ಕುಮಟಾ : ಕೀರ್ತನಾಕಾರೆಂದು ಕರೆಯಲ್ಪಡುವ ಅಂದರೆ ಹರಿಕಥೆ ಪ್ರಸ್ತುತಪಡಿಸುವವರಿಗೆ ದಾಸ ಎಂಬ ಅಭಿದಾನ ದೊರೆಯುವುದು ಬಹುದೊಡ್ಡ ಗೌರವವಾಗಿದೆ. ಆ ಗೌರವಕ್ಕೆ ಪಾತ್ರರಾದವರು ಹೊಳೆಗದ್ದೆಯ ದತ್ತಾತ್ರೇಯ ಗೋಪಾಲ ನಾಯ್ಕ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ ಹೇಳಿದರು. ಹೊಳೆಗದ್ದೆಯ ಶಾಂತಿಕಾಂಬಾ ಸಭಾಭವನದಲ್ಲಿ ಜಿಲ್ಲಾ ಮತ್ತು ತಾಲೂಕಾ ಸಾಹಿತ್ಯ ಪರಿಷತ್ತು ಏರ್ಪಡಿಸಿದ ದಿವಂಗತ ದತ್ತಾತ್ರೇಯ ಗೋಪಾಲ ನಾಯ್ಕರವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ದತ್ತಾತ್ರೇಯ ನಾಯ್ಕ ಕಥೆಗೆ ಪೂರಕವಾಗುವಂತಹ ನೀತಿ ಕಥೆಗಳು, ದೃಷ್ಟಾಂತಗಳು, ಸೂಕ್ತಿಗಳು, ಶುಭಾಷಿತಗಳು ಎಲ್ಲವನ್ನೂ ತಿಳಿದ ಅಪ್ಪಟ ಗ್ರಾಮೀಣ ಸೊಗಡಿನ ದಾಸರನಿಸಿಕೊಂಡ ಸರಳ ಸಜ್ಜನರಾಗಿದ್ದರು. ದಾಸ ಪರಂಪರೆಯ ದೊಡ್ಡ ಕೊಂಡಿಯೊಂದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾಗಿರುವುದು ವಿಪರ್ಯಾಸ. ಹೊಳೆಗದ್ದೆಯು ಬಹುದೊಡ್ಡ ಹರಿಕೀರ್ತನಾ ಸಾಧಕರನ್ನು ಕಳೆದುಕೊಂಡಂತಾಗಿದೆ ಎಂದು ಅವರು ನುಡಿ ನಮನ ಸಲ್ಲಿಸಿದರು.
ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಭಟ್ಟ ಸುವರ್ಣಗದ್ದೆ ಮಾತನಾಡಿ, ದತ್ತಾತ್ರೇಯ ನಾಯ್ಕರವರ ಸೇವೆಯೇ ಬದುಕಿನ ಒಂದು ಭಾಗವಾಗಿತ್ತು. ಮಡುಗಟ್ಟಿದ ಆತ್ಮೀಯತೆಗೆ ಹೆಸರಾಗಿದ್ದ ಅವರು ಕೀರ್ತನ ಪ್ರಪಂಚವನ್ನು ಮುಂದಿನ ಪೀಳಿಗೆಗೆ ದಾಟಿಸುವ ಮೊದಲೇ ಬದುಕಿನ ಅಂತ್ಯ ಕಂಡಿದ್ದು ತುಂಬಾ ವಿಷಾದನೀಯ ಎಂದರು. ಇಂದಿನ ಮಕ್ಕಳಿಗೆ ಹರಿ ಕೀರ್ತನೆ ಆಲಿಸುವ ಮತ್ತು ತಮ್ಮದಾಗಿಸಿಕೊಳ್ಳುವ ಅಗತ್ಯತೆ ಇತ್ತು ಎಂದರು.
ಪ್ರಾಧ್ಯಾಪಕ ಅಶೋಕ ನಾಯ್ಕ ಮಾತನಾಡಿ, ಯಾರಿಗೆ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರುತ್ತದೆಯೋ ಅವರಿಂದ ಉತ್ತಮ ಫಲ ನಿರೀಕ್ಷಿಸಲು ಸಾಧ್ಯ. ಅಂತಹ ಬದುಕಿಗೆ ತನ್ನನ್ನು ತಾನು ತೆರೆದುಕೊಂಡ ದತ್ತಾತ್ರೇಯ ನಾಯ್ಕರವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿತ್ತು ಎಂದರು.
ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಊರ ಪ್ರಮುಖ ವಿ.ಜಿ.ಹೆಗಡೆ ಸಂದರ್ಭೊಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪಾಂಡುರಂಗ ಪಟಗಾರ, ದೇವೇಂದ್ರ ಶೇರುಗಾರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜು ನಾಯ್ಕ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಪಿ.ಎಂ.ಮುಕ್ರಿ, ಉದ್ಯಮಿ ರಾಮದಾಸ ಪೈ, ಜೆ. ಕೆ. ನಾಯ್ಕ,ಗಣಪತಿ ಹೊಳೆಗದ್ದೆ, ನಿರಂಜನ್ ವೈದ್ಯ,ಎಂ.ಎಸ್. ನಾಯ್ಕ ,ಮಾಧವ ಪೈ, ಎ. ವಿ.ನಾಯ್ಕ,ರಾಮಣ್ಣ, ಎನ್. ಜೆ. ನಾಯ್ಕ,ಗಣಪತಿ ನಾಯ್ಕ, ಪಾಂಡು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.