ಕುಮಟಾ : ಗ್ಯಾರಂಟಿ ಯೋಜನೆಯಿಂದ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನತ್ತ ಮತದಾರರ ಒಲವು ಇರುವುದನ್ನು ಗಮನಿಸಿ ಬಿಜೆಪಿಯ ಕೆಲವು ಮುಖಂಡರು, ಶಾಸಕರು, ಸಂಸದರು ಕೆಲವೊಂದು ತಲೆಬುಡವಿಲ್ಲದ ಹೇಳಿಕೆಯನ್ನು ನೀಡುವ ಮುಖಾಂತರ ಜಿಲ್ಲೆಯ ಜನರ ದಿಕ್ಕು ತಪ್ಪಿಸುವ ಕೆಲಸ ಪುನಃ ಪ್ರಾರಂಭ ಮಾಡಿದ್ದಾರೆ ಎಂದು ಕೆಪಿಸಿಸಿ ಉತ್ತರ ಕನ್ನಡ ಜಿಲ್ಲಾ ಸಂಯೋಜಕ ಭಾಸ್ಕರ ಪಟಗಾರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಸದರು ಕೆಲ ದಿನಗಳಿಂದ ಎಚ್ಚೆತ್ತುಕೊಂಡಿದ್ದಾರೆ. ಜಿಲ್ಲೆಯ ಮತದಾರರು ಹಾಗೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮೂರು ವರ್ಷಗಳಿಂದ ಇಲ್ಲದ ಕಾಳಜಿ ಈಗ ಅವರಿಗೆ ಪ್ರಾರಂಭವಾಗಿದೆ. ಜಿಲ್ಲೆಗೆ ಶೂನ್ಯ ಯೋಜನೆಯನ್ನು ನೀಡಿದ ಸಾಧನೆಯ ಸಂಸದರು ಇವರು. ಈ ಹಿಂದೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದಿದ್ದವರು, ಈಗ ತಮ್ಮದೇ ಜನರನ್ನು ಬಿಟ್ಟು ತಮಗೆ ಲೋಕಸಭೆ ಚುನಾವಣೆಗೆ ನಿಲ್ಲಲು ಜಿಲ್ಲೆಯ ಜನ ಹೇಳುತ್ತಿದ್ದಾರೆ ಎಂದು ಜಿಲ್ಲೆಯ ಜನರನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮುಂದಿನ ಲೋಕಸಭೆಯಲ್ಲಿ ಜಿಲ್ಲೆಯ ಜನತೆ ಅದಕ್ಕೆ ಸರಿಯಾದ ಉತ್ತರ ನೀಡುವಲ್ಲಿ ಎರಡು ಮಾತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯವರಿಗೆ ಕೆಲವೊಂದು ವಿಚಾರದಲ್ಲಿ ಹೇಳಿಕೆಗಳ ಮುಖಾಂತರ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಚಾಳಿ ಇದ್ದು, ಅದೇನೂ ಹೊಸತೇನಲ್ಲ. ಪರೇಶ್ ಮೇಸ್ತ ಸಾವಿನ ಮೇಲೆ ರಾಜಕಾರಣ ಮಾಡಿದವರು ಈಗ ಪರಮಾತ್ಮನ ಹೆಸರಿನಲ್ಲಿ, ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದುಗಳ ಪ್ರತಿಯೊಬ್ಬ ದೇವರು ಶ್ರೀರಾಮ. ದೇವರ ಹೆಸರಿನಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು ಎಂದರು.
ಬಿಜೆಪಿಯವರು ಶ್ರೀಕಾಂತ ಪೂಜಾರಿ ಬಂಧನದ ಬಗ್ಗೆ ಮಾತನಾಡುತ್ತಿದ್ದಾರೆ. ಸಾಕಷ್ಟು ಅಪರಾಧದ ಹಿನ್ನೆಲೆಯಲ್ಲಿ ಅವರನ್ನು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯರಿಗೆ ಇದು ತಪ್ಪಿನಂತೆ ಕಾಣಿಸುತ್ತಿದೆ. ತಪ್ಪಿತಸ್ಥರನ್ನೂ ಬೆಂಬಲಿಸುವ ಕಾರ್ಯ ಸದಾ ಬಿಜೆಪಿ ಸರ್ಕಾರದಲ್ಲಿ ಆಗುತ್ತಾ ಬಂದಿದೆ. ಇದೀಗ ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಭಯ ಇದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲವ ಭೀತಿಯಿಂದ ದಿಕ್ಕು ತೋಚದೆ ಈ ರೀತಿಯಾಗಿ ಮಾತನಾಡಿ ಜಿಲ್ಲೆಯ ಜನತೆಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ಬಿಜೆಪಿಯವರಿಗೆ, ಅವರ ಶಾಸಕರಿಗೆ, ಸಂಸದರಿಗೆ ಚಾಳಿಯಾಗಿದೆ. ಸಮಸ್ಯೆಗಳ ಬಗ್ಗೆ ಒಮ್ಮೆಯೂ ಧ್ವನಿ ಎತ್ತದೇ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲೂ ಅರ್ಹತೆ ಇವರಲ್ಲಿಲ್ಲ. ಮತ ಬ್ಯಾಂಕಿಗಾಗಿ ಮುಗ್ಧ ಜನರನ್ನು, ಮುಗ್ಧ ಮತದಾರರನ್ನೂ ದಿಕ್ಕು ತಪ್ಪಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯದು. ಜಿಲ್ಲೆಯ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.