ಸಿಎಂ ಸಿದ್ದರಾಮಯ್ಯ 15ನೇ ಬಾರಿಗೆ ಬಜೆಟ್‌ ಮಂಡನೆ ಮಾಡ್ತಿದ್ದಾರೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಜೆಟ್‌ ಮಂಡನೆ ಮಾಡುತ್ತಿರುವುದರಿಂದ ಸಹಜವಾಗಿ ಭಾರಿ ನಿರೀಕ್ಷೆಯಿತ್ತು. ಇದರ ನಡುವೆ ಅನ್ನದಾತರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ ಸಿಕ್ಕಿದೆ. ಕೃಷಿ ಹಾಗೂ ರೈತರ ತೋಳನ್ನ ಬಲ ಪಡಿಸಲು ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಈ ಯೋಜನೆಯಡಿ ರೈತರಿಗೆ ಕೆಳಕಂಡ ವಿಷಯಗಳಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಜಾರಿಗೊಳಿಸಲಾಗಿದೆ. ಈ ಯೋಜನೆಗೆ 2023-24ನೇ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಈ ಯೋಜನೆಯನ್ನು ಮುಂದುವರೆಸಲಾಗುವುದು . ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 2024ರ ರಾಜ್ಯ ಬಜೆಟ್‌ನಲ್ಲಿ ನಮ್ಮ ಮಿಲ್ಲೆಟ್ ಎಂಬ ಹೆಸರಿನ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಅಗ್ರಿ-ಟೆಕ್ ಕಂಪನಿಗಳು ಮತ್ತು ರಿಟೇಲ್ ಚೈನ್ಸ್‌ಗಳ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ದೊರಕಿಸಲು ಅನುವು ಮಾಡಿಕೊಡಲಾಗುವುದು. ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಿದೆ.

RELATED ARTICLES  ತೆರೆಯಲಿದೆ ಯಡಿಯೂರಪ್ಪಜೀ ಕ್ಯಾಂಟೀನ್ : 5ರೂ ಗೆ ಊಟ ಉಪಹಾರ!