ಕುಮಟಾ : ಕುಮಟಾದಲ್ಲಿ ಕೊಂಕಣಿ ಸಂಘಟನೆ ಸೂಕ್ತ ನೇತ್ರತ್ವದ ಹುಡುಕಾಟದಲ್ಲಿ ಇರುವ ತಮಗೆ ಸುಬ್ರಾಯ ವಾಳ್ಕೆಯವರು ಭರವಸೆಯಾಗಿ ಕಾಣುತ್ತಿದ್ದಾರೆ. ಬರುವ ದಿನಗಳಲ್ಲಿ ಈ ಗುರುತರ ಜವಾಬ್ದಾರಿಯನ್ನು ಅವರು ಹೊರಬೇಕು ತಾವೆಲ್ಲ ಬೆಂಬಲಕ್ಕೆ ಇರುವುದಾಗಿ ಉದ್ಯಮಿ ಮುರಳೀಧರ ಪ್ರಭು ಹೇಳಿದರು. ಕುಮಟಾದ ಕೊಂಕಣ ಎಜ್ಯುಕೇಶನ್ ಸಭಾಭವನದಲ್ಲಿ ನಡೆದ ಘರ್ ಘರ್ ಕೊಂಕಣಿ ೧೫೦ ರ ಸಾಧಕ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಕೊಂಕಣಿ ಭಾಷಿಕರ ಸಂಘಟನೆ, ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಇನ್ನಿತರ ವಿಚಾರದಲ್ಲಿ ಸಾರಥ್ಯ ವಹಿಸಿಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆ ಇದ್ದು, ಸುಬ್ರಾಯ ವಾಳ್ಕೆ ಭಾಷೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಕಾರ್ಯಯೋಜನೆ ಸಿದ್ಧಪಡಿಸಿ, ತಾವೂ ತೊಡಗಿಕೊಂಡು ಕೊಂಕಣಿ ಭಾಷಿಗರನ್ನು ಮುನ್ನಡೆಸುವ ಕೆಲಸ‌ ಮಾಡಲು ಸಮರ್ಥರು ಎಂದರು. ಕಾರ್ಯಕ್ರಮವು ಯಥಾ ಶೀಘ್ರ 501 ಆಗಬೇಕು. ಉತ್ತರ ಕನ್ನಡ ಜಿಲ್ಲೆಯ ಅತೀ‌ ಹೆಚ್ಚು ಮನೆಗಳಲ್ಲಿ ಘರ್ ಘರ್ ಕೊಂಕಣಿ ಆಯೋಜನೆ ಆಗಲಿ. ಇಂದಿಗೆ 500 ವರುಷಗಳ ಹಿಂದೆ ಕೊಂಕಣಿಗರ ಮೇಲೇ ಘೋರ ದೌರ್ಜನ್ಯ ನಡೆಯಿತು. ಇದನ್ನು ಸಹಿಸಿ‌ ಮತ್ತೆ ನೆಲೆಕಂಡುಕೊಂಡ ನಾವು ಭಾಷಾ ಅಸ್ಮಿತೆಯನ್ನು ಮೆರೆಯಬೇಕು ಎಂದರು.

RELATED ARTICLES  ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಕೊಂಕಣಿಗರು ಸದಾ ನನ್ನ ಜೊತೆಗೆ ಇದ್ದವರು. ಭಾಷೆ ಬೇರೆಯಾದರೂ ಅವರ ಭಾವವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಈ ಭಾಗದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಭಾಷೆ ಕೊಂಕಣಿ ಭಾಷೆಯಾಗಿದ್ದು, ಕೊಂಕಣಿ ಭಾಷಿಕರ ಭಾಷೆ ಸಂಸ್ಕೃತಿಗೆ ಈ ಹಿಂದಿನಿಂದಲೂ ನಾವು ಗೌರವ ನೀಡುತ್ತಾ ಬಂದಿದ್ದೇವೆ ಎಂದರು.

ಚಲನಚಿತ್ರ ನಿರ್ದೇಶಕ ಹಾಗೂ ಕಾರ್ಯಕ್ರಮದ ರೂವಾರಿ ಕಾಸರಗೋಡು ಚಿನ್ನಾ ಮಾತನಾಡಿ, ಕುಮಟಾದಲ್ಲಿ ಘರ್ ಘರ್ ಕೊಂಕಣಿ 150 ಕಾರ್ಯಕ್ರಮ ನಡೆಯುತ್ತಿರುವುದು ವೈಕ್ತಿವಾಗಿ ನನಗೆ ಸಂತೋಷ ತಂದಿದೆ. ‌ನಾನು ಕುಮಟಾವನ್ನು ಅತೀವವಾಗಿ ಪ್ರೀತಿಸುತ್ತೇನೆ‌. ಕುಮಟಾವನ್ನು ಕೊಂಕಣಿಯ ಸಾಂಸ್ಕೃತಿಕ ಭೂಮಿಯಾಗಿ ಗಟ್ಟಿಗೊಳಿಸುವುದು ನನ್ನ ಗುರಿಯಾಗಿದೆ. ಭಾಷೆಯ ಆಧಾರದ ಮೇಲೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಿಕ ವಿವಿಧ ಸಮುದಾಯದ ಸಾಧಕರುಗಳಾದ ರೂಪಾಲಿ ನಾಯಕ ಕಾರವಾರ (ಸಮಾಜಸೇವೆ), ಗಾಯತ್ರಿ ಗಾವಡೆ (ದಿವ್ಯಾಂಗ ಶಿಕ್ಷಣ), ಶಕುಂತಲಾ ಆರ್. ಕಿಣಿ (ಸಾಂಸ್ಕೃತಿಕ ಕ್ಷೇತ್ರ) ಅರುಣ ಉಭಯಕರ್ (ಕೊಂಕಣಿ ಸಾಹಿತ್ಯ), ಗೋಕುಲದಾಸ್ ನಾಯಕ (ಕೊಂಕಣಿ ಸಂಘಟನೆ), ವೆಂಕಟೇಶ ನಾಯಕ (ಸಮಾಜ ಸೇವೆ), ದೀಪಕ ಶೆಣೈ (ಪತ್ರಿಕಾರಂಗ) ದೇವರಾಯ ಗಣೇಶ ಮರಾಠ (ಸಾಂಪ್ರದಾಯಿಕ ವೈದ್ಯ), (ಶಶಿಭೂಷಣ ಕಿಣಿ (ರಂಗಕರ್ಮಿ), ಜೇಕಬ್ ಫರ್ನಾಂಡೀಸ್ (ಕೊಂಕಣಿ ನಾಟಕ), ಆರ್. ಎಸ್. ರಾಯ್ಕರ್ ಉಪ್ಪೋಣಿ (ಸಮಾಜ ಸೇವೆ) ಶ್ರೀಧರ ಕುಮಟಾಕರ್ (ಸಮಾಜಸೇವೆ), ಬಾಲಚಂದ್ರ ಗಾಮಸ್ಕರ್ ಉಡುಪಿ (ಮೂರ್ತಿಕಲಾಕಾರ), ಸ್ಟಿಫನ್ ಅಡಾ ಕುಮಟಾ (ಸಮಾಜ ಸೇವೆ) ಇವರನ್ನು ಪುರಸ್ಕರಿಸಲಾಯಿತು.

RELATED ARTICLES  ಚೀನಾ ಬೋಟ್ ಪತ್ತೆ ವಿಚಾರವಾಗಿ ಹರಿದಾಡಿದ ಮಾಹಿತಿ ಸುಳ್ಳು : ರಕ್ಷಣಾ ವ್ಯವಸ್ಥೆಗೂ ಯಾವುದೇ ಸಮಸ್ಯೆ ಇಲ್ಲ.

ಇದೇ ಸಂದರ್ಭದಲ್ಲಿ ಯುವ ಪುರಸ್ಕಾರಕ್ಕೆ ಚಂದನ್ ದೈವಜ್ಞ (ದಿವ್ಯಾಂಗ ಕ್ರೀಡಾಪಟು), ವಿಲಾಸ್ ರತ್ನಾಕರ ಕ್ಷತೀಯ (ಚಲನಚಿತ್ರ ನಿರ್ದೇಶಕ), ಗೌರೀಶ ಭಂಡಾರಿ (ಕೊಂಕಣಿ ಭಾಷಾ ಶಿಕ್ಷಕ) ಭಾಜನರಾದರು. ಸಂಯೋಜಕ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಾಂಡುರಂಗ ವಾಗ್ರೇಕರ್ ವಂದಿಸಿದರು.