ಕುಮಟಾ : ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ನಿತ್ಯಾನಂದ ವಿ. ಹೆಗಡೆ ಅವರನ್ನು ಇದೇ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿ ಗೌರವಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ನನಗೆ ಹಾಗೂ ಈ ಸಂಸ್ಥೆಗೆ ಅವಿನಾಭಾವ ಸಂಬಂಧವಿದೆ. ನಾನೂ ಕೂಡಾ ಇಲ್ಲಿಯ ಹಳೆಯ ವಿದ್ಯಾರ್ಥಿ. ನೆಲ್ಲಿಕೇರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಹಾಗೂ ಪದವಿಪೂರ್ವ ಕಾಲೇಜಿನ ಅಭಿವೃದ್ಧಿಗಾಗಿ ನನ್ನ ಅವಧಿಯಲ್ಲಿ ವಿಶೇಷ ಕೊಡುಗೆ ಸಲ್ಲಿಸಿದ್ದೇನೆ. ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೆ ಜಾಗವನ್ನು ವ್ಯವಸ್ಥೆ ಮಾಡಿ ನಂತರ ಪ್ರತ್ಯೇಕ ಕಟ್ಟಡ ಹಾಗೂ ವಿಶಾಲ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಲು ಯಶಸ್ವಿಯಾಗಿದ್ದೇನೆ ಎನ್ನುವುದನ್ನು ಅತ್ಯಂತ ಸಂತೋಷದಿಂದ ನಿಮ್ಮೆದುರು ಹೇಳಿಕೊಳ್ಳುತ್ತೇನೆ. ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುವುದರ ಜೊತೆಗೆ, ಕ್ರೀಡಾಕೂಟಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನದಲ್ಲಿ ಪಠ್ಯೇತರ ಚಟುವಟಿಕೆಗಳೂ ವಿಶೇಷ ಪಾತ್ರವಹಿಸುತ್ತವೆ. ಈ ಕಾಲೇಜಿನಲ್ಲಿ ಅತ್ಯುತ್ತಮ ಉಪನ್ಯಾಸಕ ವೃಂದವಿರುವುದರಿಂದ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದರು.
ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಿ. ನಾಯ್ಕ, ನಿವೃತ್ತ ಪ್ರಾಂಶುಪಾಲ ನಿತ್ಯಾನಂದ ವಿ. ಹೆಗಡೆ, ಉಪನ್ಯಾಸಕರಾದ ಆರ್. ಎಚ್. ನಾಯ್ಕ, ಎಸ್. ಎಮ್. ನಾಯ್ಕ, ನಾಗರಾಜ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ನಿತ್ಯಾನಂದ ನಾಯಕ, ಲಕ್ಷ್ಮಿ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರತೀಕ ನಾಯ್ಕ, ಮುಸ್ಕಾನ್ ಮುಜಾವರ ಇದ್ದರು.