ಗೋಕರ್ಣ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 4000 ಕಿಲೋಮೀಟರ್ ಯಾತ್ರೆಯನ್ನು ಪೂರೈಸಿ ಅಶೋಕೆಯ ಮೂಲಮಠ ಆವರಣ ಅಹಿಚ್ಛತ್ರಕ್ಕೆ ಗುರುವಾರ ಮುಂಜಾನೆ ಆಗಮಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರನ್ನು ಸಮಾಜದ ಸಾವಿರಾರು ಮಂದಿ ಶಿಷ್ಯಭಕ್ತರು ಭವ್ಯವಾಗಿ ಸ್ವಾಗತಿಸಿದರು.


ಸುಗ್ಗಿ ಕುಣಿತ, ಕೋಲಾಟ, ನೃತ್ಯ ಭಜನೆ, ರಾಮ ಸೇನೆಯ ವೇಷಭೂಷಣ, ಕೊಂಬು, ಕಹಳೆ, ದೀವಟಿಗೆಯಂಥ ವೈವಿಧ್ಯಮಯ ಜಾನಪದ ಕಲಾಪ್ರಕಾರಗಳ ಸಂಭ್ರಮದೊಂದಿಗೆ ರಾಮಮಂದಿರ ಮತ್ತು ಅಯೋಧ್ಯೆಯ ಬಾಲರಾಮನ ಪ್ರತಿಕೃತಿಯಿಂದ ಅಲಂಕೃತವಾಗಿದ್ದ ರಥದಲ್ಲಿ ಶ್ರೀಕರಾರ್ಚಿತ ರಾಮದೇವರ ಹಾಗೂ ಶ್ರೀಸಂಸ್ಥಾನದವರ ಭವ್ಯ ಮೆರವಣಿಗೆ ನಡೆಯಿತು.


ಅಶೋಕೆಯ ದೈವರಾತ್ರ ಧರಿತ್ರಿಯಿಂದ ಅಹಿಚ್ಛತ್ರವರೆಗೆ ಸುಮಾರು ಒಂದು ಗಂಟೆ ಕಾಲ ಸಾಗಿದ ಭವ್ಯ ಮೆರವಣಿಗೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಅಹಿಚ್ಛತ್ರಕ್ಕೆ ಆಗಮಿಸಿದ ಪರಮಪೂಜ್ಯರು ಮೂಲಮಠದ ಅಧಿಷ್ಠಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಶ್ರೀರಾಮ ನಿರ್ಯಾಣದ ಸರಯೂ ನದಿಯಿಂದ ತಂದ ಪವಿತ್ರ ಜಲ ಮತ್ತು ಪವಿತ್ರ ಮೃತ್ತಿಕೆಯನ್ನು ನಿಕ್ಷೇಪಿಸಿದರು.
ಅಯೋಧ್ಯೆ ರಾಮಮಂದಿರ ಪ್ರತಿಷ್ಠೆ ಸಂದರ್ಭದಲ್ಲಿ ದೇಗುಲಕ್ಕೆ ಎರಡು ಗರುಡ ಪ್ರದಕ್ಷಿಣೆ ಹಾಕಿದ್ದು, ದೇಶದ ಗಮನ ಸೆಳೆದಿತ್ತು. ಅಂತೆಯೇ ಶ್ರೀಗಳು ಅಹಿಚ್ಛತ್ರ ಆವರಣಕ್ಕೆ ಆಗಮಿಸಿದಾಗ ಗರುಡ ಪಕ್ಷಿ ಮೇಲೆ ಪ್ರದಕ್ಷಿಣೆ ಹಾಕಿ ಮಾಯವಾದದ್ದು ವಿಶೇಷವಾಗಿತ್ತು.


ಶಿಷ್ಯಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, “ಪ್ರವಾಸ ನಾವು ನಿರ್ಣಯಿಸಿದ್ದಾದರೆ ಪ್ರಯಾಸವಾಗುತ್ತದೆ. ಆದರೆ ದೇವರೇ ಕರೆಸಿಕೊಂಡರೆ ಅದು ಸುಲಭ, ಸುಖಕರ ಮತ್ತು ಶುಭಕರ; ತಾಯಿ ತನ್ನ ಶಿಶುವನ್ನು ಎತ್ತಿಕೊಂಡು ಹೋದಂತೆ ಸೀತಾಮಾತೆಯ ಕಾರುಣ್ಯದಿಂದ ಸೀತಾಮಡಿಯಿಂದ ಆಗಮಿಸಿದ ಮಹನೀಯರ ಜತೆ ಪ್ರವಾಸ ಅತ್ಯಂತ ಸುಖಕರವಾಗಿತ್ತು” ಎಂದು ಬಣ್ಣಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಕೂಡಾ ಅತ್ಯಂತ ಒತ್ತಡದ ನಡುವೆಯೂ ಮೂರು ಬಾರಿ ಆಯಿತು., ಆರೂಢ ಭಾರತೀ ಸ್ವಾಮೀಜಿ, ಯಾದಗಿರಿಯ ರಾಜಗುರು ಸ್ವಾಮೀಜಿ, ನರಸಲಗಿಯ ಶ್ರೀಕಾಂತ ಸ್ವಾಮೀಜಿಯವರು
ದರ್ಶನದ ವೇಳೆ ಜತೆಗಿದ್ದು ರಾಮರಕ್ಷೆಯಂತಿದ್ದರು. ಇದು ಕಲ್ಪನೆಗೂ ಮೀರಿದ್ದು ಎಂದು ವಿವರಿಸಿದರು.
ಶ್ರೀರಾಮ ನಿರ್ಯಾಣ ಹೊಂದಿದ ಪವಿತ್ರ ಸರಯೂ ನದಿಗೆ ಇಳಿದು, ರಾಮಾಯಣದ ವರ್ಣನೆಯಲ್ಲಿ ಬರುವಂಥ ಕಬ್ಬಿನ ಹಾಲಿನಷ್ಟು ಮಧುರವಾದ ತೀರ್ಥವನ್ನು ಸೇವಿಸಿ, ಪವಿತ್ರ ಪಾಂಡುಮೃತ್ತಿಕೆಯನ್ನು ಮೂಲಮಠದ ಅಧಿಷ್ಠಾನಕ್ಕೆ ತಂದಿದ್ದೇವೆ. ರಾಮಜನ್ಮಭೂಮಿ ಎಷ್ಟು ಪವಿತ್ರವೋ, ಇಡೀ ಅಯೋಧ್ಯೆಯ ಜನತೆಗೆ ಮುಕ್ತಿ ಒದಗಿಸಿದ ಸರಯೂ ಕೂಡಾ ಪರಮ ಪವಿತ್ರ ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾಕ್ಕೆ ಬಂದ ರಾಕಿಂಗ್ ಸ್ಟಾರ್ ಯಶ್.


ಗಂಗೆಯಲ್ಲಿ ಅರುವತ್ತು ವರ್ಷ ಮುಳುಗಿದ್ದಷ್ಟು ಫಲ ಸರಯೂ ನದಿಯಲ್ಲಿ ಒಮ್ಮೆ ಸ್ನಾನ ಮಾಡಿದರೆ ಬರುತ್ತದೆ ಎಂಬ ಉಲ್ಲೇಖ ಸ್ಕಂದ ಪುರಾಣದಲ್ಲಿದೆ. ಇದರ ಕಲ್ಪನೆ ಬಹುತೇಕರಿಗೆ ಇಲ್ಲ ಎಂದು ವಿಶ್ಲೇಷಿಸಿದರು. ಮತ್ತೊಮ್ಮೆ ಶ್ರೀಮಠದ ದೊಡ್ಡ ಸಂಖ್ಯೆಯ ಶಿಷ್ಯಭಕ್ತರ ಜತೆಗೂಡಿ ಅಯೋಧ್ಯೆ ಪ್ರವಾಸ ಕೈಗೊಳ್ಳುವ ಇಚ್ಛೆ ತಮಗಿದೆ ಎಂದು ಪ್ರಕಟಿಸಿದರು.
ರಾಮಮಂದಿರ ಪ್ರತಿಷ್ಠೆಯ ಬಳಿಕ ಪುಷ್ಯ ಹುಣ್ಣಿಮೆಯ ಪವಿತ್ರ ದಿನದಂದು ಅಯೋಧ್ಯೆಯ ಮೃತ್ತಿಕೆ ಮತ್ತು ಸರಯೂ ತೀರ್ಥ ನಿಕ್ಷೇಪಿಸುವ ಮೂಲಕ ರಾಮ ಇಲ್ಲೂ ಪ್ರತಿಷ್ಠೆಗೊಂಡಂತಾಗಿದೆ. ಮುಂದಿನ ಎಲ್ಲವೂ ಔಪಚಾರಿಕವಷ್ಟೇ. ಈ ಅಯೋಧ್ಯೆ ಯಾತ್ರೆ ಶ್ರೀಶಂಕರರು ಸ್ಥಾಪಿಸಿದ ಮೂಲಮಠದ ಪುನರುತ್ಥಾನದ ಶಕೆಯ ಆರಂಭ ಎಂದು ಬಣ್ಣಿಸಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ವ್ಯವಸ್ಥಾ ಪರಿಷತ್ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಮಹಾಮಂಡಲ ಪದಾಧಿಕಾರಿಗಳಾದ ಜಿ.ಎಸ್.ಹೆಗಡೆ, ರುಕ್ಮಾವತಿ ಸಾಗರ, ಹೇರಂಬ ಶಾಸ್ತ್ರಿ, ಈಶ್ವರ ಪ್ರಸಾದ್ ಕನ್ಯಾನ, ಗಣೇಶ್ ಜೋಶಿ, ಪ್ರಸನ್ನ ಉಡುಚೆ, ಕೇಶವ ಪ್ರಕಾಶ್ ಮುಣ್ಚಿಕಾನ, ಮಾಜಿ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ವಿವಿವಿ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಜಿ.ವಿ.ಹೆಗಡೆ, ಅರವಿಂದ ಧರ್ಬೆ, ವಿವಿಧ ಮಂಡಲಗಳ ಅಧ್ಯಕ್ಷರಾದ ಆರ್.ಜಿ.ಹೆಗಡೆ ಹೊಸಾಕುಳಿ, ಸುಬ್ರಾಯ ಭಟ್ ಮುರೂರು, ವೈ.ಎಸ್.ಮುರಳಿ, ಮಹೇಶ್ ಚಟ್ನಳ್ಳಿ, ಉತ್ಸವ ಖಂಡದ ರಾಘವೇಂದ್ರ ಮಧ್ಯಸ್ಥ, ಗಣ್ಯರಾದ ಆ.ಪು.ನಾರಣಪ್ಪ, ಮಹೇಶ್ ಶೆಟ್ಟಿ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಕಾರ್ಯದರ್ಶಿ ಮಧು ಜಿ.ಕೆ. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES  7 ರ‍್ಯಾಂಕುಗಳನ್ನು ಪಡೆದಿದ್ದ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ, ಮರುಮೌಲ್ಯಮಾಪನದಿಂದಾಗಿ ಇನ್ನೂ 5 ರ‍್ಯಾಂಕುಗಳ ಸೇರ್ಪಡೆ.
IMG 20240120 WA0004