ಶಿರಸಿ:- ಉಸ್ತುವಾರಿ ಸಚಿವ ಮಂಕಾಳ ವೈದ್ಯರೆ ನಿಮ್ಮ ಸರ್ಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ ,ಉತ್ತರ ಕನ್ನಡದ ಜನ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ, ನಮ್ಮ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಇದರ ಪರಿಣಾಮ ಮುಂದಿನ ದಿನದಲ್ಲಿ ನೋಡುವಿರಿ, ಜನರಿಗೆ ಅಸ್ಪತ್ರೆ ಕೊಡಿಸಲು ವಿಫಲರಾದ ತಾವು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರೇ, ತಮಗೆ ಒಂದು ಪ್ರಶ್ನೆ,
ತಮಗೆ ಜನರ ಬಗ್ಗೆ ಕರುಣೆ ಇಲ್ಲವೇ? ಸರಕಾರ ಬಂದು 9 ತಿಂಗಳಾದರೂ ಅಸ್ಪತ್ರೆ ಬಗ್ಗೆ ಒಂದೇ ಒಂದು ಸಭೆ ಇಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಇಲ್ಲ,
ತಮಗೆ ಲಾಭ ಆಗುವ ಯೋಜನೆಗೆ ಸಾವಿರಾರು ಕೋಟಿ ಕೊಡುತ್ತೀರಿ, ಆಸ್ಪತ್ರೆಗೆ ಒಂದು ರೂಪಾಯಿ ಕೂಡ ಇಲ್ಲ, ಅಲ್ಲಿಗೆ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಅಂತ ನಮಗೆ ಮನವರಿಕೆಯಾಗಿದೆ. ಜನ ರಕ್ತದ ಮಡುವಿನಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುವಾಗ ಪಡುವ ನೋವು, ಅಸ್ಪತ್ರೆಗಾಗಿ ಮಂಗಳೂರಿಗೆ ಹೋಗುವಾಗ ಪಡುವ ಕಷ್ಟ, ನಿಮ್ಮ ಸರಕಾರವನ್ನು ಶಾಪ ಹಾಕದೇ ಬಿಡುವುದಿಲ್ಲ. ಕಳೆದ 2 ಬಜೆಟ್ ನಲ್ಲಿ ಹಣ ಕೊಡದೇ ತಮಾಷೆ ಮಾಡುತ್ತಿದ್ದೀರಿ ಅಲ್ಲವೇ ?
ಎಂದು ಪ್ರಶ್ನಿಸಿದ್ದಾರೆ.
ಇಷ್ಟು ಹೋರಾಟ ಆದರೂ ಒಂದೇ ಒಂದು ಮಾತನಾಡದ ನೀವು ಶಾಸಕನಾಗಿ ಆಯ್ಕೆಯಾದರೆ ಸ್ವಂತ ಹಣದಿಂದ ಅಸ್ಪತ್ರೆ ಮಾಡುತ್ತೇನೆ ಎಂದು ಸೀರಿಯಸ್ಸಾಗಿ ಹೇಳಿದ್ದೀರಾ ಅಥವಾ ತಮಾಷೆ ಮಾಡಿದ್ದೀರಾ? ತಿಳಿಸಿ. ಅಸ್ಪತ್ರೆ ಮಾಡುವುದಿಲ್ಲ ಅಂತ ಆದರೆ ಹೇಳಿಬಿಡಿ, ನಮಗೆ ಏನು ಮಾಡಬೇಕೆಂದು ಗೊತ್ತಿದೆ.
ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮದಲ್ಲಿ ಓಡಾಡಿ ಜನಾಂದೋಲನ ನಿರ್ಮಾಣ ಮಾಡಿ, ನಿಮ್ಮ ರಾಜೀನಾಮೆ ಮತ್ತು ಅಸ್ಪತ್ರೆ ನಿರ್ಮಾಣಕ್ಕೆ ಹೋರಾಟ ಮಾಡುತ್ತೇವೆ.
ಹೋರಾಟದಿಂದ ಏನಾಗುವುದು ಅಂತ ತಾತ್ಸಾರ ಬೇಡ , ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದೆ ಹೋರಾಟದಿಂದ
ನೆನಪಿಡಿ.
ಹಿಂದಿನ ಸರ್ಕಾರ ಯಾಕೆ ಮಾಡಲಿಲ್ಲ ಅಂತ ಕೇಳಬೇಡಿ, ಅವರು ಮಾಡಿಲ್ಲ ಅಂತಾನೇ ನಿಮಗೆ ಜನ ಅಧಿಕಾರ ಕೊಟ್ಟಿದ್ದಾರೆ , ನಾನು ಏಕಾಂಗಿ ಅಲ್ಲ, ನನ್ನ ಜೊತೆ ಸಾವಿರಾರು ಬಿಸಿ ರಕ್ತದ ಯುವಕರಿದ್ದಾರೆ , ಮುಂದಿನ ದಿನ ಜನರ ಆಕ್ರೋಶದ ಪರಿಣಾಮ ಏನಾಗುತ್ತದೆ ನೋಡಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.