ಕುಮಟಾ : ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಒತಾಯಿಸಿ ಫೆ. ೫ ರಂದು ಕುಮಟಾದಲ್ಲಿ ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ, ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು. ಅವರು ಕುಮಟಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದಲ್ಲಿ ಗುರುತಿಸಲಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕುಮಟಾದಿಂದ ಭಟ್ಕಳದ ವರೆಗೆ ಪಾದಯಾತ್ರೆ ನಡೆಸಿ, ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರಿಗೆ ಮನವಿ ನೀಡಲಾಗುವುದು. ಆಸ್ಪತ್ರೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ ಅವರು, ಕುಮಟಾದಲ್ಲಿ ಈ ಹಿಂದೆಯೇ ಆಸ್ಪತ್ರೆಗೆ ಸ್ಥಳ ನಿಗದಿಯಾಗಿತ್ತು, ಆದರೆ ಯಾಕಿನ್ನೂ ಆಸ್ಪತ್ರೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು. ಜನರು ನಿಮಗೇನು ತೊಂದರೆ ಮಾಡಿದ್ದಾರೆ? ನಾವು ಏನು ಶಾಪವನ್ನು ಹೊಂದಿದ್ದೇವೆ? ಯಾಕೆ ಅಸಡ್ಡೆ ಮಾಡುತ್ತಿದ್ದೀರಿ? ಎಂದು ಸರಕಾರವನ್ನು ಕುಟುಕಿದರು.

RELATED ARTICLES  ಸೂರಜ್ ನಾಯ್ಕ ಸೋನಿ ಮನೆಗೆ ಕಾಗೇರಿ ಭೇಟಿ.

ಬೇಡದ ಯೋಜನೆಗಳಿಗೆ 100 ಕೋಟಿ 200 ಕೋಟಿಯನ್ನು ಕೊಡುತ್ತಿದ್ದೀರಿ. ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲವೇ? ಎಂದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಎಲ್ಲಡಿಯಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಸರಕಾರವೇ 15 ರಿಂದ 20 ಎಕರೆಯನ್ನು ಗುರುತಿಸಿ. ಉದ್ದಿಮೆದಾರರಿಗೆ ಅವುಗಳನ್ನು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಿರೇಗುತ್ತಿಯಲ್ಲಿ 1800 ಎಕರೆ ಸರಕಾರದ ವಶದಲ್ಲಿರುವ ಜಾಗ ಇದೆ. ಅದನ್ನು ಏನೂ ಬಳಕೆ ಮಾಡಿಲ್ಲ. ಇಲ್ಲಿಯ ಯುವಕರು ಬೆಂಗಳೂರು ಪುಣೆ ಮುಂಬೈ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಉದ್ಯೋಗವನ್ನು ಆರಿಸಿ ಹೋಗುತ್ತಿದ್ದಾರೆ. ಅದರ ಬದಲು ಹಿರೇಗುತ್ತಿಯ ಈ ಜಾಗದಲ್ಲಿಯೇ 500 ಎಕರೆಯನ್ನು ಸಾಫ್ಟ್ವೇರ್ ಪಾರ್ಕ್ ಎಂದು ಘೋಷಣೆ ಮಾಡಿ, 300 ಎಕರೆಯನ್ನು ಗಾರ್ಮೆಂಟ್ಸ್ ಹಬ್ಬ್ ಮಾಡಬೇಕು ಎಂದರು.

RELATED ARTICLES  ಬಿಜೆಪಿ ಸಮಾವೇಶ : ಮೋದಿಗಾಗಿ ಒಗ್ಗಟ್ಟಿನಿಂದ ಕಾರ್ಯಮಾಡೋಣವೆಂದ ಗಣ್ಯರು.

ಈ ಪಾದಯಾತ್ರೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪಕ್ಷಾತೀತವಾಗಿ ನಡೆಯುವ ಪಾದಯಾತ್ರೆ ಇದು. ಇದಕ್ಕೆ ಶಿವಾನಂದ ಹೆಗಡೆ ಕಡತೋಕಾ, ಗಜಾನನ ಪೈ, ಸೂರಜ್ ನಾಯ್ಕ ಸೋನಿ, ಆರ್.ಜಿ ನಾಯ್ಕ ಹಾಗೂ ಹಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ. ಅವರೆಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ. ಯಾರೂ ಇರದಿದ್ದರೂ ನಾನು ಇರುತ್ತೇನೆ ಎಂದರು.

ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕಾ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಸ್ಥಾಪಕ ಉಮೇಶ ಹರಿಕಾಂತ, ಟ್ರಸ್ಟಿ ಸಂತೋಷ ನಾಯ್ಕ, ಸಾಮಾಜಿಕ ಹೋರಾಟಗಾರ ಮಂಜುನಾಥ ಗುನಗಾ ಇದ್ದರು.