ಹೊನ್ನಾವರ : ಪಟ್ಟಣದ ಶರಾವತಿ ವೃತ್ತದ ಸಮೀಪ ಇಂದು ಭಾರತ್ ರೈಸ್ ವಿತರಣೆ ನಡೆಯಿತು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ (ನಾಫೆಡ್) ಸಂಚಾರಿ ವಾಹನಗಳ ಮೂಲಕ ‘ಭಾರತ್ ಬ್ರಾಂಡ್’ ಅಕ್ಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹೊನ್ನಾವರಕ್ಕೆ ಆಗಮಿಸಿದ ಭಾರತ್ ಅಕ್ಕಿಯನ್ನು ಖರೀಧಿಸಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು.
ಏನಿದು ಭಾರತ್ ಅಕ್ಕಿ?
ಕಳೆದ ವರ್ಷದಿಂದ ಚಿಲ್ಲರೆ ಅಕ್ಕಿ ಬೆಲೆಯಲ್ಲಿ 15% ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಮತ್ತು ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪರಿಹಾರ ನೀಡಲು ಸರ್ಕಾರ ‘ಭಾರತ್ ಅಕ್ಕಿ’ ಪರಿಚಯಿಸಿದೆ. ಸರ್ಕಾರವು ಒಂದು ಕೆಜಿ ಅಕ್ಕಿಗೆ 29 ರೂಪಾಯಿ ಸಬ್ಸಿಡಿ ದರದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಅಕ್ಕಿಯ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಆಹಾರದ ಮಾರುಕಟ್ಟೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.
ಭಾರತ್ ರೈಸ್ ಬೆಲೆ?
ದೇಶದಲ್ಲಿ ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತ್ ರೈಸ್ , ಭಾರತ್ ದಾಲ್, ಭಾರತ್ ಗೋಧಿ ಹಿಟ್ಟಿನ ಬಳಿಕ ಇದೀಗ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ಸಿಕ್ಕಿದೆ. ಆಹಾರ ಸಚಿವ ಪಿಯೂಷ್ ಗೋಯಲ್ ಅವರು ಫೆ. 06 ರಿಂದ ‘ಭಾರತ್’ ಅಕ್ಕಿ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದರ ಜೊತೆಗೆ ಮೊಬೈಲ್ ವ್ಯಾನ್‌ಗಳನ್ನು ಉದ್ಘಾಟಿಸಿದ್ದಾರೆ.
ಅಕ್ಕಿ ಪಡೆಯಲು ಏನು ಬೇಕು?
ಒಂದು ಮೊಬೈಲ್ ನಂಬರ್ / ಒಬ್ಬ ವ್ಯಕ್ತಿಗೆ ಒಂದು ಬ್ಯಾಗ್ ಅಕ್ಕಿ (10 ಕೆ.ಜಿ) ಪ್ರತೀ ಕೆ.ಜಿ ಗೆ 29 ರೂ ನಂತೆ 290 ರೂ. ನೀಡಿ ಖರೀಧಿ ಮಾಡಬಹುದು. ಇದಕ್ಕೆ ಮೊಬೈಲ್ ನಂಬರ್ ನೀಡಿ ಒಂದು ರಸೀದಿಯನ್ನು ಪಡೆದು ಅಕ್ಕಿಯನ್ನು ಖರೀದಿ ಮಾಡುವ ವ್ಯವಸ್ಥೆಯನ್ನು ಕುಮಟಾದಲ್ಲಿ ಕೈಗೊಳ್ಳಲಾಗಿದೆ.