ಕುಮಟಾ : ಗುಡಿಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ 115 ವರ್ಷ ಪೂರೈಸಿದ್ದು, ಶತಮಾನೋತ್ತರ ಸಂಭ್ರಮ ಕಾರ್ಯಕ್ರಮವು ಫೆ. ೧೯ರಿಂದ ೨೧ರ ವರೆಗೆ ನಡೆಯಲಿದೆ ಎಂದು ಶತಮಾನೋತ್ತರ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಬಾಬಾ ಪೈ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಶಾಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ. ಈಗ ಪಾಲಕರು, ಶಿಕ್ಷಣ ಪ್ರೇಮಿಗಳೆಲ್ಲರೂ ಸೇರಿ ಶತಮಾನೋತ್ತರ ಸಂಭ್ರಮ ಕಾರ್ಯಕ್ರಮವನ್ನು ವಿಜೃಂಭಣೆಯಿದ ಸಂಘಟಿಸಲು ಸಂಕಲ್ಪ ಮಾಡಿದ್ದಾರೆ. ಇದನ್ನು ಒಂದು ಮಾದರಿ ಕಾರ್ಯಕ್ರಮವಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಗ್ರಾಮಸ್ಥರು ಸ್ಥಳೀಯ ಎಲ್ಲ ಸಮಿತಿಯ ಸದಸ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಶತಮಾನೋತ್ತರ ಸಮಿತಿ ಅಧ್ಯಕ್ಷ ದೇವಿದಾಸ ಶೇಟ್ ಮಾತನಾಡಿ, ಫೆ. ೧೯ರಂದು ನಡೆಯುವ ಮೊದಲ ದಿನದ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಬಹುಮಾನ ವಿತರಣೆ ನಡೆಸಲಿದ್ದಾರೆ. ಉದ್ಯಮಿ ಸುಬ್ರಾಯ ವಾಳ್ಕೆ ಸನ್ಮಾನ ಕಾರ್ಯಕ್ರಮ ನೆರವೇರಿಸುವರು.

RELATED ARTICLES  ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಬೆಂಕಿ ; ಮನೆ ಸುಟ್ಟು ಕರಕಲು

ನಂತರ ಫೆ. ೨೦ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಶಾಂತಿಕಾ ಪರಮೇಶ್ವರಿ ದೇವಿಯ ಧರ್ಮದರ್ಶಿ ಕೃಷ್ಣಾ ಬಾಬಾ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳೀನಕುಮಾರ ಕಟೀಲು ಹಸ್ತಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ , ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಖ್ಯಾತ ವಾಗ್ಮಿ ಮನು ಹಂದಾಡಿ ಸೇರಿದಂತೆ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಫೆ.೨೧ರ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ದೇವಿದಾಸ ಶೇಟ್ ಅಧ್ಯಕ್ಷತೆ ವಹಿಸಲಿದ್ದು, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಡಾ. ಎಂ ಡಿ ನಾಯ್ಕ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಡಾ. ಪ್ರಭಾಕರ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿವಿಧ ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಿದ್ದಾರೆ ಎಂದರು.

RELATED ARTICLES  ಜನಾರ್ಧನ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆ.

ಇದೇ ಸಂದರ್ಭದಲ್ಲಿ ಶಿಕ್ಷಕ ಮಂಜುನಾಥ ನಾಯ್ಕ ಅವರು ಶಾಲೆ ನಡೆದುಬಂದ ಹಾದಿಯನ್ನು ವಿವರಿಸುತ್ತಾ, ಪ್ರಾರಂಭಿಕ ಹಂತದಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಮಹಡಿಯ ಮೇಲೆ ನಡೆಯುತ್ತಿದ್ದ ಶಾಲೆ, ನಂತರ ಖಾಸಗಿ ವ್ಯಕ್ತಿಯೋರ್ವರ ಮನೆಯ ಮೇಲ್ಗಡೆಯಲ್ಲಿ ನಡೆಯುತ್ತಿತ್ತು. ಇದೀಗ ಸುಸಜ್ಜಿತ ಕಟ್ಟಡವನ್ನು ಹೊಂದಿ ಸುತ್ತಮುತ್ತಲ ಶಿಕ್ಷಣಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಲಾ ಮುಖ್ಯಾಧ್ಯಾಪಕ ಡಿ.ಎಂ ಬಂಟ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ ಶೇಟ್, ಶತಮಾನೋತ್ಸವ ಸಮಿತಿಯ ಪ್ರಮುಖರಾದ ಮಂಜುನಾಥ ರಾಯ್ಕರ್, ಎಂ.ಎಸ್ ನಾಯ್ಕ, ಸಂತೋಷ ನಾಯ್ಕ, ಜಯದೇವ ಬಳಗಂಡಿ ಹಾಗೂ ಇತರರು ಇದ್ದರು.