ಬೆಂಗಳೂರು : ದಕ್ಷಿಣ ತಾಲೂಕಿನ ರಾಮಸಂದ್ರದ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದ್ದು, ಅದು ಇಡೀ ಕಾರ್ಖಾನೆಯನ್ನು ಆವರಿಸಿಕೊಂಡಿದ್ದರಿಂದ ಮೂವರು ಕಾರ್ಮಿಕರು ದಹನವಾಗಿದ್ದಾರೆ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಪರ್ಫ್ಯೂಮ್ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಬೆಂಕಿಯು ಇಡೀ ಮನೆಯನ್ನು ಆವರಿಸಿದೆ. ಈ ವೇಳೆ ಮೂವರು ಸಜೀವ ದಹನವಾಗಿದ್ದು, ಉಳಿದ ಐವರು ಹೊರಗಡೆ ಓಡಿ‌ಬಂದಿದ್ದಾರೆ. ಮನೆಯೊಂದರಲ್ಲಿ ಪರ್ಫ್ಯೂಮ್ ಕಾರ್ಖಾನೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರ ಬಗ್ಗೆ ವಿವರ ತಿಳಿದುಬರಬೇಕಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಇಂಡೋನೇಷ್ಯಾದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದ ನಮೋ!