ಕುಮಟಾ ; ಶ್ರೀ ಶಾಂತಿಕಾ ಪರಮೇಶ್ವರಿ ಸಭಾಮಂಟಪ ದೇವರಹಕ್ಕಲದಲ್ಲಿ ಕಲಾಗಂಗೋತ್ರಿ ಬಳಗದವರಿಂದ ಖ್ಯಾತ ಮಹಿಳಾ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯಕ್ಷಗಾನ ಕಲಾವಿದರಾದ ರಮೇಶ ಭಂಡಾರಿ ಅವರು ಮಾತನಾಡಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕು ಎನ್ನುತ್ತಾ ವೇದಿಕೆಯ ಮೇಲೆ ನಾಗರಾಜ ನಾಯಕ ತೊರ್ಕೆ ಹಾಗೂ ರವಿಕುಮಾರ ಶೆಟ್ಟಿಯಂತಹ ಎರಡು ಹುಲಿಗಳ ಮಧ್ಯ ಕುಳಿತಿರುವ ಅನುಭವವಾಗುತ್ತಿದ್ದು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿ ಸಿರಿಕಲಾಮೇಳಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರವಿಕುಮಾರ ಶೆಟ್ಟಿ ಮಾತನಾಡಿ ಕಲಾಗಂಗೋತ್ರಿ ಬಳಗ ಯಕ್ಷಗಾನದ ಕೊಡುಗೆಯನ್ನು ಅನೇಕ ವರ್ಷಗಳಿಂದ ನೀಡುತ್ತಿದ್ದಾರೆ. ಸಿರಿಕಲಾ ಮೇಳ ಬೆಂಗಳೂರು ಇವರು ಕಳೆದ ವರ್ಷ ಕುಮಟಾ ಉತ್ಸವದಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ನುಡಿದು ಅವರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಇಂದು ಕಲಾಗಂಗೋತ್ರಿ ಬಳಗದ ಆಶ್ರಯದಲ್ಲಿ ಖ್ಯಾತ ಮಹಿಳಾ ಕೂಟವನ್ನು ಹೊಂದಿರುವ ಸಿರಿಕಲಾಮೇಳ ಯಕ್ಷಗಾನದ ರಸದೌತಣವನ್ನು ನೀಡುತ್ತಿದೆ. ಈ ಮೇಳವು ಕಳೆದ 5 ವರ್ಷಗಳಿಂದ ನೀಡುತ್ತಿರುವ ಅನೇಕ ಪ್ರದರ್ಶನಗಳನ್ನು ವೀಕ್ಷಿಸಿ ನಾನು ಸಹ ಈ ಮೇಳದ ಅಭಿಮಾನಿಯಾಗಿದ್ದೇನೆ. ಇಲ್ಲಿ ಪಾತ್ರ ನಿರ್ವಹಿಸುವ ನಾಗಶ್ರೀ, ಅರ್ಪಿತಾ ಹೆಗಡೆ, ನಿಹಾರಿಕಾ, ಕಿರಣ ಪೈ, ಇವರು ಯಕ್ಷಗಾನದ ಅನೇಕ ಮಜಲುಗಳನ್ನು ಅಭ್ಯಸಿಸಿ ಪ್ರಯತ್ನಪಟ್ಟು ಪರಿಪೂರ್ಣ ಕಲಾವಿದರಾಗಿ ಮಾರ್ಪಟ್ಟಿದ್ದು ಸಿರಿ ಕಲಾಮೇಳ ಇಂತಹ ಕೂಟವನ್ನು ನಾಡಿಗೆ ನೀಡಿದ ಕೊಡುಗೆ. ಕಲಾಗಂಗೋತ್ರಿ ಬಳಗದವರು ಸಹ ಈ ಭಾಗದ ಜನರಿಗೆ ವಿವಿಧ ಅವತರಣಿಕೆಗಳನ್ನು ನೀಡುತ್ತಾ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತೆಯೇ ಕೆಲವೇ ದಿನಗಳ ಹಿಂದೆ ನಮ್ಮನ್ನಗಲಿದ ಏಕಮೇವಾದ್ವಿತೀಯ, ಪದ್ಮಶ್ರೀ ಪ್ರಶಸ್ತಿ ಪರಸ್ಕøತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ನೆನಪಿಸಿಕೊಳ್ಳುತ್ತಾ ಅವರು ಅಸಾಮಾನ್ಯ ಕಲಾವಿದರಲ್ಲದೇ ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಅವರ ಕೊಡುಗೆ ಯಕ್ಷರಂಗಕ್ಕೆ ಅಪಾರವಾದದ್ದು. ಯಕ್ಷರಂಗಕ್ಕೆ ಹೊಸ ಭಾಷ್ಯ ಬರೆದ ಅಪ್ರತಿಮ ಕಲಾವಿದರವರು ಎಂದು ನುಡಿದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರ ಸವಿನೆನಪಿಗಾಗಿ ಯಕ್ಷರಂಗಕ್ಕೆ ತಮ್ಮ ಕೈಲಾದ ಸೇವೆಯನ್ನು ನಾವೆಲ್ಲ ಮಾಡೋಣ ಎಂದರು.
ಈ ಕಾರ್ಯಕ್ರಮದಲ್ಲಿ ಆರ್. ಡಿ. ಪೈ. ಸ್ವಾಗತಿಸಿದರು. ಕಲಾಗಂಗೋತ್ರಿ ಬಳಗದ ಶ್ರೀಧರ ನಾಯ್ಕ ಅಧ್ಯಕ್ಷೀಯ ಭಾಷಣ ಮಾಡಿದರು. ಗಣೇಶ ಭಟ್ ವಂದಿಸಿದರು. ಎಮ್. ಟಿ ನಾಯ್ಕ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಧುಸೂದನ ಶೇಟ್, ರಮೇಶ ಪಾಂಡುರಂಗ ಪ್ರಭು, ಚೇತನ ಡಿ. ಶೇಟ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.