ಕುಮಟಾ : ತಾಲೂಕಿನ ಹೆಗಲೆಯ ಶ್ರೀಕ್ಷೇತ್ರ ಭುಜಗಪುರದ ಮಹಾರಾಜ್ಞೀ ಶ್ರೀದುರ್ಗಾಪರಮೇಶ್ವರೀ ದೇವಾಲಯ ದಲ್ಲಿ ಪುಷ್ಯ ಶುಕ್ಲ ಚತುರ್ದಶೀ (ಜ. ೨೪) ಬುಧವಾರದಿಂದ ಪುಷ್ಯ ಕೃಷ್ಣ ತೃತೀಯಾ (ಜ.೨೮) ರವಿವಾರದವರೆಗೆ ಭಾರತ ದೇಶದ ಇತಿಹಾಸದಲ್ಲಿಯೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ‘ಅಯುತ ಚಂಡಿಕಾ ಮಹಾಯಾಗ’ ‘ಮಹಾರುದ್ರಾನುಷ್ಠಾನ’ ನಡೆಯಲಿದ್ದು, ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯತಮ ಕಾರ್ಯದಲ್ಲಿ ಭಾಗವಹಿಸುವಂತೆ ಆಯೋಜಕರುಗಳಾದ ವಿನಾಯಕ ಶ್ರೀಧರ ಹೆಗಡೆ, ಗುರುಪ್ರಕಾಶ ಗಣೇಶ ಹೆಗಡೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ವಿಶೇಷವಾಗಿ ಸಂತಾನ ಪ್ರಾಪ್ತಿ, ಆರೋಗ್ಯ ಭಾಗ್ಯ ಹಾಗೂ ಸರ್ಪದೋಷ ನಿವಾರಣೆಗೆ ಶಕ್ತಿ ಸ್ಥಳವಾಗಿರುವ ಸುಕ್ಷೇತ್ರ ಭುಜಗಪುರದ ಸುಂದರ ರಮಣೀಯ ಶಾಂತ ನಿಸರ್ಗದ ನಡುವೆ ರಾರಾಜಿಸುತ್ತಿರುವ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರೀ ದೇವಿಯ ದಿವ್ಯಸನ್ನಿಧಿಯಲ್ಲಿ ಅಯುತ ಚಂಡಿಕಾ ಮಹಾಯಾಗ ಹಾಗೂ ಮಹಾರುದ್ರಾನುಷ್ಠಾನಾದಿ ಯಾಗಗಳನ್ನು ನೆರವೇರಿಸಲು ಜಗನ್ಮಾತೆಯ ಪ್ರೇರಣೆಯಂತೆ ಸಂಕಲ್ಪಿಸಿದ್ದೇವೆ. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀಸಂಸ್ಥಾನ ಗೋಕರ್ಣ- ಶ್ರೀರಾಮಚಂದ್ರಾಪುರಮಠ ಇವರ ದಿವ್ಯಾಶೀರ್ವಾದಗಳೊಂದಿಗೆ ನಡೆಯುತ್ತಿರುವ ಈ ಕಾರ್ಯ ನಡೆಯಲಿದೆ. ಈ ಮಹಾಯಾಗವು ಕುಟುಂಬದ ಹಿರಿಯರಾದ ಶ್ರೀಧರ ಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ತಾಂತ್ರಿಕರಾದ ಆಗಮಶ್ರೇಷ್ಠ ವೇ|| ಶ್ರೀ ಶಂಕರ ಭಟ್ಟ ಕಟ್ಟೆ ಇವರ ಆಚರ್ಯತ್ವದಲ್ಲಿ ಪುರೋಹಿತರಾದ ವೇ|| ಶ್ರೀ ಕೃಷ್ಣ ಗಣಪತಿ ಭಟ್ಟರ ಪೌರೋಹಿತ್ಯದಲ್ಲಿ ಹಾಗೂ ಋಗ್ವೇದ ಘನಪಾಠಿಗಳಾದ ವೇ. ಶ್ರೀ ರಾಮಕೃಷ್ಣ ಭಟ್ಟ ಶಂಕರಲಿಂಗ, , ಶ್ರೀಕರಿಕಾನಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ. ಶ್ರೀ ಸುಬ್ರಹ್ಮಣ್ಯ ವಿಶ್ವೇಶ್ವರ ಭಟ್ಟ, ಶ್ರೀಕ್ಷೇತ್ರ ಹೆಗಲೆಯ ಪ್ರಧಾನ ಅರ್ಚಕ ಶ್ರೀ ಸುಬ್ರಾಯ ಪರಮೇಶ್ವರ ಭಟ್ಚರ ಮಾರ್ಗದರ್ಶನದಲ್ಲಿ ೩೦೦ಕ್ಕೂ ಅಧಿಕ ವೈದಿಕಶ್ರೇಷ್ಠರ ಸಹಯೋಗದಲ್ಲಿ ನಡೆಯಲಿದೆ. ಈಗಾಗಲೇ ಈ ಮಹಾಯಾಗದ ಅಂಗವಾಗಿ ದಶಸಹಸ್ರ “ಶ್ರೀ ದುರ್ಗಾಸಪ್ತಶತೀ” ಪಾರಾಯಣಗಳು ತಾಯಿಯ ಸನ್ನಿಧಿಯಲ್ಲಿ ಕ್ಷೇತ್ರದ ಋತ್ವಿಜರುಗಳಿಂದ ಸಮರ್ಪಣೆಗೊಂಡಿವೆೆ. ಭಗವತ್ಪ್ರೀತ್ಯರ್ಥವಾಗಿ ಆಯೋಜಿಸಿರುವ ಈ ಮಹತ್ಕಾರ್ಯಕ್ಕೆ ಆಸ್ತಿಕ ಬಂಧುಗಳು ಸಕುಟುಂಬ ಸಮೇತರಾಗಿ ಆಗಮಿಸಿ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರೀ ದೇವಿಯ ಪೂರ್ಣಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಅವರು ವಿನಂತಿಸಿದ್ದಾರೆ.

ಜ.೨೪ ಬುಧವಾರ ಶ್ರೀ ಗುರುದೇವತಾ ಪ್ರಾರ್ಥನೆ, ಶ್ರೀ ಗಣೇಶಪೂಜಾ, ಪುಣ್ಯಾಹವಾಚನ, ದೇವನಾಂದಿ, ಶ್ರೀ ಮಂಗಲಮಾತೃಕಾಪೂಜಾ, ಕೌತುಕಪೂಜಾ, ಪ್ರಧಾನ ಸಂಕಲ್ಪ, ಋತ್ವಿಕ್ ವರ್ಣನೆ, ಮಧುಪರ್ಕಪೂಜಾ, ಅರಣೀಮಥನ, ಅಷ್ಟದ್ರವ್ಯಾತ್ಮಕ ಚತುರ್ನಾರಿಕೇಲ ಗಣಹವನ, ಪವಮಾನ ಹೋಮ, ಮಹಾರಾಜ್ಞೀ ಶ್ರೀ ದುರ್ಗಾ ಮೂಲಮಂತ್ರ ಹೋಮ, ಧ್ವಜಾಧಿವಾಸ ಹೋಮ, ಧ್ವಜಾರೋಹಣ ಮಧ್ಯಾಹ್ನ ಪೂಜೆ ಹಾಗೂ ಸಂಜೆ ರಾಕ್ಷೋಘ್ನ-ವಾಸ್ತು ವಿಧಾನಗಳು, ಶ್ರೀ ಮಹಾರಾಜ್ಞೀ ಅಯುತ ಚಂಡಿಕಾ ಯಾಗಶಾಲಾ ಪ್ರವೇಶ, ಉದಕಶಾಂತಿ, ಮೃತ್ತಿಕಾಹರಣ, ಬೀಜವಾಪನ, ಅಗ್ನಿಜನನ, ಸಮಗ್ರ ಕಲಶಸ್ಥಾಪನಾ, ಶ್ರೀ ಭೇರಿತಾಡನ, ಉತ್ಸವ, ಶ್ರೀ ಬಲಿ ವಿಧಾನಗಳು, ಮಹಾಪೂಜೆ ನಡೆಯಲಿದೆ.
ಜ.೨೫ ಗುರುವಾರ ಬೆಳಿಗ್ಗೆ ಶ್ರೀ ಗಣೇಶಪೂಜಾ, ಪುಣ್ಯಾಹವಾಚನ, ಶ್ರೀ ಉದಯಬಲಿ, ಚತುರ್ದ್ರವ್ಯಾತ್ಮಕ ಸಹಸ್ರ ಗಣಪತಿ ಅಥರ್ವಶೀರ್ಷ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಮಹಾಯಾಗ ಪ್ರಾರಂಭ ಮಧ್ಯಾಹ್ನ ಪೂಜಾ, ಅಮೃತಾನ್ನ ಪ್ರಸಾದ. ಸಂಜೆ ಶಾಂತಿಪಾಠಗಳು, ಶ್ರೀ ಲಲಿತಾರಾಧನೆ, ಶ್ರೀ ಪಲ್ಲಕ್ಕಿಉತ್ಸವ, ಶ್ರೀ ಬಲಿ, ರಾಜೋಪಚಾರಸೇವಾ, ಮಹಾಪೂಜೆ ನಡೆಯಲಿದೆ.
ಜ.೨೬ ಶುಕ್ರವಾರ ಬೆಳಿಗ್ಗೆ ಶ್ರೀ ಗಣೇಶಪೂಜಾ, ಪುಣ್ಯಾಹವಾಚನ, ಶ್ರೀ ಉದಯಬಲಿ, ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಹೋಮ, ನವಗ್ರಹ ಶಾಂತಿ, ಸೌರಸೂಕ್ತ ಹೋಮ, ಅಷ್ಟದ್ರವ್ಯಾತ್ಮಕ ಗಾಯತ್ರೀ ಹೋಮ, ಸುಹಾಸಿನಿಯರಿಂದ ಕುಂಕುಮಾರ್ಚನೆ, ಮಧ್ಯಾಹ್ನಪೂಜಾ, ಅಮೃತಾನ್ನ ಪ್ರಸಾದ, ಶ್ರೀ ಡಿ.ಆರ್.ಹೆಗಡೆ ಇವರಿಂದ ಹರಿಕೀರ್ತನೆ, ಅಂದು ಸಂಜೆ ಶ್ರೀ ದುರ್ಗಾ ಸಹಸ್ರನಾಮಾರ್ಚನೆ, ಉತ್ಸವ, ಮಹಾಬಲಿ, ರಂಗಪೂಜಾ, ರಾಜೋಪಚಾರಸೇವಾ, ಮಹಾಪೂಜಾ ನಡೆಯಲಿದೆ.

RELATED ARTICLES  ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡ ಸರಸ್ವತಿ ಪಿಯು ವಿದ್ಯಾರ್ಥಿಗಳು

ಜ.೨೭ರ ಶನಿವಾರ ಬೆಳಿಗ್ಗೆ ಶ್ರೀ ಗಣೇಶಪೂಜಾ, ಪೂಜ್ಯಾಹವಾಚನ, ಶ್ರೀ ಉದಯಬಲಿ, ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಹೋಮ, ಸಪ್ತದ್ರವ್ಯಾತ್ಮಕ ದಶಸಹಸ್ರ ಮೃತ್ಯುಂಜಯ ಹವನ, ಮಹಾರುದ್ರ ಹೋಮ, ಸುಹಾಸಿನಿಯರಿಂದ ಕುಂಕುಮಾರ್ಚನೆ ಮಧ್ಯಾಹ್ನ ಪೂಜಾ, ಅಮೃತಾನ್ನ ಪ್ರಸಾದ, ವಿದುಷಿ ಶ್ರೀಮತಿ ಸಾವಿತ್ರಿ ಸದಾಶಿವ ಜೋಶಿ, ಮುಂಬೈ ಇವರಿಂದ ಸಂಗೀತ ಸೇವಾ, ಸ್ಥಳೀಯ ಖ್ಯಾತ ಭರತನಾಟ್ಯ ಕಲಾವಿದರಿಂದ ಭರತನಾಟ್ಯ, ಸಂಜೆ ತ್ರಿಶತೀ ಪೂಜಾ, ಶ್ರೀ ಭೂತಬಲಿ, ಶ್ರೀ ಯೋಗಿನಿ ಬಲಿ, ಶ್ರೀ ಕ್ಷೇತ್ರಪಾಲ ಬಲಿ, ರಾಜೋಪಚಾರಸೇವಾ, ಮಹಾಪೂಜೆ ನಡೆಯಲಿದೆ.

ಜ.೨೮ ರವಿವಾರ ಬೆಳಿಗ್ಗೆ ಶ್ರೀ ಗಣೇಶಪೂಜಾ, ಪೂಣ್ಯಾಹವಾಚನ, ಶ್ರೀ ಉದಯಬಲಿ, ಪಂಚವಿಂಶತಿ ಕುಂಡಗಳಲ್ಲಿ ಅಯುತ ಚಂಡಿಕಾ ಮಹಾಯಾಗ, ಅಷ್ಟದ್ರವ್ಯಾತ್ಮಕ ದುರ್ಗಾಶಾಂತಿ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಸ್ಕಂದಶಾAತಿ, ಸರ್ಪಸೂಕ್ತ ಹೋಮ, ಜನಾರ್ದನ ವಾಸುದೇವ ಮೂಲಮಂತ್ರಹೋಮ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಮಹಾಪೂರ್ಣಾಹುತಿ, ಅವಭೃತ ಧ್ವಜಾವರೋಹಣ, ಸುಹಾಸಿನಿಯರಿಂದ ಲಕ್ಷ ಕುಂಕುಮಾರ್ಚನೆ ಸಮರ್ಪಣೆ, ಅಂಕುರಾರ್ಪಣಾ, ಮಹಾಪೂಜಾ, ತೀರ್ಥ-ಪ್ರಸಾದ ವಿತರಣಾ ಅಮೃತಾನ್ನ ಪ್ರಸಾದ, ಶ್ರೀ ಮಂಗಲ ಸಮಾರಂಭ, ಲೋಕಕಲ್ಯಾಣಾರ್ಥ ಆಶೀರ್ಗ್ರಹಣ ನಡೆಯಲಿದೆ.

ಬನ್ನಿ ಪಾವನ ಭೂಮಿಗೆ.

ಭರತ ಭೂಮಿ ಅಸಂಖ್ಯಾತ ಮಹಾನ್ ಯೋಗಿಗಳು, ಸಾಧು-ಸಂತರು ಹಾಗೂ ಸತ್ಪುರುಷರು ಜನಿಸಿದ ನೆಲ. ಅಗಣಿತ ದಾರ್ಶನಿಕರು, ಮಂತ್ರದೃಷ್ಟಾರರು, ಧರ್ಮಜ್ಞರು ತಮ್ಮ ಜೀವನವನ್ನು ಪಾವನವನ್ನಾಗಿಸಿಕೊಂಡ ಧನ್ಯದೇಶ. ಇದು ದೈವಾಂಶಸಂಭೂತರ ದೇವಭೂಮಿ, ತಪಸ್ವಿಗಳ ತಪೋಭೂಮಿ, ಜ್ಞಾನಿಗಳ ಜ್ಞಾನಭೂಮಿ. ಈ ಎಲ್ಲಾ ಮಹಾನ್ ಚೇತನಗಳ ಧರ್ಮಕಾರ್ಯಗಳ ಫಲವಾಗಿ ಸಾಕ್ಷಾತ್ ಭಗವಂತನು ದಿವಿಯಿಂದ ಭುವಿಗೆ ಅವತರಿಸಿದ ಅನೇಕ ಸಿದ್ಧಿಕ್ಷೇತ್ರಗಳು ಈ ಪುಣ್ಯಭೂಮಿಯಲ್ಲಿವೆ. ಇಂತಹ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದು, ಜಗನ್ಮಾತೆ ಆದಿಪರಾಶಕ್ತಿ ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ದೇವಿಯು ಆವಿರ್ಭವಿಸಿ, ವಿರಾಜಿಸುತ್ತಿರುವ ನಿಸರ್ಗದ ರಮ್ಯ ರಮಣೀಯ ಪಾವನ ತಾಣ – ಶ್ರೀ ಭುಜಗಪುರ (ಹೆಗಲೆ) ಕ್ಷೇತ್ರ. ನೂರಾರು ವರ್ಷಗಳ ಹಿಂದಿನ ಮಾತು. ಶ್ರೀ ಭುಜಗಪುರ ಕ್ಷೇತ್ರದಲ್ಲಿ ಕಾನನದ ನಡುವೆ, ಬೃಹದಾಕಾರದ ವಲ್ಮೀಕದ ಸನಿಹ ಶಿಲಾರೂಪದಲ್ಲಿ ಪ್ರತ್ಯಕ್ಷಳಾದ ಜಗದೀಶ್ವರಿಯನ್ನು ದರ್ಶನ ಮಾಡಿದ ಪೂರ್ವಜರು, ಲೋಕಕಲ್ಯಾಣಾರ್ಥವಾಗಿ ಗೋಚರಿಸಿದ ದೇವಿಗೆ ಚಿಕ್ಕ ದೇವಾಲಯವನ್ನು ನಿರ್ಮಿಸಿ, ಯಥಾಶಕ್ತಿ ಪೂಜೆ ಸಲ್ಲಿಸುತ್ತಿದ್ದರು. ಭಗವತ್ ಸ್ವರೂಪಿ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ಅವರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿ, ಸುತ್ತಲಿನ ಪ್ರಕೃತಿಲಕ್ಷಣಗಳನ್ನೂ, ಪರಿಸರವನ್ನೂ ವೀಕ್ಷಿಸಿ, ವಲ್ಮೀಕವು ಸಾಕ್ಷಾತ್ ಜಗನ್ಮಾತೆಯ ದಿವ್ಯಸಾನ್ನಿಧ್ಯವಿರುವ ಸ್ಥಳವೆಂದು ಮನಗಂಡು, ಭಗವತಿಯ ನಿತ್ಯ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಲು ಆದೇಶಿಸಿದರು.

RELATED ARTICLES  ಹವ್ಯಕ ವಿದ್ಯಾ ವರ್ಧಕ ಸಂಘದ ೨೯ನೇ ವಾರ್ಷಿಕ ಸಮ್ಮೇಳನ ಸಂಪನ್ನ.

೧೯೭೮ರಲ್ಲಿ ದೇವಾಲಯವನ್ನು ಶ್ರೀ ಕೃಷ್ಣ ಗಣಪ ಹೆಗಡೆ ಇವರು ನವೀಕರಣಗೊಳಿಸಿದರು. ನೂತನವಾಗಿ ನಿರ್ಮಿಸಲ್ಪಟ್ಟ ತಾಮ್ರಾಚ್ಛಾದಿತ ಆಗಮೋಕ್ತ ಭವ್ಯ ದೇವಾಲಯದಲ್ಲಿ ೨೦೧೯ರಲ್ಲಿ ಮಹಾರಾಜ್ಞೀ ದೇವಿಯ ಪುನರ್ ಪ್ರತಿಷ್ಠಾಪನೆಯು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅಮೃತ ಕರಕಮಲಗಳಿಂದ ನೆರವೇರಿಸಲ್ಪಟ್ಟಿತು. ಸೃಷ್ಟಿಯ ಆದಿಯಲ್ಲಿ ಮೊದಲು ಉದ್ಭವಿಸಿದವಳು ಆದಿಪರಾಶಕ್ತಿ. ಸಕಲ ಚರಾಚರ ಜಗತ್ತಿಗೆ ತಾಯಿಯಾದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಮಹಿಮೆಯನ್ನು ‘ದೇವೀಭಾಗವತ’ ‘ಬ್ರಹ್ಮಾಂಡಪುರಾಣ’, ‘ಸ್ಕಂದಪುರಾಣ’ ಇತ್ಯಾದಿ ಧರ್ಮಗ್ರಂಥಗಳು ಕೊಂಡಾಡುತ್ತವೆ. ಆದರೆ ಭಗವತಿಯೇ ತನ್ನ ಆರಾಧನಾ ಕ್ರಮಗಳನ್ನು ಲೋಕಕ್ಕೆ ಕರುಣಿಸಿದ ಮಾರ್ಕಾಂಡೇಯ ಪುರಾಣೋಕ್ತ “ಶ್ರೀ ದುರ್ಗಾಸಪ್ತಶತೀ” ದೇವ್ಯೋಪಾಸನೆಗೆ ಅಗ್ರಗಣ್ಯ. ಡಾಮರಾದಿ ತಂತ್ರಗ್ರಂಥಗಳು ಶ್ರೀ ದುರ್ಗಾಸಪ್ತಶತಿಯ ಅಪಾರಮಹಿಮೆಯನ್ನು ವರ್ಣಿಸಿವೆ. ಸಕಲ ಜೀವರಾಶಿಗಳ ಅಭ್ಯುದಯಕ್ಕೆ, ಸನ್ಮನೋಭೀಷ್ಟಗಳ ಸಿದ್ಧಿಗೆ, ಸಮಸ್ತ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಮೂಲಮಂತ್ರವೇ ಶ್ರೀ ದುರ್ಗಾಸಪ್ತಶತಿಯ ಪಾರಾಯಣ. || ಸರ್ಪಾರೂಢಾಯೈ ಮಹಾರಾಜ್ಞೀ ದೇವ್ಯೈ ನಮಃ || ಶ್ರೀಕ್ಷೇತ್ರ ಭುಜಗಪುರದಲ್ಲಿ ಸರ್ಪಾರೂಢಳಾಗಿ ನೆಲೆಸಿರುವ ಆದಿಪರಾಶಕ್ತಿಯನ್ನು ಸಂಪ್ರೀತಗೊಳಿಸಲು ಲೋಕಕ್ಷೇಮವನ್ನು ಪ್ರಾರ್ಥಿಸಿ, ಈಗಾಗಲೇ ಹಲವಾರು ಶತಚಂಡಿಕಾ ಮಹಾಯಾಗಗಳನ್ನೂ ಹಾಗೂ ಒಂದು ಸಹಸ್ರ ಚಂಡಿಕಾ ಮಹಾಯಾಗವನ್ನೂ ಸುಸಂಪನ್ನಗೊಳಿಸಲಾಗಿದೆ ಅಮಿತ ತೇಜಸ್ಸಿನಿಂದ ಕ್ಷೇತ್ರದಲ್ಲಿ ಜಾಗೃತವಾಗಿರುವ ಜಗದೀಶ್ವರಿಯು ಶರಣು ಬಂದ ಅಸಂಖ್ಯಾತ ಭಕ್ತರಿಗೆ ಅಭಯವನ್ನು ಕರುಣಿಸಿ, ಸಕಲ ಸನ್ಮನೋಭೀಷ್ಟಗಳನ್ನು ಈಡೇರಿಸುತ್ತಾ, ಗ್ರಾಮದೇವತೆಯಾಗಿ, ಮಹಾರಾಜ್ಞಿಯಾಗಿ ಮೆರೆದಿದ್ದಾಳೆ. ಸನಾತನ ಧರ್ಮವು ನೆಲೆನಿಂತಿರುವ ಭಾರತ ದೇಶದ ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ಸಾಫಲ್ಯಹೊಂದಿರುವ, ದೇವಿಯ ಆರಾಧನೆಯಲ್ಲೇ ಅತ್ಯಂತ ಶ್ರೇಷ್ಠವಾದ, ಸ್ಮಾರ್ತ ಮಹಾಯಜ್ಞಗಳಲ್ಲೇ ಅಗ್ರಮಾನ್ಯವಾದ “ಅಯುತ ಚಂಡಿಕಾ ಮಹಾಯಾಗ” (ದಶಸಹಸ್ರ ಚಂಡಿಕಾ ಯಾಗ) ಈ ಪುಣ್ಯಕ್ಷೇತ್ರ ಭುಜಗಪುರದಲ್ಲಿ ಜಗನ್ಮಾತೆಯ ಈ ಪಾವನ ಪರಿಸರದಲ್ಲಿ ಸುಸಂಪನ್ನಗೊಳ್ಳಲಿದೆ. ಅನವರತ ಭಗವತಿಯ ಆರಾಧನೆಯಲ್ಲಿ ನಿರತರಾಗಿ ಶ್ರೀಕ್ಷೇತ್ರದ ಅಭಿವೃದ್ಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ವಿನಾಯಕ ಶ್ರೀಧರ ಹೆಗಡೆ ಹಾಗೂ ಶ್ರೀ ಗುರುಪ್ರಕಾಶ ಗಣೇಶ ಹೆಗಡೆ, ಈ ಈರ್ವರು ಸಹೋದರರು, ಜಗನ್ಮಾತೆಯ ಅನುಗ್ರಹವನ್ನು ಸಂಪ್ರಾರ್ಥಿಸುತ್ತಾ ಲೋಕಕಲ್ಯಾಣಾರ್ಥವಾಗಿ ಮಹಾನ್ ಋಷಿಮುನಿಗಳಿಂದ ಪ್ರಣೀತವಾದ ಅಯುತ ಚಂಡಿಕಾ ಮಹಾಯಾಗವನ್ನು ದೇವಿಯ ಪದಕಮಲಗಳಲ್ಲಿ ಸಮರ್ಪಿಸಲು ಸಂಕಲ್ಪಿಸಿದ್ದಾರೆ. ಎಲ್ಲಾ ಆಸ್ತಿಕ ಮಹಾಜನರು, ದೇವಿಯ ಉಪಾಸಕರು, ಸಕಲ ಸದ್ಭಕ್ತರು ಈ ಒಂದು ಪುಣ್ಯಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾಗಲೆಂದು ಈರ್ವರು ಸಹೋದರರ ಸದಾಶಯ.