ರಾಮಭಕ್ತರನ್ನ ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ದಿನಕರ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಕುಮಟಾ ಪೊಲೀಸ್ ಠಾಣೆ ಎದುರಿಗೆ ‘ನಾನೊಬ್ಬ ಕರಸೇವಕ ನನ್ನನ್ನು ಬಂಧಿಸಿ ಹಾಗೂ ನಾನೊಬ್ಬ ಹಿಂದು ದತ್ತುಪೀಠಕ್ಕಾಗಿ ಹೋರಾಡುವೆ ನನ್ನನ್ನು ಬಂಧಿಸಿ’ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಇಂದು ದೇಶದಲ್ಲಿ ರಾಮಭಕ್ತರೆಲ್ಲರೂ ಸಂತೋಷಪಡುವ ದಿನ ಸಮೀಪಿಸುತ್ತಿದೆ. ಹಿಂದೂಗಳ ಬಹುವರ್ಷಗಳ ಸಂಕಲ್ಪವಾಗಿದ್ದ ಭವ್ಯ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ನಿಶ್ಚಯವಾಗಿದೆ. ನರೇಂದ್ರಮೋದಿ ಸರ್ಕಾರ ಕೊಟ್ಟಮಾತಿನಂತೆ ಮುತುವರ್ಜಿವಹಿಸಿ ರಾಮಮಂದಿರ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿ ರಾಮಭಕ್ತರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ಮುಳುಗಿರುವ ಕಾಂಗ್ರೆಸ್ ಪಕ್ಷದವರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. 31ವರ್ಷದಷ್ಟು ಹಳೆಯ ಪ್ರಕರಣವನ್ನು ಈಗ ಕೈಗೆತ್ತಿಕೊಂಡು ಕಾರಸೇವಕರನ್ನು ಬಂಧಿಸುವ ಮೂಲಕ ಹಿಂದೂವಿರೋಧಿ ಧೋರಣೆಯ ಪರಮಾವಧಿಯನ್ನು ಪ್ರದರ್ಶಿಸುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ. ರಾಮಭಕ್ತರು ಸ್ವಭಾವತಃ ಶಾಂತಿಪ್ರಿಯರು. ಹಾಗಂತ ಸುಖಾಸುಮ್ಮನೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಸಿದ್ದರಾಮಯ್ಯ ಸರ್ಕಾರ ಕೈಹಾಕಿದರೆ ಅದರ ಗಂಭೀರಪರಿಣಾಮವನ್ನು ಎದುರಿಸಲು ಸಿದ್ಧವಾಗಬೇಕಾದೀತು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಇತಿಹಾಸದುದ್ದಕ್ಕೂ ಬಹುಸಂಖ್ಯಾತ ಹಿಂದೂಗಳ ಭಾವನೆಗಳಜೊತೆಗೆ ಆಟವಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ನಿರಂತರ ಸೋಲಿನ ಬಳಿಕವೂ ಬುದ್ಧಿ ಕಲಿತಂತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಬಿ.ಕೆ. ಹರಿಪ್ರಸಾದ, INDIA ಕೂಟದ ಉದಯನಿಧಿ ಸ್ಟಾಲಿನ ಅವರು ನೀಡುತ್ತಿರುವ ಹೇಳಿಕೆಗಳು ನಮ್ಮ ಸನಾತನ ಧರ್ಮದ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ಅಜ್ಞಾನ ಎನ್ನುವುದಕ್ಕಿಂತಲೂ ಹಿಂದೂಗಳ ಬಗ್ಗೆ ಏನುಹೇಳಿದರೂ ನಡೆಯುತ್ತದೆ ಎನ್ನುವ ಭಾವನೆ ಇನ್ನೂ ಅವರ ಮನಸ್ಸಿನಿಂದ ಹೋದಂತಿಲ್ಲ. ರಾಮಭಕ್ತರನ್ನು ಕೆಣಕಿದ ತಪ್ಪಿಗೆ ರಾವಣನಂತಹ ಮಹಾಪರಾಕ್ರಮಿ ಏನಾದ ಎನ್ನುವುದು ಎಲ್ಲರಿಗೂ ಗೊತ್ತು. ಇನ್ನು ಸಿದ್ದರಾಮಯ್ಯ ಯಾವಲೆಕ್ಕ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಆನಂತರ ರಾಮಭಕ್ತರ ತಂಟೆಗೆ ಬರಲಿ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಮ್. ಜಿ. ಭಟ್, ಜಿಲ್ಲಾ ಪ್ರಮುಖರಾದ ಪ್ರಶಾಂತ್ ನಾಯ್ಕ್, ಗಜಾನನ ಗುನಗಾ, ಡಾ. ಜಿ. ಜಿ. ಹೆಗಡೆ, ಪುರಸಭಾ ಸದಸ್ಯರು, ಗ್ರಾ. ಪಂ. ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ಸದಸ್ಯರು, ಭಾರತೀಯ ಜನತಾ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.