ಕುಮಟಾ : ಪ್ರತಿ ಊರು ಮತ್ತು ವಿದ್ಯಾ ಸಂಸ್ಥೆಗಳು ಧಾರ್ಮಿಕತೆಯನ್ನು ಮಕ್ಕಳಲ್ಲಿ ಬೆಳೆಸಲು ಉಪಯುಕ್ತವಾದ ನಕ್ಷತ್ರ ವನ ನಿರ್ಮಿಸಬೇಕು. ತನ್ಮೂಲಕ ಆರೋಗ್ಯ ಹಾಗೂ ಮೇಧಾ ಶಕ್ತಿಯನ್ನುಗಳಿಸಬಹುದು‌ ಎಂದು ದೆಹಲಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ  ಡಾ. ವಿಷ್ಣು ಸುಬ್ರಾಯ ಭಟ್ಟ ಹೇಳಿದರು. ಅವರು  ಹವ್ಯಕ ಸಭಾಭವನದಲ್ಲಿ ನಡೆದ ಹವ್ಯಕ ವಿದ್ಯಾ ವರ್ಧಕ ಸಂಘದ ೨೯ನೇ ವಾರ್ಷಿಕ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿ ದೇವಾಲಯದಲ್ಲಿ ವಾರಕ್ಕೊಮ್ಮೆ ವೇದ ಮಂತ್ರ ಕಲಿಸಿದರೆ ಮುಂದಿನ ಜನಾಂಗಕ್ಕೆ ಭಾರತೀಯ ಸಂಸ್ಕೃತಿಯ ಪರಿಚಯಿಸಬುದಾಗಿದೆ. ಸಂಸ್ಕೃತಿಯ ಉಳಿವು ನಮ್ಮೆಲ್ಲರ ಉಳಿವು ಹೀಗಾಗಿ ಈ ಬಗ್ಗೆ ಪ್ರತಿ ಮನೆಯ ಹಿರಿಯರು ಹಾಗೂ ಶಿಕ್ಷಣ ಸಂಸ್ಥೆಗಳು ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ  ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ನಿವೃತ್ತ ಡೀನ್  ಡಾ. ಎಂ. ಎಸ್ ಹೆಗಡೆಯವರು ಹವ್ಯಕ ಮತ್ತು ವೇದಗಳ ಸಂಬಂಧವನ್ನ ವಿವರಿಸುತ್ತಾ ಪ್ರಾಣಾಯಾಮದ ಮಹತ್ವವನ್ನು ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು.

RELATED ARTICLES  ಅಧಿವೇಶನದಲ್ಲಿ ಸದ್ದು ಮಾಡಿದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ.

ಕೃಷಿಕರ ಆದಾಯ ವೃದ್ಧಿಯಲ್ಲಿ ಮೌಲ್ಯ ವರ್ಧಿತ ಕೃಷಿಯ  ಪಾತ್ರ ವಿವರಿಸುತ್ತಾ ಡಾ. ರವಿಶಂಕರ ಭಟ್ಟರವರು ಕೃಷಿ ಉತ್ಪನ್ನವನ್ನು ನೇರವಾಗಿ ಗ್ರಾಹಕರ ಕೈಗೆ ತಲುಪಿಸಿದರೆ ಹೆಚ್ಚು ಲಾಭ ಎನ್ನುತ್ತಾ ಅಂಟುವಾಳ ,ಹಲಸು. ಮುರಗಲು ಬೆಳೆಯ ಮೌಲ್ಯ ವರ್ಧನೆಯ ವಿವಿಧ ಬಗೆಯನ್ನು ತಿಳಿಸಿದರು.

ನ್ಯಾಯವಾದಿ  ವಿದ್ಯಾ ಎಂ. ಶಾನಭಾಗ ಇವರು ಹವ್ಯಕ ಮಹಿಳೆಯರ ವೈವಾಹಿಕ ಸಮಸ್ಯೆಗಳು ಮತ್ತು ಪರಿಹಾರ ವಿಷಯದ ಬಗ್ಗೆ ಚರ್ಚಿಸುತ್ತ ಕನಿಷ್ಠ ಹತ್ತು ವರ್ಷದವರೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರು ಸುಸಂಸ್ಕೃತರಾಗುತ್ತಾರೆ. ಈಗ ಮಹಿಳೆಯರು ಮನೆಯ ಒಳಗೂ ಹೊರಗೂ ದುಡಿಯುವುದರಿಂದ ಕುಟುಂಬದ ಸದಸ್ಯರ ಸಹಕಾರ ಅವಶ್ಯವಾಗಿದೆ ಎಂದರು.

RELATED ARTICLES  ಪಾವನಿ ನಾಯ್ಕ ರಾಜ್ಯಮಟ್ಟಕ್ಕೆ ಆಯ್ಕೆ.

ಮಧ್ಯಾಹ್ನದ ಸುಗ್ರಾಸ ಭೋಜನದ ನಂತರ ಮುಂದುವರಿದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆಯಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ದೈಹಿಕ ನಿರ್ದೇಶಕ ಪ್ರೊ. ಜಿ. ಡಿ ಭಟ್ಟ  ಇವರಿಗೆ ಸಂಘದಿಂದ ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ಏರ್ಪಟ್ಟ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹವ್ಯಕ ಮಹಿಳಾ ಘಟಕದ ಮುಖ್ಯಸ್ಥೆ ವಸುಧಾ ಶಾಸ್ತ್ರಿ ಹಾಗೂ ಆಹ್ವಾನಿತ ಅತಿಥಿಗಳು ಬಹುಮಾನ ವಿತರಿಸಿದರು.

ದೆಹಲಿ ದೂರದರ್ಶನ ಕಲಾವಿದೆ ಶ್ರೀಮತಿ ದೀಪ್ತಿ ಹೆಗಡೆಯವರ ಭರತನಾಟ್ಯ ಹಾಗೂ ಶ್ರೀ ಮಂಗಲ ಮೂರ್ತಿ ಕಲಾ ಬಳಗ ಕುಮಟಾ ಇವರ ಯಕ್ಷಗಾನ ಲವ ಕುಶ ನೆರೆದ ೫೦೦ ಕ್ಕೂ ಹೆಚ್ಚು ಜನರನ್ನು ರಂಜಿಸಿತು . ಹವ್ಯಕ ವಿದ್ಯಾವರ್ಧಕ ಸಂಘ ಕುಮಟಾದ ಅಧ್ಯಕ್ಷ ಡಾ. ಶ್ರೀಕಾಂತ ಹೆಗಡೆ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶ್ರೀಕಾಂತ ಭಟ್ಟ ತರಂಗ ನಿರೂಪಿಸಿ ವಂದಿಸಿದರು.