ಕುಮಟಾ : ಮನೆಗಳಿಗೆ, ಅಂಗಡಿಗಳಿಗೆ, ಎಟಿಎಂ ನಲ್ಲಿ ಕನ್ನ ಹಾಕುವುದು ಸಾಮಾನ್ಯ ಎಂಬಂತಾಗಿದ್ದು, ಇದೀಗ ಬಸ್ ರಶ್ ಆಗುವುದನ್ನೇ ಬಳಸಿಕೊಂಡು ವೇಷಮರೆಸಿಕೊಂಡು ಬಂದು ಹಣ ಚಿನ್ನ ಎಗರಿಸುವ ಕಿರಾತಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಇಬ್ಬರು ಬುರ್ಕಾಧಾರಿಗಳು ಜಾಗ ನೀಡುವ ನೆಪದಲ್ಲಿ ಸರಗಳ್ಳತನ ಮಾಡಿದ ಸುದ್ದಿ ಹಸಿಯಾಗಿ ಇರುವಾಗಲೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಇದು ಕುಮಟಾ ಪೊಲೀಸರಿಗೆ ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. 

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಇಬ್ಬರು ಬುರ್ಕಾ ಧರಿಸಿದ ಹೆಂಗಸರು ಮಹಿಳೆಯ ಕೊರಳಲ್ಲಿದ್ದ ಹವಳದ ಬಂಗಾರದ ಸರವನ್ನು ಕಳುವುಮಾಡಿರುವ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಾವರ ತಾಲೂಕಿನ ಹಳದೀಪುರ ದೇವಸ್ಥಾನಕೇರಿಯ ವಿನಯಾ ಉಮೇಶ ಶಾನಭಾಗ ಸರ ಕಳೆದುಕೊಂಡು ವಂಚನೆಗೆ ಒಳಗಾದವರಾಗಿದ್ದಾರೆ. ಇವರು ಕುಮಟಾ ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣದಿಂದ ಮೂರುಕಟ್ಟೆ ಕಡೆಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಸಿಕೊಂಡು ಹೋಗುತ್ತಿದ್ದರು. ಅದೇ ಬಸ್ಸಿನಲ್ಲಿ ವಿನಯಾ ಅವರ ಹಿಂದೆ ಮತ್ತು ಮುಂದೆ ನಿಂತುಕೊಂಡು ಪ್ರಯಾಣಿಸಿಕೊಂಡು ಹೋಗುತ್ತಿದ್ದ ಇಬ್ಬರು ಬುರ್ಕಾ ಧರಿಸಿದ್ದ ಮಹಿಳೆಯರು ವಿನಯಾ ಅವರ ಗಮನಕ್ಕೆ ಬಾರದಂತೆ ಕೊರಳಲ್ಲಿದ್ದ ಹವಳದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. 

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.

ಈ ಬಗ್ಗೆ ವಿನಯಾ ಶಾನಭಾಗ ಅವರು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಕಳೆದ ಎರಡು ದಿನದ ಹಿಂದಷ್ಟೇ ಬಸ್ ನಲ್ಲಿ ಪ್ರಯಾಣಿಸುವಾಗ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಕಡ್ಲೆ ಗ್ರಾಮದ ನಿವಾಸಿ ವಿಮಲಾ ವಿಷ್ಣು ನಾಯ್ಕ (೭೨) ಮಾಂಗಲ್ಯ ಸರ ಕಳೆದುಕೊಂಡಿದ್ದರು.

ಬಸ್‌ನಲ್ಲಿ ಹೆಚ್ಚುತ್ತಿದೆ ಸರಗಳ್ಳತನ? 

ಮನೆ, ಅಂಗಡಿ, ಬೈಕ್ ಮೂಲಕ ಆಗಮಿಸುವ ಆಗಂತುಕರು ಮಾಂಗಲ್ಯ/ ಚಿನ್ನದ ಸರ ಹುಸಿದು ಪರಾರಿಯಾಗುವ ಪ್ರಕರಣವನ್ನು ಸಾಮಾನ್ಯವಾಗಿ ಕೇಳಿದ್ದೇವೆ. ಆದರೆ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದಾಗಿನಿಂದ ವಂಚಕರು ನಾನಾ ರೀತಿಯಲ್ಲಿ ಹಣ, ಒಡವೆಗಳನ್ನು ದೋಚುವ ಕುಕೃತ್ಯಕ್ಕೆ ಅಣಿಯಾಗುತ್ತಿರುವುದು ಇದೀಗ ಮಹಿಳೆಯರಿಗೂ ತಲೆನೋವಾಗಿ ಪರಿಣಮಿಸಿದೆ. ಉಚಿತ ಬಸ್ ಪ್ರಯಾಣದಲ್ಲಿ ಅದರಲ್ಲೂ ದೂರದ ಪ್ರಯಾಣದಲ್ಲಿ ಜನ ಕಿಕ್ಕಿರಿದು ಪ್ರಾಣಿಸುತ್ತಾರೆ. ಈ ಸನ್ನಿವೇಶಗಳು ಕಳ್ಳರಿಗೆ ಅನುಕೂಲವನ್ನುಂಟು ಮಾಡಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಮಾರು ವೇಶದಲ್ಲಿ, ಬುರ್ಕಾ ಧರಿಸುವ ವೇಶದಲ್ಲಿಯೂ ಮಹಿಳೆಯರ ಕೊರಳಲ್ಲಿದ್ದ ಚಿನ್ನಾಭರಣ, ಕಿರುಕುಳ ನೀಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದನ್ನು ಅನುಭವಿಸಿದವರಿಗೆ ತೀವ್ರ ಆಘಾತವೂ ಎದುರಾಗಿದೆ. 

RELATED ARTICLES  ಡಿ. ೨೪ ಕ್ಕೆ ಪಂ.ಷಡಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ.

ಚಿನ್ನ, ಆಭರಣ ಮಾತ್ರವಲ್ಲ ಬಸ್ ತುಂಬಾ ಜನರು, ಉಸಿರಾಡಲೂ ಆಗದ ರೀತಿ ಇರುವಾಗ ಕೆಲವರು ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ದೈಹಿಕವಾಗಿಯೂ ಉಪದ್ರವ ಕೊಡುತ್ತಾರೆಂಬ ಸತ್ಯವನ್ನೂ ಹಲವು ಮಹಿಳೆಯರು ಬಿಚ್ಚಿಟ್ಟಿದ್ದಾರೆ. ಸಾರಿಗೆ ಇಲಾಖೆ ಹಾಗೂ ಘಟಕ ವ್ಯವಸ್ಥಾಪಕರು ಒಂದು ಬಸ್‌ನಲ್ಲಿ ನಿಯಮಾನುಸಾರ ಪ್ರಯಾಣಿಕರನ್ನು ಸಾಗಿಸಬೇಕು. ಹೆಚ್ಚುವರಿಯಾಗಿ ಯಾರೊಬ್ಬರನ್ನೂ ಬಸ್‌ನಲ್ಲಿ ಸೇರಿಸದೇ ಸುಖಕರ ಪ್ರಯಾಣ ಬೆಳೆಸಲು ಅನುವುಮಾಡಿಕೊಡಬೇಕು. ಮಹಿಳೆಯರ ಮೇಲೆ ಬಸ್‌ನ ಚಾಲಕರು ಮತ್ತು ನಿರ್ವಾಹಕರು ನಿಗಾ ವಹಿಸಿ ಮಹಿಳೆಯರಿಗಾಗುವ ಅನ್ಯಾಯವನ್ನು ತಡೆಯಬೇಕು ಎಂದು ನೊಂದ ಮಹಿಳೆಯೊಬ್ಬರು ಪತ್ರಿಕೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಚಿತ ಬಸ್ ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಜೊತೆಗೆ ಇಲಾಖೆಯೂ ಕ್ರಮಕ್ಕೆ ಮುಂದಾಗಬೇಕಿದೆ. ಒಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಪ್ರಯಾಸವೋ, ಕಂಟಕ, ಸಂಕಟವೋ ಆಗದೆ ನೆಮ್ಮದಿ ತರಿಸಲಿ ಎನ್ನುವುದು ನಮ್ಮ ಆಶಯವಾಗಿದೆ.