ಕುಮಟಾ : ಮೂರು ಧರ್ಮದ 42 ಜನಾಂಗದವರು ಮಾತಾಡುವ ವಿಶ್ವದ ಏಕೈಕ ಭಾಷೆ ಕೊಂಕಣಿ. ಇಷ್ಟು ವ್ಯಾಪ್ತಿ ಹೊಂದಿರುವ ಸುಂದರ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಖ್ಯಾತ ಚಲನಚಿತ್ರ ನಟ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು. ಅವರು ರವಿವಾರ ಕುಮಟಾದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರ ಬಗ್ಗೋಣದ ನಿವಾಸದಲ್ಲಿ ಹಮ್ಮಿಕೊಂಡಿದ್ದ ಘರ್ ಘರ್ ಕೊಂಕಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಂಕಣಿ ಮಾತನಾಡುವ ಒಟ್ಟೂ 42 ಪಂಗಡಗಳಿದೆ. ಪ್ರತಿಯೊಂದೂ ಸಮಾಜವನ್ನೂ ಗುರುತಿಸುವ ಅಗತ್ಯವಿದೆ. ಕೊಂಕಣಿ ಅಕಾಡೆಮಿಗೆ ಬಂದಿರುವ ಹಣವನ್ನು ಬಳಸಿ ಪ್ರತಿಯೊಂದೂ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡಿದ್ದೇನೆ. ನನಗೆ ಹಿಂದೆ ಸಿಕ್ಕಿದ್ದ ಅವಕಾಶದಲ್ಲಿ ಕೊಂಕಣಿಗರೆಲ್ಲರನ್ನೂ ಒಂದೆಡೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ವಿವರಿಸಿದರು.
ಉಡಾಳ ದೇಶದ ಆದ್ಯ ಬ್ರಾಹ್ಮಣ ಸಮಾಜ, ಗೌಡ ಸಾರಸ್ವತ ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ, ವೈಶ್ಯ ವಾಣಿ, ದೇಶಭಂಡಾರಿ ಇನ್ನಿತರ ಸಮಾಜದ ವೈಶಿಷ್ಟ್ಯ ವಿವರಿಸಿದ ಅವರು ಕೊಂಕಣಿ ಭಾಷೆಯ ಬೆಳವಣಿಗೆಗೆ ಕೊಂಕಣಿಗರೇ ಪ್ರಯತ್ನಿಸಬೇಕು. ಕೊಂಕಣಿ ನಾಟಕಗಳನ್ನು ಮಾಡಿದರೆ ಬರುವವರು ಕಡಿಮೆ, ಕೊಂಕಣಿ ಸಿನೆಮಾ ನೋಡುವವರು ಕಡಿಮೆ. ಕೊಂಕಣಿಗರು ಭಾಷೆಯ ಬಗ್ಗೆ ಅಭಿಮಾನ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ಕೊಂಕಣಿ ಭಾಷಿಕರನ್ನು ಸೇರಿಸಿ ಒಂದು ಕಾರ್ಯ ಮಾಡಲು ವಾಳ್ಕೆ ಕುಟುಂಬ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಆದರ ತೋರಿದ್ದಾರೆ. ಸದಾ ಸಮಾಜ ಸೇವೆ ಮಾಡುವ ಹಾಗೂ ಎಲ್ಲರನ್ನೂ ಪ್ರೀತಿಸುವ ಸುಬ್ರಾಯ ವಾಳ್ಕೆಯಂತವರು ಜನನಾಯಕರಾಗಬೇಕು. ಒಂದಲ್ಲ ಒಂದು ದಿನ ಇದು ಸಾಧ್ಯವಾಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸುಬ್ರಾಯ ವಾಳ್ಕೆ ಮಾತನಾಡಿ ನನ್ನ ಕುಟುಂಬವೇ ನನಗೆ ಪ್ರೇರಣೆ, ನಾನು ಹೇಳಿದ ಮಾತನ್ನು ಚಾಚೂ ತಪ್ಪದೇ ಮಾಡುವ ನನ್ನ ಕುಟುಂಬವೇ ನನ್ನ ಶಕ್ತಿ ಎನ್ನುತ್ತಾ, ಕೊಂಕಣಿ ಭಾಷೆಯ ಉಳಿವಿಗೆ ನಮ್ಮ ಕೊಡುಗೆಗಳೂ ಸಲ್ಲಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಪ್ರೀತಿಯ ವಂದನೆಗಳು ಎಂದರು.
ಈ ಸಂದರ್ಭದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೀತಿ ಭಂಡಾರ್ಕರ್ ಮಾತನಾಡಿ ಕಾಸರಗೋಡು ಚಿನ್ನಾ ಕೊಂಕಣಿ ಭಾಷೆಗಾಗಿ ತಮ್ಮ ಆತ್ಮ ಸಮರ್ಪಣೆ ಮಾಡಿಕೊಂಡಿದ್ದಾರೆ ಎಂದರು.
ಶಿಕ್ಷಕಿ ಜಯಾ ಶಾನಭಾಗ ಶಿಶುಗೀತೆ ಹಾಡಿ, ಸುಧಾ ಗೌಡ ಹಾಸ್ಯ ಗೀತೆ ಹಾಡಿ ರಂಜಿಸಿದರು, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ನಿವೃತ್ತ ಪ್ರಾಧ್ಯಾಪಕಿ ಬೇಬಿ ಪಡಿಯಾರ, ಶಕುಂತಲಾ ಕಿಣಿ, ಸಾಮಾಜಿಕ ಕಾರ್ಯಕರ್ತ ವಿನೋದ ಪ್ರಭು, ರಮೇಶ ಪ್ರಭು, ಜೈವಿಠಲ್ ಕುಬಾಲ್, ಸೋನಾ ಗಣೇಶ ನಾಯಕ ಇತರರು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದ ಸಂಯೋಜಕ ಚಿದಾನಂದ ಭಂಡಾರಿ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಗೌರೀಶ ಭಂಡಾರಿ ನಿರೂಪಿಸಿದರು. ಶೈಲಾ ಗುನಗಿ ವಂದಿಸಿದರು.