ರಾಜ್ಯದ ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಸೋಮವಾರ ಒಂದೇ ದಿನ 13 ಜನರಿಗೆ ಸೋಂಕು ದೃಢಪಟ್ಟಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ 63 ಜನರನ್ನು ಮಂಗನ ಕಾಯಿಲೆ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದೆ.
ಶಿವಮೊಗ್ಗದಲ್ಲಿ 42 ಮಂದಿಯನ್ನು ಕಳೆದ 24 ಗಂಟೆಯಲ್ಲಿ ಮಂಗನ ಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಇವರಲ್ಲಿ 6 ಜನರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಚಿಕ್ಕಮಗಳೂರಲ್ಲಿ 21 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 7 ಜನರಿಗೆ ದೃಢಪಟ್ಟಿದೆ ಎಂದು ತಿಳಿಸಿದೆ.
ಇದುವರೆಗೆ 3220 ಮಂದಿಯನ್ನು ಮಂಗನ ಖಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, 89 ಜನರಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ 63 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 24 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದೆ.