ಕುಮಟಾ : ಲೋಕಕಲ್ಯಾಣಕ್ಕಾಗಿ ಎಲ್ಲರೂ ಸೇರಿ ಯಾಗವನ್ನೋ, ಯಜ್ಞವನ್ನೋ ಮಾಡುವುದುಂಟು, ಅದಲ್ಲದೆ ಅವರವರ ಕುಟುಂಬಕ್ಕಾಗಿ ಕುಟುಂಬದವರು ಸೇರಿ ಹೋಮ ಮಾಡಿಸುವುದೂ ಉಂಟು. ಆದರೆ ಒಂದು ಕುಟುಂಬ ಇಡೀ ಲೋಕಕಲ್ಯಾಣಕ್ಕಾಗಿ  ಅಯುತ ಚಂಡಿಕಾ ಯಾಗದಂತಹ ಮಹೋನ್ನತ ಹಾಗೂ ಆ ಕಾಲದ ಅಶ್ವಮೇಧಯಾಗಕ್ಕೆ ಸರಿಸಮನಾಗಬಲ್ಲ ಯಾಗವನ್ನು ಮಾಡಿರುವುದು ಬಹು ವಿಶೇಷ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಲೋಕಕಲ್ಯಾಣಾರ್ಥವಾಗಿ ತಾಲೂಕಿನ ಹೆಗಲೆಯ ಶ್ರೀಕ್ಷೇತ್ರ ಭುಜಗಪುರದ ಮಹಾರಾಜ್ಞೀ ಶ್ರೀದುರ್ಗಾಪರಮೇಶ್ವರೀ ದೇವಾಲಯದಲ್ಲಿ ನಡೆದ ಅಯುತ ಚಂಡಿಕಾ ಮಾಹಾಯಾಗದ ಪೂರ್ಣಾಹುತಿಯ ಸಂದರ್ಭದಲ್ಲಿ ಸಾನಿಧ್ಯವಹಿಸಿ, ನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಲೋಕಕಲ್ಯಾಣಕ್ಕಾಗಿ ಒಂದು ಕುಟುಂಬ, ಅದರಲ್ಲಿಯೂ ಇಬ್ಬರು ಯುವ ಸಹೋದರರಾದ ವಿನಾಯಕ ಹೆಗಡೆ ಹಾಗೂ ಗುರುಪ್ರಕಾಶ ಹೆಗಡೆ ಮಾಡಿದ ಕಾರ್ಯ ಎಷ್ಟು ಮುಂದಿನ ಸಮಾಜಕ್ಕೂ ಮಾದರಿಯಾಗಿದೆ ಎಂದು ಬಣ್ಣಿಸಿದರು. ಈ ಕಾರ್ಯಕ್ಕೆ ಹೆಗಲು ಕೊಟ್ಟವರು ಯುವಕರು, ಹೆಗಲು ಕೊಡುವವರು ಇದ್ದದ್ದರಿಂದಲೇ ಇದನ್ನು ‘ಹೆಗಲೆ’ ಎನ್ನಲಾಗುತ್ತದೆ ಎಂದ ಶ್ರೀಗಳು, ಋತ್ವಿಜರು ಹತ್ತುಸಾವಿರ ಪಾರಾಯಣ ಮಾಡಿದ್ದು, ಹಾಲಕ್ಕಿಗಳು ಯಾಗ ಮಂಟಪವನ್ನು ನಿರ್ಮಾಣ ಮಾಡಿರುವುದೂ ನಿಜವಾಗಿಯೂ ತಪಸ್ಸು ಎಂದರು.

RELATED ARTICLES  ರೋಟರಿ ಪರಿವಾರದ ಡಾಕ್ಟರ್ ಹಾಗೂ ಸಿ.ಎ ಗಳಿಗೆ ವಿಧಾತ್ರಿ ಅಕಾಡೆಮಿಯಿಂದ ಸನ್ಮಾನ.

ಇದನ್ನು ಮಠದ ರಾಘವೆಂದು ಭಾವಿಸಿ ಎಂದು ಶ್ರೀ ಮಠವು ಕರೆ ಕೊಟ್ಟಿದ್ದನ್ನು ಸ್ಮರಿಸಿಕೊಂಡ ಶ್ರೀಗಳು, ಇದು ಕೇವಲ ದೇವಸ್ಥಾನವಲ್ಲ. ಇದೊಂದು ಆಸ್ಥಾನವೂ ಹೌದು. ಇಲ್ಲಿರುವುದು ಬರಿಯ ದೇವರಲ್ಲ, ಶ್ರೀ ಮಹಾರಾಜ್ಞೀ, ಶ್ರೀಮನ್ ನಗರನಾಯಕಿಯೇ ಇಲ್ಲಿ  ನೆಲೆಸಿರುವಂತಹುದು. ತ್ರಿಪುರಸುಂದರಿ ಸಾನಿಧ್ಯ ಇಲ್ಲಿದೆ. ಶಿವ ಕಾಮೇಶ್ವರನಾಗಿ, ಪಾರ್ವತಿ ಕಾಮೇಶ್ವರಿಯಾಗಿ ಕಂಗೊಳಿಸಿದ ದಿವ್ಯ ಕ್ಷೇತ್ರವನ್ನು ಸ್ಮರಿಸಿದ ಶ್ರೀಗಳು, ಹೆಗಲೆಯ ಈ ದೇವಾಲಯ ದಿವ್ಯವಾಗಿದ್ದು ಇಲ್ಲಿ ರುದ್ರನೂ, ಗಣಪತಿಯೂ, ಗಾಯತ್ರಿಯೂ, ನಾಗದೇವತೆಯೋ ತಮ್ಮ ಹವಿರ್ಭಾಗ ಸ್ವೀಕಾರಕ್ಕೆ ಈ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಶ್ರೀಗಳು ಹೇಳಿದರು. ಒಳ್ಳೆಯ ಕಾರ್ಯಗಳಿಗೆ ಹೊರಟಾಗ ದೇವರೇ ಪ್ರೇರಣೆಯನ್ನು ನೀಡುತ್ತಾನೆ, ದೇವರೇ ಕಾರ್ಯವನ್ನು ಮಾಡಿಸಿಕೊಳ್ಳುತ್ತಾನೆ, ಇದಕ್ಕೆ ಸಹಸ್ರಾರು ಜನರು ಸಾಕ್ಷಿಯಾಗಿದ್ದೀರಿ ಎಂದರು. 

RELATED ARTICLES  ಯಕ್ಷೋತ್ಸವ ೨೦೨೩ ಸಂಪನ್ನ - ಅಭಿನೇತ್ರಿ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚುಗೆ.

ಶ್ರೀ ಗುರುಗಳು ಯಾಗಕ್ಕೆ ಬರಲೇಬೇಕು ಎಂಬುದು ಈ ಕುಟುಂಬದ ಹಲವು ದಿನದ ಒತ್ತಾಸೆಯಾಗಿತ್ತು, ಅದು ಇಂದು ಪೂರೈಸಿದೆ. 

ದೇವಿಯ ವಿವಿಧ ಪ್ರಕಾರಗಳನ್ನು ಉಲ್ಲೇಖಿಸಿದ ಶ್ರೀಗಳು, ರಾಮಾಯಣ ಮಹಾಭಾರತದ ಉದಾಹರಣೆಯನ್ನು ನೀಡಿದರು. ಇನ್ನೂ ಅನೇಕಾನೇಕ ಮಹತ್ ಕಾರ್ಯಗಳು ಈ ಸಹೋದರರಿಂದ ನಡೆಯುವಂತಾಗಲಿ ಎಂದು ಶ್ರೀಗಳು ಆಶಿಸಿದರು. ಎಲ್ಲವೂ ತಾಯಿಯಿಂದಲೇ ನಡೆಯುವುದು ಹೀಗಾಗಿ ಉಂಡಿದ್ದು, ಹುಟ್ಟಿದ್ದು, ಉಳಿಯುವುದಿಲ್ಲ ನಂತರ ಉಳಿಯುವುದು ಇಂತಹ ಧಾರ್ಮಿಕ ಕಾರ್ಯಗಳೇ ಹಾಗಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ಎಂದು ಕರೆನೀಡಿದರು.

ಗುರುಪ್ರಕಾಶ ಹೆಗಡೆ ದೇವಾಲಯದ ಇತಿಹಾಸ ಹಾಗೂ ಈ ಹಿಂದೆ ನಡೆದ ಕಾರ್ಯಗಳ ಬಗ್ಗೆ ವಿವರಿಸುತ್ತಾ, ಕ್ಷೇತ್ರದ ಮಹಿಮೆಯ ಕುರಿತಾಗಿ ಪ್ರಸ್ತಾವನೆ ಮಾಡಿದರು. ವಿನಾಯಕ ಹೆಗಡೆ ಈ ಕಾರ್ಯದಲ್ಲಿ ಸಹಕರಿಸಿದ ಸರ್ವರನ್ನೂ ವಂದಿಸಿದರು.