ಕುಮಟಾ : ವಿದ್ಯಾರ್ಥಿಗಳಲ್ಲಿ ಕನಸು ಇರಬೇಕು. ಮಾದಕ ದ್ರವ್ಯಗಳಂತಹ ದುಶ್ಚಟಗಳ ದಾಸರಾಗದೇ ದೂರದೃಷ್ಟಿ ಹೊಂದಿ ಕಲಿಕೆಯಲ್ಲಿ ಶೃದ್ಧೆ, ಗುಂಪು ಚರ್ಚೆಗಳ ಮೂಲಕ ಅಭ್ಯಸಿಸುತ್ತ ಉನ್ನತ ವ್ಯಕ್ತಿಯಾಗುವ ಗುರಿ ಹೊಂದಬೇಕು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳಿಗೆ ದೊರೆಯುತ್ತಿದ್ದ ಸಂಸ್ಕಾರ ಇಂದು ಎಲ್ಲ ಮಕ್ಕಳಿಗೆ ಲಭ್ಯವಾಗುತ್ತಿಲ್ಲ. ಪಾಲಕರು ಇದನ್ನರಿತು ಮಕ್ಕಳನ್ನು ಇತರರಿಗೆ ಹೋಲಿಸಿಕೊಳ್ಳದೇ, ವಿದೇಶಿ ಸಂಸ್ಕೃತಿಗಳಿಗೆ ಮಾರು ಹೊಗದೇ ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕಾರಗಳನ್ನು ಪರಿಚಯಿಸುತ್ತ ತಮ್ಮ ಮಕ್ಕಳನ್ನು ಸಮಾಜ ಗುರುತಿಸುವ ವ್ಯಕ್ತಿಯನ್ನಾಗಿಸಬೇಕು ಎಂದು ಕುಮಟಾ ಪೋಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅಭಿಪ್ರಾಯಿಸಿದರು.

ಅವರು ಕುಮಟಾದ ಹೆಡ್ ಬಂದರ್ ಬೀಚ್ ನಲ್ಲಿನ ‘ಕೊಸ್ತಾ ರಿಕಾ’  ಸಭಾ ಭವನದಲ್ಲಿ ಸಮುತ್ಕರ್ಷ ಐಎಎಸ್ 16 ವಾರಗಳ ಕಾಲ ಕುಮಟಾದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ಪ್ರೀ ಫೌಂಡೇಶನ್ ತರಬೇತಿಗಳ ಈ ವರ್ಷದ ಶೃದ್ಧಾ ಮೇಧಾ ಬ್ಯಾಚ್ ಗಳ ವಿದ್ಯಾರ್ಥಿಗಳ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮುತ್ಕರ್ಷ ಐಎಎಸ್ ನ ರಾಜ್ಯ ಅಕಾಡೆಮಿಕ್ ಮುಖ್ಯಸ್ಥೆ ಸುಜಾತಾ ಶಾನಭಾಗ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಕುಮಟಾ ಶಾಖೆಯ ವತಿಯಿಂದ 6,7,8 ಮತ್ತು 9 ನೇ ತರಗತಿಯ ಮಕ್ಕಳಿಗೆ ಶೃದ್ಧಾ ಮೇಧಾಗಳೆಂಬ ಎರಡು ವಿಭಾಗಗಳ ಮೂಲಕ ಕಳೆದ 16 ವಾರಗಳಿಂದ ವಿವಿಧ ಕ್ಷೇತ್ರಗಳ ಹತ್ತು ಹಲವು ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ತರಬೇತಿಗಳನ್ನು ನಡೆಸಲಾಗಿದೆ. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಕೆಟ್ಟ ಗುಣಗಳನ್ನು ಬಿಡುವ ಬಗ್ಗೆ ಸೂಕ್ತ ತಿಳುವಳಿಕೆ ನೀಡುತ್ತ ಬರಲಾಗಿದೆ. ದೈಹಿಕ ಮಾನಸಿಕ ಆರೋಗ್ಯ ವೃದ್ಧಿಯ ಜೊತೆಗೆ ಸಮಾಜದ ಆರೋಗ್ಯ ಬೆಳೆಸುವ ಕಾರ್ಯೋದ್ದೇಶ ಹೊಂದಲಾಗಿದ್ದು, ಮಕ್ಕಳನ್ನು ಮಾರುಕಟ್ಟೆ ಭೇಟಿ ಮಾಡಿಸುವ ಮೂಲಕ ಪ್ರಾತ್ಯಕ್ಷಿಕೆಗಳನ್ನು ನಡೆಸುವ ಜೊತೆಗೆ ತರಗತಿಗಳಲ್ಲಿ ಕುಟುಂಬ ಪ್ರ ಬೋಧನೆ ಮುಂತಾದ ಕಾರ್ಯ ಕೈಕೊಂಡಿದ್ದೇವೆ. ತಮ್ಮ ತರಗತಿಗಳಿಗೆ ಪ್ರವೇಶ ಪಡೆಯುವಾಗ ತುಸು ಶಿಗ್ಗಿನಿಂದ ಬಂದ ಅದೆಷ್ಟೋ ವಿದ್ಯಾರ್ಥಿಗಳು ಇಂದು ವೇದಿಕೆ ಏರಿ ನಿರರ್ಗಳ ವಾಗಿ ವಿಷಯ ಮಂಡಿಸುತ್ತ ಹಿಗ್ಗುವುದನ್ನು ಕಂಡಾಗ ನಿಜಕ್ಕೂ ನಮಗೂ ತುಂಬು ಭರವಸೆ, ಖುಷಿಯೆನಿಸುತ್ತಿದೆ. ರಾಷ್ಟ್ರಭಕ್ತಿ, ಸಹಾನುಭೂತಿ, ಪ್ರಾಮಾಣಿಕತೆ, ಶಿಸ್ತು ಅಳವಡಿಸಿಕೊಂಡ ಅಧಿಕಾರಿಗಳಿಂದ ಮಾತ್ರ ನೈಜ ಸಮಾಜದ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ. ಇಂತಹ ಸುಸಂಸ್ಕೃತ ಅಧಿಕಾರಿಗಳನ್ನಾಗಿಸುವುದೇ  ಸಮುತ್ಕರ್ಷ ಐಎಎಸ್ ಸಂಸ್ಥೆಯ ಘನ ಉದ್ದೇಶ ವಾಗಿದ್ದು ಈ ಉದ್ದೇಶ ಈಡೇರಿಕೆಯಲ್ಲಿ ಮಕ್ಕಳಷ್ಟೇ ಪಾಲಕರ ಆಸಕ್ತಿ ಪೂರ್ವಕ ಸಹಕಾರವೂ  ಅತಿ ಮುಖ್ಯ ಎಂದರು.

RELATED ARTICLES  ಬುರ್ಖಾ ಧರಿಸಿ ಬಸ್ ನಲ್ಲಿ ಕುಳಿತು ಚಿನ್ನಾಭರಣ ಕಳವು : ಹೆಚ್ಚುತ್ತಿದೆ ಪ್ರಕರಣಗಳು.

ವಿದ್ಯಾರ್ಥಿಗಳ ಪಾಲಕರುಗಳಾದ ಶ್ರೀರಂಗ ಗುನಗ, ಅನಿಲ ಶೇಟ್, ಮಂಗಲಾ ಜಿ., ಪ್ರಿಯಾ ನಾಯ್ಕ ಮುಂತಾದವರು ತರಬೇತಿಯಿಂದ ತಮ್ಮ ಮಕ್ಕಳಲ್ಲಾದ ಧನಾತ್ಮಕ ಬದಲಾವಣೆಗಳ ಬಗ್ಗೆ ತಿಳಿಸಿ ಅನುಭವ ಹಂಚಿಕೊಂಡರು.

ಆರ್ಯನ್, ಸಿದ್ಧಾರ್ಥ, ಮೇಘನಾ ಫರ್ನಾಂಡೀಸ್ ಮುಂತಾದ ವಿದ್ಯಾರ್ಥಿಗಳು ತರಬೇತಿ ತರಗತಿಗಳಲ್ಲಿನ ತಮ್ಮ ಅನುಭವ ಹಂಚಿಕೊಂಡರು.

RELATED ARTICLES  ನೀರು ಎಂದುಕೊಂಡು ವಿಷ ದೃವ ಕುಡಿದ ಪುಟಾಣಿ.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಮುತ್ಕರ್ಷದ ಟ್ರಸ್ಟಿಯಲ್ಲೋರ್ವರಾದ ವಿನೋದ ದೇಶಪಾಂಡೆ ಹಿತನುಡಿಗಳನ್ನಾಡಿ ಲೋಕ ಜ್ಞಾನ ಅರಿಯಬೇಕು. ಸಮಾಜಮುಖೀ ಅಧಿಕಾರಿಗಳು ಅಧಿಕಾರಕ್ಕೆ ಬಂದಾಗ ಸಮಾಜ ಸುಧಾರಣೆ ಸಾಧ್ಯ. ಸಾಧನೆಗೆ ವಯಸ್ಸು ಮುಖ್ಯವಲ್ಲ. ಮನಸ್ಸು ಮುಖ್ಯ. ಶೃದ್ಧೆ,ಪರಿಶ್ರಮ ಹಾಗೂ ಆಸಕ್ತಿಯ ಗುಣ ಬೆಳೆಸಿಕೊಳ್ಳಬೇಕು. ಮಕ್ಕಳು ಸಮಯ ಕಳೆಯಬಾರದು,ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ರೂಢಿಸಿಕೊಳ್ಳಬೇಕು. ಸಮತ್ಕರ್ಷ ಸಂಸ್ಥೆಯು ತನ್ನ ತರಗತಿಗಳಲ್ಲಿ ಮಕ್ಕಳಿಗೆ ಬಿತ್ತಿದ ಬೀಜವನ್ನು ಪೋಷಿಸುವ ಕಾರ್ಯವಾಗಬೇಕಿದೆ ಎಂದರು.

ಸೇವೆಯ ಮೂಲಕ ತಮ್ಮನ್ನು ಸಮುತ್ಕರ್ಷ ತಂಡದಲ್ಲಿ ತೊಡಗಿಸಿಕೊಂಡ ಜಿ.ಎಮ್.ಕಾಮತ, ಎಮ್.ಎಮ್.ನಾಯ್ಕ, ಶ್ರೀನಿವಾಸ ನಾಯ್ಕ, ಅಶ್ವಿನ್ ಭಟ್ಟ, ಪ್ರಣವ ಮಣಕಿಕರ,ಕೃಷ್ಣ ಹೆಗಡೆ,ಜಯದೇವ ಬಳಗಂಡಿ, ಪವನ ಗುನಗಾ, ವಿಜಯಕುಮಾರ ತಳವಾರ,ಗೀತಾ ಶಾನಭಾಗ, ಸ್ವಾತಿ ಬಳಗಂಡಿ,ವರೇಖಾ ಹೆಗಡೆ ಮುಂತಾದ ಸೇವಾ ಸದಸ್ಯರು ಹಾಗೂ ಪಾಲಕರು, ಹಿತೈಷಿಗಳು ಪಾಲ್ಗೊಂಡಿದ್ದರು.

ತರಬೇತಿಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೆ  ಅತಿಥಿಗಳಿಂದ ಪ್ರಮಾಣಪತ್ರ ನೀಡಿ ಶುಭ ಹಾರೈಸಲಾಯಿತು. ಮಕ್ಕಳು ತಾವೇ ತಯಾರಿಸಿದ ಗಾಳಿಪಟಗಳನ್ನು ಸಭಾ ಕಾರ್ಯಕ್ರಮಕ್ಕೂ ಮೊದಲು ಬೀಚ್ ನಲ್ಲಿ  ಹಾರಿಸಿ ಖುಷಿಪಟ್ಟರು.

ವಿದ್ಯಾರ್ಥಿಗಳಿಂದ ಸಂಘಟನಾ ಮಂತ್ರ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಈ ಸಮಾರೋಪ ಸಮಾರಂಭದಲ್ಲಿ ಸ್ವಾಗತ, ನಿರೂಪಣೆ ಮತ್ತು  ವಂದನಾರ್ಪಣೆ ಎಲ್ಲವೂ ಮಕ್ಕಳಿಂದಲೇ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿದ್ದು ಕಾರ್ಯಕ್ರಮ ಸಭಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು.