ಕುಮಟಾ : ಬಡ ಕುಟುಂಬದ ಆಸರೆಯಾಗಿದ್ದ ತಾಲೂಕಿನ ಹಳಕಾರ ಗ್ರಾ.ಪಂ ವ್ಯಾಪ್ತಿಯ ೨೦ ವರ್ಷದ ಜನಾರ್ಧನ ಮಾರುತಿ ಮುಕ್ರಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗೀಸ್ ನೇತೃತ್ವದಲ್ಲಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಕೇವಲ ೨೦ ವರ್ಷ ವಯಸ್ಸಿನ ಮಾರುತಿ ಮುಕ್ರಿ ಅವರ ಕರುಳ ಕುಡಿ ಜನಾರ್ಧನ ಮಾರುತಿ ಮುಕ್ರಿ ಈತ ಕಳೆದ ೪ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ. ಇವರಿಗೆ ಪ್ರತಿ ೧೫ ದಿನಕ್ಕೆ ಮಣಿಪಾಲ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆಯಲು ೮,೩೦೦ ರು. ಖರ್ಚು ಮಾಡಬೇಕು. ೩ ತಿಂಗಳಿಗೊಮ್ಮೆ ರಕ್ತ ಪರೀಕ್ಷೆಗಾಗಿ ೭ ಸಾವಿರ ರು. ಖರ್ಚು ಮಾಡಬೇಕು. ಇವರಿಗೆ ಇಲ್ಲಿಯ ತನಕ ಸರ್ಕಾರದಿಂದ ಚಿಕಿತ್ಸಾ ವೆಚ್ಚಕ್ಕೂ ಯಾವುದೇ ಹಣ ಸಿಕ್ಕಿಲ್ಲ. ಕಡು ಬಡವರಾದ ಇವರು ವರ್ಷಕ್ಕೆ ಲಕ್ಷಾಂತರ ರು. ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಇವರ ಈ ಸಂಕಷ್ಟವನ್ನು ಆಲಿಸಿ ಸೂಕ್ತ ಪರಿಹಾರ ಮತ್ತು ಚಿಕಿತ್ಸಾ ವೆಚ್ಚ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಆರ್ಥಿಕವಾಗಿ ಬಡವರಾಗಿರುವ ಈತನ ಕುಟುಂಬಿಕರು ಆತನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತಿಲ್ಲ. ಖರ್ಚು ವೆಚ್ಚವನ್ನು ತೂಗಿಸಲು ಸಾಧ್ಯವಿಲ್ಲದ ಈತನ ಕುಟುಂಬವು ದಾನಿಗಳ ನಿರೀಕ್ಷೆಯಲ್ಲಿದೆ.
ಈತನಿಗೆ ಸಹಾಯ ಮಾಡಲು ಇಚ್ಛಿಸುವವರು ಹಳಕಾರ ಗ್ರಾ.ಪಂ ವ್ಯಾಪ್ತಿಯ ಪರಮೇಶ್ವರಿ ಮಾರುತಿ ಮುಕ್ರಿ, ಮೊಬೈಲ್ ಸಂಖ್ಯೆ ೯೧೪೮೭೦೨೬೫೬ ಈ ಸಂಖ್ಯೆಗೆ ಕರೆ ಮಾಡಿ ಆರ್ಥಿಕ ಸಹಾಯ ಕಳುಹಿಸಬಹುದಾಗಿದೆ ಎಂದು ಜನಾರ್ಧನ ಅವರ ತಾಯಿ ಪರಮೇಶ್ವರಿ ವಿನಂತಿಸಿಕೊಂಡಿದ್ದಾರೆ.