ಕುಮಟಾ : ತಾಲ್ಲೂಕಿನ ದೀವಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಮಣಕೋಣದಲ್ಲಿ ಮಕರ ಸಂಕ್ರಾಂತಿಯಂದು ಶ್ರೀ ಬಂಗಾರಮ್ಮ ದೇವತೆಯ ವಿಶೇಷ ಪೂಜೆ ಕಾರ್ಯಕ್ರಮ ಸಂಪನ್ನವಾಯಿತು.
ಅಘನಾಶಿನಿ ನದಿಯಲ್ಲಿ ಇರುವ ಈ ದೇವಿಯ ಮೂರ್ತಿ ಆಘನಾಶಿನಿ ನದಿಗೆ ಉಬ್ಬರ, ಮಳೆಗಾಲ ಪ್ರವಾಹ ಬಂದರೆ ಸಂಪೂರ್ಣ ಮುಳುಗುತ್ತದೆ. ಹಿಂದೆ ತನ್ನ ಭಕ್ತಾದಿಗಳಿಗೆ ಬಂಗಾರವನ್ನು ನೀಡುತ್ತಿದ್ದ ಈ ದೇವಿಗೆ ಬಂಗಾರಮ್ಮ ಎಂಬ ಹೆಸರು ಬಂದಿತು ಎಂದು ಸ್ಥಳೀಯರು ತಿಳಿಸುತ್ತಾರೆ. ಬಡವರು ತಮ್ಮ ಮನೆಯಲ್ಲಿ ಮದುವೆ ಮುಂತಾದ ಕಾರ್ಯ ಮಾಡುವಾಗ, ಗೃಹಿಣಿಯರು ತಮ್ಮ ತವರು ಮನೆ, ಬಂಧುಗಳ ಮನೆಗೆ ಹೋಗುವಾಗ ಬಂಗಾರದ ಒಡವೆ ಇಲ್ಲದಿದ್ದರೆ ಈ ದೇವಿಯ ಬಳಿ ಸಂಜೆ ಹೊತ್ತು ಬಂದು ಬೇಡಿಕೊಂಡರೆ ಅಂಥವರಿಗೆ ಮರುದಿನ ದೇವಿ ಬೇಕಾದ ಒಡವೆ ಕರುಣಿಸುತ್ತಿದ್ದಳು. ಆದರೆ ಆ ಒಡವೆಯನ್ನು ಬಳಕೆ ಮಾಡಿದ ನಂತರ ಅದನ್ನು ದೇವಿಯ ಬಳಿ ಬಂದು ವಾಪಸ್ಸು ಕೊಡಬೇಕಿತ್ತು. ಯಾರೋ ಆಸೆಬುರುಕರು ಅದನ್ನು ಹಿಂತಿರುಗಿ ದೇವಿಗೆ ಕೊಡದಿದ್ದಾಗ ದೇವಿ ಮುನಿದು ಬಂಗಾರ ಕೊಡುವುದನ್ನೇ ನಿಲ್ಲಿಸಿದಳು ಎಂಬುದು ಐತಿಹ್ಯ.
ಈ ಬಂಗಾರ ದೇವತೆಗೆ ಬಾಳೆಹಣ್ಣು / ಹಾಗೂ ಪಂಚಕಜ್ಜಾಯ ಬಿಟ್ಟರೆ ಭಕ್ತರು ಬೇರೆ ಯಾವ ನೈವೇದ್ಯವನ್ನೂ ನೀಡುವುದಿಲ್ಲ. ಇಲ್ಲಿ ಜಿಲ್ಲೆಯ ಬೇರೆ ಬೇರೆ ಸಮಾಜದ ಭಕ್ತರು ಪೂಜೆ ಕೊಡುತ್ತಾರೆ. ಊರಿನ ಹೊರಗಿದ್ದ ಈ ದೇವಿಗೆ ಪೂಜೆ ಸಲ್ಲಿಸಲೆಂದೇ ಸಂಕ್ರಾಂತಿಗೆ ಊರಿಗೆ ಬರುತ್ತಾರೆ. ಸಂಕ್ರಾಂತಿ ಹಾಗೂ ಅದರ ಮರುದಿನ ಹಗಲು ರಾತ್ರಿ ಎನ್ನದೇ ದೇವಿಗೆ ಹರಕೆ, ಪೂಜೆ ಸಲ್ಲಿಸುವುದು ಇಲ್ಲಿಯ ವಿಶೇಷ.
ಈ ವರ್ಷ ದೇವಿಯ ವೈಭವೋಪೇತ ಪೂಜೆಯ ನಂತರದಲ್ಲಿ ಶ್ರೀ ಬಂಗಾರಮ್ಮ ಗೆಳೆಯರ ಬಳಗದವರು ವಾಲಿಬಾಲ್ ಪಂದ್ಯ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನಾಟಿವೈದ್ಯ ಕುಪ್ಪು ಬೊಮ್ಮ ಗೌಡ, ಸಾರಿಗೆ ಇಲಾಖೆಯ ಮಾದೇವ ನಾಯ್ಕ, ಸೋಲಾರ್ ನ ದತ್ತಾತ್ರೇಯ ಭಟ್ಟ ಇವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.