನಕರ ಕೆ. ಶೆಟ್ಟಿ, ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಕೂಜಳ್ಳಿ ಭಾಗದ ಸಿ.ಆರ್.ಪಿಗಳಾದ ಉಮೇಶ ನಾಯ್ಕ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಗರತ್ನ ನಾಯ್ಕ ಶಾಲೆಯ ಮುಖ್ಯಾಧ್ಯಾಪಕಿ ವೀಣಾ ನಾಯ್ಕ, ಸಹ ಶಿಕ್ಷಕರುಗಳಾದ ರಮಾ ದೇಶಭಂಡಾರಿ, ಪಂಚಾಯತ ಸದಸ್ಯ ಶ್ರೀಕಾಂತ ಶಾಸ್ತ್ರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಗೌಡ ಸೇರಿದಂತೆ ಸರ್ವರೂ ಹಳೆ ವಿದ್ಯಾರ್ಥಿಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.